Advertisement

ಯಾರೇ ಬಂದರೂ ಕ್ವಾರಂಟೈನ್‌ಗೆ ಒಳಪಡಿಸಿ

03:19 PM May 02, 2020 | Naveen |

ಚಿಕ್ಕಮಗಳೂರು: ಕೋವಿಡ್ ಸೋಂಕು ಹಿನ್ನೆಲೆ ವಿದೇಶಗಳಲ್ಲಿ, ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡವರು ಜನರು ಜಿಲ್ಲೆಗೆ ಬರುವ ನಿರೀಕ್ಷೆಯಿದ್ದು, ಅಂಥವರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆ ಸಚಿವ ಶ್ರೀರಾಮುಲು ಜಿಲ್ಲಾಡಳಿತಕ್ಕೆ ಸೂಚಿಸಿದರು.

Advertisement

ಶುಕ್ರವಾರ ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್ ‌-19 ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದ ದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಿಲ್ಲೆಯ ಜನರು ಸಿಲುಕಿಕೊಂಡಿರುವ ಜನರು ಲಾಕ್‌ ಡೌನ್‌ ನಂತರ ತಮ್ಮನ್ನು ಕರೆಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರನ್ನು ಜಿಲ್ಲೆಗೆ ಬರಮಾಡಿಕೊಳ್ಳುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಸೋಂಕು ಹರಡದಂತೆ ತಡೆಯಲು ಅವರು ಜಿಲ್ಲೆಗೆ ಬರುತ್ತಿದ್ದಂತೆ ಕ್ವಾರಂಟೈನ್‌ಗೆ ಒಳಪಡಿಸಲು ಎಲ್ಲ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳಬೇಕು. ಜಿಲ್ಲೆ ಕೊರೊನಾ ಮುಕ್ತವಾಗಿ ಹಸಿರು ವಲಯದಲ್ಲಿದ್ದು, ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದರು.

ಕಡೂರು ಕ್ಷೇತ್ರದ ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, ಲಾಕ್‌ಡೌನ್‌ನಿಂದ ಬಡವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ರಾಜ್ಯಗಳಿಗೆ ರವಾನಿಸಿರುವ ಪಡಿತರ ಕಾರ್ಡ್‌ ಅಕ್ಕಿ ಉತ್ತಮ ಗುಣಮಟ್ಟದ್ದಾಗಿದ್ದು, ಆದರೆ, ಅಕ್ಕಿಯಲ್ಲಿ ಕಲ್ಲುಮಣ್ಣು ಬೆರೆತಿದೆ. ಯಾರೋ ಉದ್ದೇಶಪೂರ್ವಕವಾಗಿ ಕಲ್ಲುಮಣ್ಣು ಬೆರೆಸಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕು. ತಪ್ಪಿತಸ್ಥರು ಕಂಡು ಬಂದರೆ ಅವರ ಪಡಿತರ ಅಂಗಡಿ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಂಸದೆ ಶೋಭಾ ಕರಂದ್ಲಾಜೆ ಅಂತಹ ಪ್ರಕರಣ ಕಂಡು ಬಂದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ನಾಗರಾಜ್‌ ಮಾತನಾಡಿ, ಪಡಿತರ ಅಕ್ಕಿ ಚೀಲ ಪರಿಶೀಲಿಸಿ ಸೀಲ್‌ ಆಗಿಯೇ ಬರುತ್ತೇ, ನಮ್ಮ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ ಎಂದು ಸಭೆಗೆ ತಿಳಿಸಿದರು. ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಪಡಿತರ ವಿತರಣೆಯಲ್ಲಿ ಲೋಪವೆಸಗಿದ ಐದು ಪಡಿತರ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಹೊರರಾಜ್ಯ ಹಾಗೂ ಹೊರದೇಶದಿಂದ ನಮ್ಮ ಜಿಲ್ಲೆಗೆ ಬರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸುವಂತೆ ಸಂಸದೆ ಶೋಭಾ
ಕರಂದ್ಲಾಜೆ ಅಧಿಕಾರಿಗಳಿಗೆ ತಿಳಿಸಿದರು. ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯ ಅನೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ತಾಲೂಕು ಕೇಂದ್ರ ಆಸ್ಪತ್ರೆಗಳಿಗೂ ತಜ್ಞ ವೈದ್ಯರನ್ನು ಸರ್ಕಾರ ನೇಮಿಸಲು ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

Advertisement

ಜಿಲ್ಲಾಧಿಕಾರಿ ಡಾ| ಬಗಾರಿ ಗೌತಮ್‌ ಮಾತನಾಡಿ, ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ ಕಾರ್ಮಿಕರನ್ನು ವಾಪಾಸ್‌ ಕಳಿಸಲು ಆ್ಯಪ್‌ನಲ್ಲಿ ರಿಜಿಸ್ಟ್ರೇಷನ್‌ ಮಾಡಿ ಕಳಿಸಿಕೊಡುವಂತೆ ಉನ್ನತ ಅಧಿ ಕಾರಿಗಳು ನಿರ್ದೇಶನ ನೀಡಿದ್ದಾರೆ. ಇಂದು ಅಥವಾ ನಾಳೆ ನಾಳೆ ಆ್ಯಪ್‌ ಬಿಡುಗಡೆಯಾಗಲಿದೆ. ಆಯಾ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಕಳಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು. ಬಸ್‌ನಲ್ಲಿ ಕಳಿಸಲು ಹೆಚ್ಚಿನ ವೆಚ್ಚ ತಗುಲುವ ಹಿನ್ನೆಲೆಯಲ್ಲಿ ಖಾಸಗಿ ವಾಹನದಲ್ಲೂ ಕಳಿಸಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಆರೋಗ್ಯ ಇಲಾಖೆ ಸಚಿವ ಶ್ರೀರಾಮುಲು ಮಾತನಾಡಿ, ಕೊರೊನಾ ಸೋಂಕು ಇಲ್ಲದ ರಾಜ್ಯದ ಹದಿನಾಲ್ಕು ಜಿಲ್ಲೆಗಳ ಪೈಕಿ ಚಿಕ್ಕಮಗಳೂರು ಒಂದಾಗಿದ್ದು, ಕೊವಿಡ್‌ ಸೋಂಕು ಹರಡುವುದನ್ನು ತಡೆಯಲು ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ. ಕೊವಿಡ್‌ ಪರೀಕ್ಷೆಗಳು ಹೆಚ್ಚು ಹೆಚ್ಚು ನಡೆಸಲು ತಾಲೂಕು ಮಟ್ಟದ ಎಲ್ಲಾ ಆಸ್ಪತ್ರೆಗಳಲ್ಲೂ ವ್ಯವಸ್ಥೆ ರೂಪಿಸುವುದು. ಸಂಚಾರಿ ಕೊವಿಡ್‌ ಪರೀಕ್ಷಾ ಕೇಂದ್ರ, ಪ್ಲಾಸ್ಮಾ ಥೆರಪಿ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದರು. ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಜಿ.ಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಪಂ ಉಪಾಧ್ಯಕ್ಷ ವಿಜಯ್‌ಕುಮಾರ್‌, ಎಸ್‌ಪಿ ಹರೀಶ್‌ ಪಾಂಡೆ, ಜಿ.ಪಂ ಸಿಇಒ ಎಸ್‌.ಪೂವಿತ, ಎಡಿಸಿ ಡಾ| ಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next