Advertisement

ದೃಶ್ಯ ಮಾಧ್ಯಮಕ್ಕಿಂತ ಪತ್ರಿಕೆಗಳು ಶಕ್ತಿಶಾಲಿ

11:25 AM Jul 29, 2019 | Naveen |

ಚಿಕ್ಕಮಗಳೂರು: ರಾಜಕಾರಣಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಟೀಕೆ, ಟಿಪ್ಪಣಿ, ಪ್ರಶಂಸೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೇ ಹೊರತು ಮಾಧ್ಯಮಗಳ ಮೇಲೆ ದಾಳಿಗೆ ಮುಂದಾಗುವುದು ಸರಿಯಲ್ಲ. ಮಾಧ್ಯಮಗಳ ಮೇಲೆ ಇಂತಹ ದಾಳಿಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಇದು ಖಂಡನೀಯ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

Advertisement

ನಗರದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಓರೆಕೋರೆಗಳನ್ನು ಜನರ ಮುಂದಿಡುತ್ತಾ ಸ್ವಾಸ್ಥ ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಾಧ್ಯಮಗಳು ಮಹತ್ತರ ಪಾತ್ರ ನಿರ್ವಹಿಸುತ್ತಿವೆ. ದೃಶ್ಯ ಮಾಧ್ಯಮ ಹಾಗೂ ಆಧುನಿಕ ತಂತ್ರಜ್ಞಾನದಿಂದಾಗಿ ಪ್ರಸಕ್ತ ಪತ್ರಿಕಾ ಮಾಧ್ಯಮ ಸಾಕಷ್ಟು ಸವಾಲು ಎದುರಿಸುತ್ತಿದ್ದರೂ ದೃಶ್ಯ ಮಾಧ್ಯಮಕ್ಕಿಂತ ಪತ್ರಿಕಾ ಮಾಧ್ಯಮಗಳು ಸಮಾಜದಲ್ಲಿ ಹೆಚ್ಚು ಶಕ್ತಿಶಾಲಿಯಾಗಿವೆ. ಯಾವುದೇ ವಿಚಾರ ಅಥವಾ ಸುದ್ದಿಗಳು ದೃಶ್ಯ ಮಾಧ್ಯಮಗಳಲ್ಲಿ ಬೆಳಗಿನಿಂದ ಸಂಜೆವರೆಗೂ ಬಿತ್ತರವಾದರೂ ಅವುಗಳಿಗೆ ಹೆಚ್ಚು ಆಯುಷ್ಯ ಇರುವುದಿಲ್ಲ. ಆದರೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳು ಹೆಚ್ಚು ಜನರನ್ನು ತಲುಪುವುದಲ್ಲದೆ ದಾಖಲೆಯಾಗಿ ಉಳಿದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ ಅಭಿಪ್ರಾಯಪಟ್ಟರು.

ರಾಜಕಾರಣಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಟೀಕೆಗಳಿಂದ ಕುಗ್ಗಬಾರದು, ಪ್ರಶಂಸೆಗಳಿಂದ ಹಿಗ್ಗಲೂಬಾರದು. ಇವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ತಮ್ಮ ಕಾರ್ಯವೈಖರಿಯನ್ನು ಆತ್ಮಾವಲೋಕ ಮಾಡಿಕೊಳ್ಳುವುದರಿಂದ ಉತ್ತಮ ರಾಜಕಾರಣಿಯಾಗಲು ಸಾಧ್ಯ. ತಾನು ಆರಂಭದಲ್ಲಿ ರಾಜಕಾರಣದ ದ್ವೇಷಿಯಾಗಿದ್ದೆ. ಇಂತಹ ಸಂದರ್ಭಗಳಲ್ಲಿ ಪತ್ರಿಕೆಗಳೇ ತನ್ನನ್ನು ರಾಜಕಾರಣಕ್ಕೆ ಕಾಲಿಡಲು ಪ್ರೇರೇಪಿಸಿದವು. ಪತ್ರಿಕೆ ಓದುವ ಹವ್ಯಾಸ ಹೊಂದಿದ್ದ ತಾನು ಪತ್ರಿಕೆಗಳ ಪ್ರಕಟವಾಗುತ್ತಿದ್ದ ಸಮಾಜದ ಓರೆಕೋರೆಗಳು, ಜನರ ಸಮಸ್ಯೆಗಳನ್ನು ಓದುತ್ತಿದ್ದಾಗ ರಾಜಕಾರಣಿಗಳ ಬಗ್ಗೆ ಅಸಡ್ಡೆಯ ಭಾವನೆ ಮೂಡುತ್ತಿತ್ತು. ಕ್ರಮೇಣ ಇಂತಹ ಸಮಸ್ಯೆಗಳಿಗೆ ಕಿಂಚಿತ್ತಾದರೂ ಸ್ಪಂದಿಸುವ ಉದ್ದೇಶದಿಂದ ರಾಜಕಾರಣದ ಹಾದಿ ತುಳಿದೆ ಎಂದರು.

ಜೈಲಿನಲ್ಲಿದ್ದಂತೆ: ಪ್ರಸ್ತುತ ದಿನಗಳಲ್ಲಿ ರೆಸಾರ್ಟ್‌ ರಾಜಕಾರಣ ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ರಾಜೇಗೌಡ, ನಾನು ಮೊದಲಿನಿಂದಲೂ ರೆಸಾರ್ಟ್‌ ರಾಜಕಾರಣವನ್ನು ವಿರೋಧಿಸುತ್ತಿದ್ದವನು. ಆದರೆ ಈಗ ನಾನೇ ಅಲ್ಲಿ ಕಾಲ ಕಳೆಯುವಂತಾಗಿದೆ. ಜನಸಾಮಾನ್ಯರು ನಾವು ರೆಸಾರ್ಟ್‌ಗಳಲ್ಲಿ ಉಳಿದು ಐಷಾರಾಮಿ ಜೀವನ ನಡೆಸುತ್ತಿದ್ದೇವೆ ಎಂದು ಮಾತನಾಡಿಕೊಳ್ಳುತ್ತಾರೆ. ಆದರೆ ಅಲ್ಲಿ ಕಾಲ ಕಳೆಯುವುದು ತಮಗೆ ಜೈಲಿನಲ್ಲಿ ಕಾಲ ಕಳೆದಂತೆ ಎನಿಸುತ್ತಿತ್ತು ಎಂದರು. ಖ್ಯಾತ ವಾಗ್ಮಿ ಹಾಗೂ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಮಾತನಾಡಿ, ಸಮಾಜದಲ್ಲಿ ಜನರು ಹೇಗೆ ಬದುಕಬೇಕೆಂಬುದನ್ನು ಸಂವಿಧಾನ ತಿಳಿಸುತ್ತದೆ, ಕಲಿಸುತ್ತಿದೆ. ಆದರೆ ಮಾಧ್ಯಮ ರಂಗ ಸಂವಿಧಾನಕ್ಕೇ ಸಂವಿಧಾನವಾಗಿದೆ. ಪ್ರಜೆಗಳ ಧ್ವನಿ ಪ್ರಜಾಪ್ರತಿನಿಧಿಗಳ ಮಧ್ಯೆ ಪ್ರತಿಧ್ವನಿಸುವಂತೆ ಮಾಡುವ ಶಕ್ತಿ ಮಾಧ್ಯಮ ರಂಗವಾಗಿದೆ. ಪತ್ರಿಕೆ ಹಾಗೂ ಪತ್ರಕರ್ತ ಸಮಾಜದ ಕನ್ನಡಿ ಇದ್ದಂತೆ, ಸಮಾಜದಲ್ಲಿ ತನ್ನ ಪಾತ್ರ ಏನೆಂದು ಪ್ರತಿಯೊಬ್ಬರಿಗೂ ತಿಳಿ ಹೇಳುವ ಕೆಲಸ ಮಾಡುತ್ತಿರುವುದೇ ಪತ್ರಿಕಾ ಮಾಧ್ಯಮ ಎಂದು ಅಭಿಪ್ರಾಪಟ್ಟರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ರಾಜಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಯಾವಾಗಲೂ ಸಮಾಜ ಹಾಗೂ ಜನರ ಸಮಸ್ಯೆ ಗುರುತಿಸುವಲ್ಲಿ ಮುಂದಿರುತ್ತಾರೆ. ಆದರೆ ಪತ್ರಕರ್ತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದಿರುತ್ತಾರೆ. ಪ್ರಸಕ್ತ ಪತ್ರಕರ್ತರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿದ್ದಾರೆ. ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿಯಾದರೂ ಸಂಘಟಿತರಾಗುವುದು ಅತ್ಯಗತ್ಯ. ಸರ್ಕಾರ ಹಾಗೂ ರಾಜಕಾರಣಿಗಳು ಪತ್ರಕರ್ತರನ್ನು ನಿರ್ಲಕ್ಷಿಸುತ್ತಿದ್ದಾರೆ. ಮಾಧ್ಯಮ ಕ್ಷೇತ್ರ ಹಾಗೂ ಪತ್ರಕರ್ತರ ಬಗ್ಗೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯೇ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದನ್ನು ಪತ್ರಕರ್ತರು ಖಂಡಿಸಬೇಕು ಎಂದರು. ಮಾಧ್ಯಮ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಗಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೂಡಿಗೆರೆ, ತರೀಕೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಚಿಕ್ಕಮಗಳೂರು ತಾಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next