Advertisement

ಅಮೃತ್‌ ಯೋಜನೆಗೆ ಅನುದಾನ ಒದಗಿಸಿ

03:07 PM May 02, 2019 | Team Udayavani |

ಚಿಕ್ಕಮಗಳೂರು: ನಗರಕ್ಕೆ ದಿನದ 24 ಗಂಟೆ ನೀರು ನೀಡುವ ಅಮೃತ್‌ ಯೋಜನೆಗೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ನಗರಸಭೆಯಿಂದ ಸರಿಯಾಗಿ ಹಣ ಬಿಡುಗಡೆಯಾಗದೆ ಗುತ್ತಿಗೆದಾರನ ಬಿಲ್ ಪಾವತಿಸಲು ತೊಡಕಾಗಿದೆ.

Advertisement

ಅಮೃತ್‌ ಯೋಜನೆಯ ಒಟ್ಟು ವೆಚ್ಚ 102.57 ಕೋಟಿ ರೂ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.50 ರಷ್ಟು ಅಂದರೆ 51 ಕೋಟಿ ಹಣ ಅಲ್ಲಿಂದ ಬರಬೇಕು. ಆದರೆ ಈ ವರೆಗೂ ಬಂದಿರುವುದು 19.44 ಕೋಟಿ ರೂ. ಮಾತ್ರ.

ರಾಜ್ಯ ಸರ್ಕಾರ ಈ ವೆಚ್ಚದ ಶೇ. 20 ಹಣ ಭರಿಸಬೇಕಾಗಿದೆ. ಒಟ್ಟು 20.51 ಕೋಟಿ ರೂ. ರಾಜ್ಯ ಸರ್ಕಾರದಿಂದ ಬರಬೇಕಿದ್ದು, ಅದರಲ್ಲಿ ಈವರೆಗೆ 6.07 ಕೋಟಿ ರೂ. ಬಂದಿದೆ. ನಗರಸಭೆ ಭರಿಸಬೇಕಾದ ಮೊತ್ತ 30.77 ಕೋಟಿ ರೂ. ಆದರೆ ಈವರೆಗೂ ನಗರಸಭೆ ನೀಡಿರುವುದು 2.91 ಕೋಟಿ ರೂ. ಮಾತ್ರ.

ಗುತ್ತಿಗೆದಾರರು ನಿರ್ವಹಿಸಿರುವ ಕೆಲಸಕ್ಕೆ ಒಟ್ಟು 41 ಕೋಟಿ ರೂ. ವೆಚ್ಚವಾಗಿದೆ. ಇನ್ನೂ ಸಹ ಗುತ್ತಿಗೆದಾರರಿಗೆ 4 ಕೋಟಿ ರೂ. ಬಾಕಿ ನೀಡಬೇಕಾಗಿದೆ. ಆದರೆ ಕಾಮಗಾರಿ ಶೇ. 50ರಷ್ಟು ಪೂರ್ಣಗೊಂಡಿದೆ. ಹಣದ ಹರಿವು ಮಾತ್ರ ಕುಂಟುತ್ತಾ ಬರುತ್ತಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಯಗಚಿ ನದಿಯಲ್ಲಿ ನಿರ್ಮಿಸಿರುವ ಜಾಕ್‌ವೆಲ್ನಿಂದ ಮುಗುಳವಳ್ಳಿಯಲ್ಲಿರುವ ಮಧ್ಯಂತರ ಪಂಪಿಂಗ್‌ ಘಟಕಕ್ಕೆ 12.25 ಕಿ.ಮೀ. ಅಂತರವಿದೆ. ಈಗಾಗಲೇ ಎಂ.ಎಸ್‌.ಪೈಪ್‌ಲೈನ್‌ಗಳನ್ನು 11 ಕಿ.ಮೀ.ನಲ್ಲಿ ಅಳವಡಿಸಲಾಗಿದೆ. ಇನ್ನುಳಿದಿರುವುದು 1.25 ಕಿ.ಮೀ.ಮಾತ್ರ.

Advertisement

ಮಧ್ಯಂತರ ಪಂಪಿಂಗ್‌ ಘಟಕದಿಂದ ಗೃಹಮಂಡಳಿ ಬಡಾವಣೆಯಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಇರುವ ದೂರ 3.6 ಕಿ.ಮೀ.ಈವರೆಗೂ ಎಂ.ಎಸ್‌.ಪೈಪ್‌ಲೈನ್‌ ಅನ್ನು 3.4 ಕಿ.ಮೀ.ನಲ್ಲಿ ಅಳವಡಿಸಲಾಗಿದ್ದು, ಈ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಒಟ್ಟು 312 ಕಿ.ಮೀ. ದೂರ ಎಚ್‌ಡಿಪಿಇ ಪೈಪ್‌ಗ್ಳನ್ನು ಅಳವಡಿಸಿ ಮನೆ ಮನೆಗೆ ಸಂಪರ್ಕ ನೀಡಬೇಕು. ಈವರೆಗೆ 174 ಕಿ.ಮೀ. ಪೈಪ್‌ ಅಳವಡಿಸಲಾಗಿದೆ. ಒಟ್ಟು ನಗರದಲ್ಲಿ 30,300 ಸಂಪರ್ಕಗಳನ್ನು ನೀಡಬೇಕಾಗಿದೆ. ಇದರಲ್ಲಿ ಈವರೆಗೆ 4852 ಸಂಪರ್ಕ ಕಲ್ಪಿಸಲಾಗಿದ್ದು, ಕೆಲವು ಕಡೆ ರಸ್ತೆ ಅಗೆದು ಸಂಪರ್ಕ ನೀಡಬೇಕಾಗಿರುವುದರಿಂದ ಈ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ನೀರು ಸಂಗ್ರಹಣೆಗೆ ಮೂರು ವಿವಿಧ ಅಳತೆಯ ಟ್ಯಾಂಕ್‌ಗಳನ್ನು ನಿರ್ಮಿಸಬೇಕಾಗಿದೆ. 60 ಲಕ್ಷ ಲೀಟರ್‌ನ ಒಂದು ಟ್ಯಾಂಕ್‌ ಅನ್ನು ಗೃಹಮಂಡಳಿ ಬಡಾವಣೆಯಲ್ಲಿ ನಿರ್ಮಿಸುತ್ತಿದ್ದು, ಕಾಮಗಾರಿ ಆರಂಭವಾಗಿ ಮುಚ್ಚಿಗೆ ನಿರ್ಮಿಸಿದಲ್ಲಿ ಪೂರ್ಣಗೊಳ್ಳಲಿವೆ. ರತ್ನಗಿರಿ ಬೋರೆಯಲ್ಲಿ 5 ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 12 ಲಕ್ಷ ಲೀಟರ್‌ ಟ್ಯಾಂಕ್‌ ಅನ್ನು ಜಿಲ್ಲಾ ಕಾರಾಗೃಹದ ಆವರಣದಲ್ಲಿ ನಿರ್ಮಿಸಲಾಗುತ್ತಿದ್ದು, ಅದರ ಮೇಲ್ಚಾವಣಿ ನಿರ್ಮಾಣ ಬಾಕಿ ಉಳಿದಿದೆ.

ದಿನದ 24 ಗಂಟೆ ನೀರು ನೀಡಬೇಕಾಗಿರುವುದರಿಂದ ಹೆಚ್ಚಿನ ಸಾಮರ್ಥ್ಯದ ಪಂಪಿಂಗ್‌ ಯಂತ್ರಗಳನ್ನು ಅಳವಡಿಸಬೇಕಾಗಿದ್ದು, ಈ ಯಂತ್ರಗಳು ಸರಬರಾಜಾಗಿವೆ. ಅವುಗಳನ್ನು ಜೋಡಿಸುವ ಕೆಲಸ ಬಾಕಿ ಉಳಿದಿವೆ. ಈ ಯೋಜನೆಯನ್ನು 2020ರ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕಾಗಿದ್ದು, ಕಾಮಗಾರಿ ಇದೇ ರೀತಿ ತ್ವರಿತವಾಗಿ ನಡೆದಲ್ಲಿ ಅದಕ್ಕಿಂತ ಮುಂಚಿತವಾಗಿಯೇ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಅಥವಾ ಇನ್ನೊಂದು ತಿಂಗಳು ಮುಂದಕ್ಕೆ ಹೋಗಬಹುದು ಎಂದು ಮೂಲಗಳು ಹೇಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next