Advertisement

ಆರೋಗ್ಯ ಸುಧಾರಣೆಗೆ ಯೋಗ ಸಹಕಾರಿ

11:45 AM Feb 05, 2020 | Naveen |

ಚಿಕ್ಕಮಗಳೂರು: ಯೋಗ ಬದುಕನ್ನು ಪರಿಷ್ಕರಿಸಿಕೊಳ್ಳಲು ಮೂಲಾಧಾರ. ಯೋಗ ಪ್ರದರ್ಶನಕ್ಕಲ್ಲ ನಿದರ್ಶನಕ್ಕೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಸಿ.ಕುಮಾರ್‌ ಹೇಳಿದರು.

Advertisement

ನಗರದ ಲಯನ್ಸ್‌ ಸೇವಾ ಭವನದಲ್ಲಿ ಪ್ರಬೋಧಿನಿ ಯೋಗ ಶಿಕ್ಷಣ ಟ್ರಸ್ಟ್‌ ಆಯೋಜಿಸಿದ್ದ 108 ಸಾಮೂಹಿಕ ಸೂರ್ಯ ನಮಸ್ಕಾರ, ಸೂರ್ಯ ಯಜ್ಞದ ನಂತರ ರಥಸಪ್ತಮಿ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು. ಮನಸ್ಸು, ಬುದ್ಧಿ, ಶರೀರ, ಪಂಚೇಂದ್ರಿಯಗಳನ್ನು  ತೋಟಿಯಲ್ಲಿಟ್ಟುಕೊಂಡಾಗ ಸಂತೋಷ ಸಹಜವಾಗಿ ನಮ್ಮದಾಗುತ್ತದೆ. ಆರೋಗ್ಯವೂ ನಮ್ಮದಾಗುತ್ತದೆ. ಇವನ್ನೆಲ್ಲಾ ಶುದ್ಧೀಕರಿಸುವ ಕಾರ್ಯ ಯೋಗ, ಧ್ಯಾನ, ವ್ಯಾಯಾಮದಿಂದ ಆಗುತ್ತದೆ. ಯೋಗ ಒಂದು ಕಾಯಕವಾಗಬೇಕು. ಯೋಗ ಒಳ್ಳೆಯ ಮೌಲ್ಯ ತುಂಬಿ ಬದುಕನ್ನು ಸಾರ್ಥಕಗೊಳಿಸುತ್ತದೆ. ಮನಸ್ಸು ಸದಾ ಚಂಚಲ. ಸ್ವಾರ್ಥ ಮೀರಿ ಬದುಕು ಕಟ್ಟಿಕೊಳ್ಳಲು ಯೋಗ ಸಹಕಾರಿ ಎಂದರು.

ಪ್ರಕೃತಿ ಮಾನವನಿಗೆ ಅಮೂಲ್ಯ ಕೊಡುಗೆ ನೀಡಿದೆ. ಹೃದಯ ರಕ್ತವನ್ನು ನಿರಂತರವಾಗಿ ಪಂಪ್‌ ಮಾಡುತ್ತದೆ. ಕಿಡ್ನಿ ನಿತ್ಯ 1.5 ಲೀಟರ್‌ ಶುದ್ಧೀಕರಿಸುತ್ತದೆ. ನಾವು ಎಷ್ಟು ದಿನ ಬದುಕಿದ್ದೀವಿ ಎನ್ನುವುದಕ್ಕಿಂತ ಹೇಗೆ ಬದುಕಿದ್ದೀವಿ ಎಂಬುದನ್ನು ಚಿಂತಿಸಬೇಕು. ದೇಹಾರೋಗ್ಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

ಮನಸ್ಸನ್ನು ಆಧ್ಯಾತ್ಮಿಕ ಚಿಂತನೆಯತ್ತಾ ತೊಡಗಿಸಿ ಯೋಗದ ಮೂಲಕ ಬದುಕನ್ನು ರೂಪಿಸಿಕೊಂಡು ಜೀವನವನ್ನು ಪರಿಷ್ಕರಿಸಿಕೊಳ್ಳಲು ರಥಸಪ್ತಮಿಯಂತಹ ಆಚರಣೆಗಳು ಮೂಲಾಧಾರ ಎಂದ ಅವರು, ಸೂರ್ಯನ ಉಪಾಸನೆ ಮಾಡುವುದರಿಂದ ಶರೀರದ ಹಲವು ಕಾಯಿಲೆಗಳು ದೂರವಾಗುತ್ತದೆ. ಯೋಗದಲ್ಲಿ ಅಪರಿಮಿತ ಶಕ್ತಿ ಇದೆ ಎಂಬುದನ್ನು ತಾವು ಸ್ವತಃ ಕಂಡುಕೊಂಡಿರುವುದಾಗಿ ತಿಳಿಸಿದರು.

ಪ್ರಬೋಧಿನಿ ಯೋಗ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಎಚ್‌.ಸಿ.ಸುರೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಹುಟ್ಟುವಾಗ ಉಸಿರಿರುತ್ತದೆ. ಸತ್ತಾಗ ಹೆಸರು ಉಳಿಯುವ ಕಾರ್ಯ ಮಾಡಬೇಕು. ಕಣ್ತುಂಬ ನಿದ್ದೆ, ಹೊಟ್ಟೆ ತುಂಬ ಊಟ, ಜೀರ್ಣಶಕ್ತಿ ಸರಿಯಾಗಿದ್ದರೆ ದೇಹಾರೋಗ್ಯ ಉತ್ತಮವಾಗಿರುತ್ತದೆ ಎಂದರು.

Advertisement

ರಥಸಪ್ತಮಿ ಆಚರಣೆ ಸಮಿತಿ ಅಧ್ಯಕ್ಷ ಎಂ.ಆರ್‌.ನಾಗರಾಜ್‌ ಮಾತನಾಡಿ, ವರ್ಷದ 365 ದಿನವೂ ಯೋಗ ತರಬೇತಿ ನೀಡಲಾಗುತ್ತಿದೆ. ದಶಕಗಳಿಂದ ಅಗ್ನಿಹೋತ್ರಿ ಮಾಡಲಾಗುತ್ತಿದ್ದು, ಉತ್ತಮ ಫಲಿತಾಂಶ ವ್ಯಕ್ತವಾಗಿದೆ. 1990 ರಿಂದ ಪ್ರಬೋಧಿನಿ ಯೋಗ ಸಮಿತಿ ಆರಂಭಗೊಂಡಿದ್ದು, 2005ರಲ್ಲಿ ಟ್ರಸ್ಟ್‌ ನೋಂದಾಯಿಸಲಾಗಿದೆ. ನಿರಂತರವಾಗಿ ರಥಸಪ್ತಮಿಯನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಲಯನ್ಸ್‌ ಜಿಲ್ಲಾ ನಿಕಟಪೂರ್ವ ಗರ್ವರ್ನರ್‌ ಎಚ್‌. ಆರ್‌.ಹರೀಶ್‌ ಮತ್ತು ಪ್ರಜಾಪಿತ ಬ್ರಹ್ಮಕುಮಾರಿಯರ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಉಪಸ್ಥಿತರಿದ್ದರು.

ಪ್ರಬೋಧಿನಿ ಟ್ರಸ್ಟಿ ಡಾ.ಮಂಜುನಾಥ್‌ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಎಂ.ಶಿವಪ್ಪ ನಿರೂಪಿಸಿದರು. ಯೋಗ ಶಿಕ್ಷಕಿಯರಾದ ಶಾರದಾ ಗಿರೀಶ್‌ ಪ್ರಾರ್ಥಿಸಿದರು. ವರ್ಷಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next