Advertisement

ಕಾಫಿಗೆ ಮಾರುಕಟ್ಟೆ ದೊರೆಯದಿದ್ದರೆ ಸಂಕಷ್ಟ

12:15 PM Apr 19, 2020 | Naveen |

ಚಿಕ್ಕಮಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ದೊರಕದಿದ್ದರೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

Advertisement

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ವೈರಸ್‌ ತಡೆಗಟ್ಟಲು ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ರೈತರು ಬೆಳೆದ ಕಾಫಿ, ಮೆಣಸು, ಅಡಿಕೆಗಳಿಗೆ ಸರಿಯಾದ ಮಾರುಕಟ್ಟೆ ಸಿಗದೆ ಆರ್ಥಿಕ ನಷ್ಟ ಎದುರಿಸುತ್ತಿದ್ದು, ರೈತರಿಗೆ ಸೂಕ್ತ ಮಾರುಕಟ್ಟೆ ದೊರಕಿಸಿ ಅವರ ಸಂಕಷ್ಟಗಳಿಗೆ ನೆರವಾಗಬೇಕಾಗಿದೆ. ಇಲ್ಲವಾದಲ್ಲಿ ರೈತರು ಬಹಳ ನಷ್ಟ ಅನುಭವಿಸುತ್ತಾರೆ ಎಂದು ಹೇಳಿದರು.

ಲಾಕ್‌ಡೌನ್‌ನಿಂದ ಜಿಲ್ಲೆಯ ಬಡತನ ರೇಖೆಗಿಂತ ಕೆಳಗಿರುವರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮಧ್ಯಮ ವರ್ಗದ ಜನರು ಆರ್ಥಿಕವಾಗಿ ತೊಂದರೆಗೊಳಗಾಗಿದ್ದು, ಅವರ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೂಲಿ ಕೆಲಸಗಳಿಗೆ ತೆರಳಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ಪಡಿತರವನ್ನು ನೀಡಲಾಗಿದೆ. ತಾಲೂಕು ಹಾಗೂ ಗ್ರಾಮೀಣ ಪ್ರದೇಶದ ಬಿಪಿಎಲ್‌ ಕಾರ್ಡ್‌ ಹೊಂದದೇ ಇರುವ ಜನರಿಗೆ, ಪೌರಕಾರ್ಮಿಕರಿಗೆ, ಕಟ್ಟಡ, ಕೂಲಿ ಕಾರ್ಮಿಕರಿಗೂ ಆಹಾರ ಪಡಿತರವನ್ನು ವಿತರಿಸಬೇಕು ಎಂದ ಅವರು, ಪಡಿತರಗಳ ಗುಣಮಟ್ಟವನ್ನು ಪರೀಕ್ಷಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ಸೋಂಕು ಬಾರದಂತೆ ತಡೆಯಲು ಜಿಲ್ಲೆಯಲ್ಲಿ 54 ತಂಡಗಳನ್ನು ರಚನೆ ಮಾಡಲಾಗಿದ್ದು, 940 ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ತೆರಳಿ ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನೂ ತಾಲೂಕುಗಳಲ್ಲಿ ಹೆಚ್ಚಿನ ವೈದ್ಯರ ಅವಶ್ಯಕತೆಯಿದ್ದು, ಲ್ಯಾಬ್‌ ಟೆಕ್ನಿಶಿಯನ್‌ ಹಾಗೂ ನುರಿತ ವೈದ್ಯರನ್ನು ಕರೆಸಿಕೊಳ್ಳಬೇಕಾಗಿದೆ ಎಂದರು.

Advertisement

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೊರೊನಾ ಸೋಂಕಿನಿಂದ ದೂರವಿರಲು ಮಾಸ್ಕ್ ಉಪಯೋಗಿಸುವುದು ಅನಿವಾರ್ಯವಾಗಿದ್ದು, ಜಿಲ್ಲಾದ್ಯಂತ ಹಲವು ಸಂಘ-ಸಂಸ್ಥೆಗಳಿಂದ ತಯಾರಾದ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಗುಣಮಟ್ಟ ಹಾಗೂ ಸುರಕ್ಷತೆ ಹೊಂದಿರುವ ಮಾಸ್ಕ್ ಗಳನ್ನು ತಯಾರಿಸಲು ಟೈಲರ್‌ ಅಸೋಶಿಯೇಷನ್‌ ಸಹಕಾರ ಪಡೆಯುವಂತೆ ಸಲಹೆ ನೀಡಿದರು.

ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಮಾಸ್ಕ್ ವಿತರಿಸಬೇಕು. ಮುಖ್ಯವಾಗಿ ಆರೋಗ್ಯ ಸಿಬ್ಬಂದಿಗಳಿಗೆ ಸುರಕ್ಷತೆಯ ಹಿತದೃಷ್ಟಿಯಿಂದ ಮಾಸ್ಕ್ ನೀಡಬೇಕು. ತಾಲೂಕು ಗ್ರಾಮ ಪಂಚಾಯತ್‌ಗಳಲ್ಲಿ ಮಾಸ್ಕ್ ದೊರಕದೆ ಇರುವವರನ್ನು ಗುರುತಿಸಿ ಪ್ರತಿಯೊಬ್ಬರಿಗೂ ನೀಡಿ ಹೆಚ್ಚಿನ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡ ಮಾಹಿತಿ ಪಡೆದುಕೊಂಡ ಅವರು, ಲಾಕ್‌ ಡೌನ್‌ ಜಾರಿಯಲ್ಲಿ ಹೊರರಾಜ್ಯ, ಜಿಲ್ಲೆ, ವಿದೇಶಗಳಿಂದ ಜನರು ಬರದಂತೆ ತಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಚಿಕ್ಕಮಗಳೂರು ಜಿಲ್ಲೆ ಸೇಫ್‌ ಜೋನ್‌ನಿಂದ ಹೊರ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಎಸ್‌.ಪೂವಿತ, ಪೊಲೀಸ್‌ ವರಿಷ್ಠಾ ಧಿಕಾರಿ ಹರೀಶ್‌ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌, ನಗರಸಭೆ ಪೌರಾಯುಕ್ತ ಚಂದ್ರಶೇಖರ್‌ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮಂಜುನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next