Advertisement

ರಾಮೇಶ್ವರನಿಗೆ ನಿತ್ಯ ದುರ್ನಾತದ ಮಜ್ಜನ

06:21 PM Mar 10, 2022 | Team Udayavani |

ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿರುವ ಹಳ್ಳದ ರಾಮೇಶ್ವರನಿಗೆ ನಿತ್ಯ ದುರ್ನಾತದ ಮಜ್ಜನವಾಗುತ್ತದೆ. ದೇವಾಲಯದ ಬಡದಲ್ಲಿ ಹರಿಯುವ ಯಗಚಿಹಳ್ಳಿದಲ್ಲಿ ನಗರದ ಕಲುಷಿತ ನೀರು ಹರಿಯುತ್ತಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರು ಮೂಗು ಮುಚ್ಚಿಕೊಂಡು ದೇವರ ದರ್ಶನ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

Advertisement

ರಾಮೇಶ್ವರ ನಗರ ಬಡಾವಣೆಯಲ್ಲಿರುವ ಹಳ್ಳದ ರಾಮೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ ಎನ್ನಲಾಗುತ್ತಿದೆ. 300ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ನಗರದ ಬೋಳರಾಮೇಶ್ವರ ದೇವಸ್ಥಾನದ ಮೂಲಸ್ಥಾನ ಇದಾಗಿತ್ತು ಎಂದು ಹೇಳಲಾಗುತ್ತದೆ.

ಯಗಚಿ ಹಳ್ಳದ ತಟದಲ್ಲಿರುವ ದೇವಸ್ಥಾನದ ಸಂಪೂರ್ಣವಾಗಿ ಬಂಡೆಗಲ್ಲಿನಿಂದ ಕೂಡಿದ್ದು, ದೇವಸ್ಥಾನ ಈ ಹಿಂದೆ ಚಿಕ್ಕದಾಗಿತ್ತು. ಹಳ್ಳದ ರಾಮೇಶ್ವರ ದೇವಸ್ಥಾನ ಸೇವಾ ಸಂಘವನ್ನು ರಚಿಸಿಕೊಂಡು ಬಡಾವಣೆಯ ಸುತ್ತಮುತ್ತಲ ಜನರು ದೇವಸ್ಥಾನದ ಜೀರ್ಣೋದ್ಧಾರ ಮಾಡಿ  ಅಭಿವೃದ್ಧಿಪಡಿಸಲಾಗಿದೆ. ದೇವಸ್ಥಾನದ ಗರ್ಭಗುಡಿಯ ಮೇಲಾºಗದಲ್ಲಿ ಬೃಹತ್‌ ಗಾತ್ರದ ಈಶ್ವರದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ರಾಮೇಶ್ವರನಿಗೆ ನಿತ್ಯ ಪೂಜೆ ವಿಧಿ ವಿಧಾನಗಳು ನಡೆಯುತ್ತಿದ್ದು, ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಕೊಳ್ಳುತ್ತಾರೆ.

ಯಗಚಿ ಹಳ್ಳದ ತಟದಲ್ಲಿರುವುದರಿಂದ ಇದಕ್ಕೆ ಹಳ್ಳದ ರಾಮೇಶ್ವರ ಎಂದು ಹೆಸರು ಬಂದಿದ್ದು, ಶ್ರದ್ಧಭಕ್ತಿಯ ಕೇಂದ್ರವಾಗಿದೆ. ಮುಳ್ಳಯ್ಯನಗಿರಿ ಪರ್ವತಶ್ರೇಣಿಯಲ್ಲಿ  ಹುಟ್ಟುವ ಯಗಚಿ ಹಳ್ಳ ರಾಮನಹಳ್ಳಿ ಬಡಾವಣೆ, ಮಧುವನ ಬಡಾವಣೆ ರಾಮೇಶ್ವರ ದೇವಸ್ಥಾನದ ಮುಂಭಾಗ ಹಾದುಹೋಗುವ ಈ ಹಳ್ಳ ಮುಂದೇ ಯಗಚಿ ಡ್ಯಾಂ ಸೇರುತ್ತದೆ.

ಹಿಂದೆ ಈ ಹಳ್ಳದಲ್ಲಿ ಪರಿಶುದ್ಧ ನೀರು ಹರಿಯುತ್ತಿತ್ತು. ಈಗ ನಗರದಲ್ಲಿನ ಬಡಾವಣೆಗಳ ಕೊಳಚೆ ನೀರು ಈ ಹಳ್ಳಕ್ಕೆ ಬಿಡುವುದರಿಂದ ಕಲುಷಿತ ನೀರು ದೇವಸ್ಥಾನದ ಮುಂದೇ ಹರಿಯತ್ತದೆ. ಇದರಿಂದ ದೇವಸ್ಥಾನದ ಸುತ್ತಮುತ್ತ  ದುರ್ನಾತ ಬೀರುತ್ತಿದ್ದು ದೇವಸ್ಥಾನಕ್ಕೆ ಬರುವ ಭಕ್ತರು ಮೂಗು ಮುಚ್ಚಿಕೊಂಡು ದೇವರ ದರ್ಶನ ಪಡೆದುಕೊಳ್ಳುವ ಸ್ಥಿತಿ ಇದೆ.

Advertisement

ಮಳೆಗಾಲದ ಸಂದರ್ಭದಲ್ಲಿ ಹಳ್ಳದಲ್ಲಿ ಭಾರೀ ಪ್ರಮಾಣ ನೀರು ಹರಿಯುತ್ತದೆ. 2021ರಲ್ಲಿ ಸುರಿದ ಭಾರೀ ಮಳೆಗೆ ಹಳ್ಳ ತುಂಬಿ ಹರಿದು ದೇವಸ್ಥಾನದ ಆವರಣಕ್ಕೆ ಕೊಳಚೆ ನೀರು ನುಗ್ಗಿ ತ್ತು. ಈ ಹಿಂದೆ ಯಗಚಿಹಳ್ಳ ವಿಸ್ತಾರವಾಗಿತ್ತು. ಇತ್ತೀಚೆಗೆ ಹಳ್ಳದ ಜಾಗ ಒತ್ತುವರಿ ಆಗಿದ್ದರಿಂದ ಹಳ್ಳ  ಕಿರಿದಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಅಲ್ಲಿನ ಸ್ಥಳೀಯ ನಿವಾಸಿಗರ ಆರೋಪವಾಗಿದೆ.

ರಾಮೇಶ್ವರ ದೇವಸ್ಥಾನ ಬುಡದಲ್ಲಿ ಹರಿಯುವ ಹಳ್ಳ ಮುಂದೇ ಯಗಚಿ ನದಿಯನ್ನು ಸೇರುತ್ತದೆ. ಈ ನೀರನ್ನು ಶುದ್ಧೀಕರಿಸಿ ನಗರದ ಅನೇಕ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹಳ್ಳಕ್ಕೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಿ ಹಳ್ಳದಲ್ಲಿ ಶುಭ್ರವಾದ ನೀರು ಹರಿಯುವಂತೆ ಯೋಜನೆ ರೂಪಿಸಿ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿ ಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಹಳ್ಳದಲ್ಲಿ ನಗರದ ಕೊಳಚೆ ನೀರು ಹರಿಯುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇರಿಸುಮುರಿಸು ಉಂಟಾಗುತ್ತಿದೆ.

ದೇವಸ್ಥಾನದ ಮಗ್ಗಲಲ್ಲೇ ಕೊಳಚೆ ನೀರು ಹರಿಯುತ್ತಿರುವುದರಿಂದ ದುರ್ನಾತದ ಜೊತೆಗೆ ದೇವಸ್ಥಾನದ ಅಂದವನ್ನು ಹಾಳುಗೆಡವುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ತಕ್ಷಣ ಹಳ್ಳಕ್ಕೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಬೇಕು ಮತ್ತು ಹಳ್ಳವನ್ನು ದುರಸ್ತಿ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next