Advertisement

ಖಾಕಿ ಖದರ್‌ನಲ್ಲೂ ಸ್ನೇಹ ಜೀವಿ ಅಣ್ಣಾಮಲೈ

12:27 PM May 29, 2019 | Naveen |

ಖಾಕಿ ಖದರ್‌ನಲ್ಲೂ ಅವರೊಳಗೊಬ್ಬ ಪ್ರೀತಿಸುವ, ಕುಶಲ ಕೇಳುವ ಮನುಷ್ಯನಿದ್ದ. ಎಲ್ಲವನ್ನೂ ಲಾಠಿಯ ರುಚಿ, ಪೊಲೀಸ್‌ ದರ್ಪದಿಂದಲೇ ಪರಿಹರಿಸಬಹುದೆಂಬುದಕ್ಕೆ ಅಂಟಿಕೊಳ್ಳದೆ ಮನಸ್ಸಿಗೆ ಮುಟ್ಟುವಂತೆ ತಿಳಿಸಿ ಹೇಳುವ ಮಾತಿನ ಕೌಶಲ್ಯವೂ ಆ ಅಧಿಕಾರಿಗೆ ಇತ್ತು.

Advertisement

ಕಳೆದ 9 ವರ್ಷಗಳಿಂದ ಪೊಲೀಸ್‌ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಇದೀಗ ಅವರ ವೃತ್ತಿಗೆ ವಿದಾಯ ಹೇಳುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಯಾಗಿ, ಜನಸ್ನೇಹಿಯಾಗಿ, ಕಾರ್ಯನಿರ್ವಹಿಸಿದ ಜಿಲ್ಲೆಗಳಲ್ಲೆಲ್ಲ ಅಪಾರ ಸಂಖ್ಯೆಯಲ್ಲಿ ಜನ ಸಂಪಾದನೆ ಮಾಡಿದ್ದರು. ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ವಿಶ್ಲೇಷಣಾತ್ಮಕವಾಗಿ ಮಾತನಾಡುತ್ತಿದ್ದರು. ಒಂದು ಸಮಸ್ಯೆಯನ್ನು ಹಲವು ಮಗ್ಗುಲಿನಿಂದ ಪರಿಶೀಲಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಸ್ವಭಾವ ಅವರದಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿಯಾಗಿದ್ದಾಗ ಪೊಲೀಸ್‌ ಕಚೇರಿ ಭಯ, ಆತಂಕದ ಪರಿಸರದಿಂದ ಕೂಡಿರದಂತೆ ಸಮಸ್ಯೆ ಹೊತ್ತು ಬಂದವರೊಂದಿಗೆ ಮಾತನಾಡಿ, ಉದಾಹರಣೆಗಳ ಮೂಲಕ ಪರಿಹಾರ ಹುಡುಕಿ ತೆಗೆಯುತ್ತಿದ್ದರು. ಇಲಾಖೆಯಿಂದಲೇ ಪರಿಹರಿಸ ಬಹುದಾದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಸೂಚಿಸುತ್ತಿದ್ದುದು ಅಣ್ಣಾಮಲೈ ಅವರ ವಿಶೇಷವಾಗಿತ್ತು.

ಸೈಕಲ್ ಅವರಿಗೊಂದು ತೀವ್ರಾಸಕ್ತಿಯ ವಸ್ತು. ಬೆಳಗ್ಗೆ ಚಡ್ಡಿ ತೊಟ್ಟು, ಟೀ ಶರ್ಟ್‌ ಏರಿಸಿ ಸೈಕಲ್ ಪೆಡಲ್ ಒತ್ತಿದರೆ ನೇರವಾಗಿ ಬಾಬಾಬುಡನಗಿರಿ ಬೆಟ್ಟ ಶ್ರೇಣಿಯ ಸರ್ಪಸುತ್ತಿನ ಹಾದಿಯಲ್ಲಿ ಹೋಗಿ ಅದು ನಿಲ್ಲುತ್ತಿತ್ತು. ಆ ಹಸುರು ಹಾಸು, ಕುಳಿರ್ಗಾಳಿಗೆ ಮೈವೊಡ್ಡಿ ತಮ್ಮ ಜೊತೆಗಾರರೊಂದಿಗೆ ಹಿಂತಿರುಗುತ್ತಿದ್ದರು. ಚಿಕ್ಕಮಗಳೂರು ನಗರದಲ್ಲಿ ಸೈಕಲ್ ಪ್ರಿಯರ ಸಂಖ್ಯೆ ಅಧಿಕವಾಗಲು ಅವರೊಂದು ವೇಗವರ್ಧಕವಾದರು. ಅಂತಾರಾಷ್ಟ್ರೀಯ ಸೈಕ್ಲಿಂಗ್‌ ಕಾರ್ಯಕ್ರಮಕ್ಕೂ ಇದು ಇಂಬು ನೀಡಿತು.

ಜಿಲ್ಲೆಯಲ್ಲಿ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ಶಾಂತಿ ಭಂಗವಾಗದಂತೆ ನೋಡಿಕೊಂಡ ಉದಾಹರಣೆಗಳಿವೆ. ಅಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ, ಪೊಲೀಸರ ಬಿಗಿ ಬಂದೋಬಸ್ತ್ನ ನಡುವೆಯೂ ಒಂದು ಸಣ್ಣ ಪ್ರಕರಣ ನಡೆದು ಹೋಯಿತು. ಸ್ವಲ್ಪಮಟ್ಟಿಗೆ ಕೋಮು ಭಾವನೆ ಕೆರಳಿಸುವ ಗಂಭೀರ ಪರಿಸ್ಥಿತಿ ಉಂಟಾಯಿತು. ಅದನ್ನು ಅಣ್ಣಾಮಲೈ ಅತ್ಯಂತ ಚಾಕಚಕ್ಯತೆಯಿಂದ ತಡೆದರು. ಪ್ರಕರಣ ಸಾರ್ವಜನಿಕ ವಿಷಯವಾಗದಂತೆ ಮಾಡಿ ಯಾವುದೇ ಕೋಮಿನವರು ಘಟನೆಗೆ ಭೂತಗಾಜು ಹಿಡಿಯದಂತೆ ಮಾಡಿದರು. ಹಾಗಾಗಿ ಕೋಮುಗಲಭೆ ತಪ್ಪಿತು. ಅದು ಚರ್ಚಾ ವಿಷಯವೇ ಆಗಲಿಲ್ಲ. ಇದು ಅವರ ಕಾರ್ಯಕ್ಷಮತೆಯಾಗಿತ್ತು.

Advertisement

ನಿಸರ್ಗವೇ ಜೀವನಾಧಾರ: ಈ ಜಿಲ್ಲೆಯ ಬೆಟ್ಟ, ಗುಡ್ಡ, ಕಾನನ, ನದಿ, ತಡಸಲುಗಳು ಈ ಜಿಲ್ಲೆಯ ಸಾಮಾನ್ಯ ಜನರ ಜೀವನಾಧಾರ ಎಂದು ನಂಬಿದ್ದರು. ಈ ನಿಸರ್ಗದ ರಮಣೀಯತೆಯನ್ನು ಮಂಕಾಗಿಸಬೇಡಿ ಎಂಬ ಸಂದೇಶವನ್ನು ಅವರು ತಮ್ಮ ಹಲವು ಭಾಷಣಗಳಲ್ಲಿ ಹೇಳುತ್ತಿದ್ದರು. ಒಮ್ಮೆ ಈ ನಿಸರ್ಗ ಸೌಂದರ್ಯ ಮುಕ್ಕಾಗಿಸಿಬಿಟ್ಟರೆ ಮತ್ತೆ ಅದನ್ನು ಸೃಷ್ಟಿಸಲಾರಿರಿ. ಈ ನೀಲಾಕಾಶದ ಕೆಳಗಿನ ಹಸಿರು ಹೊದಿಕೆಯೇ ಈ ಜಿಲ್ಲೆಯ ಜೀವ. ಅದನ್ನು ಕುಲಗೆಡಿಸದೆ ರಕ್ಷಿಸಬೇಕೆಂಬ ಸಲಹೆ ನೀಡುತ್ತಿದ್ದರು. ಈ ದಿನಗಳಲ್ಲಿ ಐಟಿ, ಬಿಟಿಯ ಮೂಲಕ ವ್ಯಕ್ತಿ ವ್ಯಯಿಸುವ ಸಾಮರ್ಥ್ಯ ಹೆಚ್ಚಿದಂತೆ ನಿಸರ್ಗಾನುಭವದ ತವಕ ಹೆಚ್ಚಾಗುತ್ತಿದೆ. ಆದರೆ ಆ ಅನುಭವ ಒಂದು ಮೋಜು, ಮಸ್ತಿಗೆ ದಾರಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಜಿಲ್ಲೆಯ ಜನರದ್ದು ಎಂಬುದು ಅವರ ಅಭಿಪ್ರಾಯವಾಗಿತ್ತು.

ಅಣ್ಣಾಮಲೈ ಕಳೆದ ಒಂಭತ್ತು ವರ್ಷಗಳ ಕಾಲ ಪೊಲೀಸ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ತಮ್ಮ ಅಧಿಕಾರಾವಧಿಯ ಶ್ವೇತವಸ್ತ್ರದಲ್ಲಿ ಕಪ್ಪು ಚುಕ್ಕೆಗೆ ಅವಕಾಶ ನೀಡಲಿಲ್ಲ. ಆ ರೀತಿಯ ಕರ್ತವ್ಯ ನಿರ್ವಹಣೆ ಅವರದ್ದಾಗಿತ್ತು. ರಾಜೀನಾಮೆ ನೀಡಿದ ಮಾಹಿತಿ ಬಂದಾಕ್ಷಣ ಅವರನ್ನು ಸಂಪರ್ಕಿಸಿ ಆತುರದ ನಿರ್ಧಾರವಲ್ಲವೇ ಎಂದಾಗ, ‘ಇಲ್ಲ ಸಾರ್‌, ಒಂಭತ್ತು ವರ್ಷ ಸೇವೆ ಸಲ್ಲಿಸಿದ್ದೇನೆ; ಚಿಕ್ಕಮಗಳೂರಿನಲ್ಲಿದ್ದಾಗಲೇ ವಿದಾಯ ಹೇಳುವ ಚಿಂತನೆ ಮಾಡಿದ್ದೆ. ಅದೀಗ ಮನಸ್ಸಿನ ಮೂಸೆಯಲ್ಲಿ ಕಾದು, ಕುದ್ದು ಹರಳುಗಟ್ಟಿದೆ. ಅದನ್ನೀಗ ಅಂತಿಮ ಹಂತಕ್ಕೆ ತಂದಿದ್ದೇನೆ’ ಎಂದರು. ಅರ್ಧಾಂಗಿ ಒಪ್ಪಿದರೆ ಎಂಬ ಪ್ರಶ್ನೆ ಎಸೆದಾಗ, ‘ಮನೆಯವರೆಲ್ಲರ ಒಪ್ಪಿಗೆ ದೊರೆತಿದೆ’ ಎಂಬ ಉತ್ತರ ಬಂತು. ರಾಜಕೀಯ ಸೇರುವಿರಾ ಎಂದಾಗ, ‘ಇನ್ನು ಮೂರು ತಿಂಗಳು ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ. ಈ ನಿರ್ಧಾರವನ್ನು ಮತ್ತಷ್ಟು ಚಿಂತನೆಯ ಕುಲುಮೆಯಲ್ಲಿ ಹಾಕುತ್ತೇನೆ. ಆ ನಂತರ ಮುಂದಿನ ಹಾದಿಯನ್ನು ನಿರ್ಧರಿಸುತ್ತೇನೆ’ ಎಂದರು.

ಹಾಗಾದರೆ ರಾಜಕೀಯಕ್ಕೆ ಹೋಗುವುದಿಲ್ಲವೇ ಎಂಬ ಮತ್ತೂಂದು ಪ್ರಶ್ನೆಗೆ ‘ಹಾಗೇನಿಲ್ಲ. ಅದೂ ಸಹ ಮನಸ್ಸಿನ ಒಂದು ಮಗ್ಗುಲಿನಲ್ಲಿದೆ. ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ಉತ್ತಮ ಅವಕಾಶಗಳಿವೆಯಲ್ಲವೇ’ ಎಂಬ ಪ್ರತಿಪ್ರಶ್ನೆ ಎಸೆದರು. ಚಿಂತನ-ಮಂಥನ, ಉತ್ಸಾಹ, ಕ್ರಿಯಾಶೀಲತೆ, ಪ್ರಾಮಾಣಿಕತೆ, ನೋವು ನಿವಾರಿಸುವ ಮತ್ತು ಅದನ್ನು ಹಂಚಿಕೊಳ್ಳುವ ಮನೋಭಾವದ ಅಧಿಕಾರಿ ಅವರು. ಅವರಿಗೆ ಆಂಗ್ಲ ಭಾಷೆ ಹಾಗೂ ತಮಿಳಿನಲ್ಲಿ ಉತ್ತಮವಾದ ವಾಕ್ಪಟುತ್ವ ಇದೆ. ಹಾಗಾಗಿ ಅವರು ರಾಜಕೀಯ ಕ್ಷೇತ್ರ ಪ್ರವೇಶಿಸಿದಲ್ಲಿ ಅಲ್ಲಿನ ಕೃತಕ ಹರಳುಗಳ ಮಧ್ಯೆ ಒಂದು ಜಾತಿ ಮುತ್ತಾಗಿ ಕಾಣಬಹುದೇನೋ?

ಸರಳತೆಯ ಅಧಿಕಾರಿ
ಒಮ್ಮೆ ಸೈಕಲ್ ಸ್ಪರ್ಧೆ ಉದ್ಘಾಟನೆಗೆ ಅವರೇ ಮುಖ್ಯ ಅತಿಥಿ ಹಾಗೂ ಉದ್ಘಾಟಕರು. ವ್ಯವಸ್ಥಾಪಕರು ಎಸ್‌ಪಿ ಇನ್ನೂ ಬರಲಿಲ್ಲ ಎಂಬ ಆತಂಕದಲ್ಲಿದ್ದರು. ಆದರೆ ಅವರು ಆಗಲೇ ಬಂದಾಗಿತ್ತು. ಚಡ್ಡಿ, ಟೀ ಶರ್ಟ್‌ನಲ್ಲಿದ್ದ ಅವರ ಗುರುತು ಹಿಡಿಯಲು ವ್ಯವಸ್ಥಾಪಕರಿಗೆ ಸಮಯ ಬೇಕಾಯಿತು ಅಷ್ಟೆ. ಅಷ್ಟೊಂದು ಸರಳತೆ ಮೈಗೂಡಿಸಿಕೊಂಡಿದ್ದ ಅಧಿಕಾರಿ ಅವರು.

  • ಸ.ಗಿರಿಜಾಶಂಕರ
    ಹಿರಿಯ ಪತ್ರಕರ್ತರು, ಚಿಕ್ಕಮಗಳೂರು
Advertisement

Udayavani is now on Telegram. Click here to join our channel and stay updated with the latest news.

Next