ಚಿಕ್ಕಮಗಳೂರು: ಲಾಕ್‌ಡೌನ್ ಸಡಿಲಿಕೆ ಆಗಿರುವುದರಿಂದ ಜಿಲ್ಲೆಗೆ ಬರುವ ಹೊರದೇಶ, ಹೊರ ರಾಜ್ಯಗಳ ಪ್ರಯಾಣಿಕರು ಹಾಗೂ ಕಾರ್ಮಿಕರನ್ನು ಕ್ವಾರಂಟೈನ್‌ನಲ್ಲಿಸಿ ನಿಗಾವಹಿಸಿ ಜಿಲ್ಲೆಯನ್ನು ಹಸಿರು ವಲಯದಲ್ಲೇ ಇರಿಸಲು ಶ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೊರ ದೇಶ, ಹೊರ ರಾಜ್ಯ, ಹಾಗೂ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ನಲ್ಲಿ ಇರಿಸಲು ಕೈಗೊಳ್ಳುವ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಗೆ ಕೆಂಪು ವಲಯ ಹಾಗೂ ಸೋಂಕು ಹೆಚ್ಚಿರುವ ದೇಶಗಳಿಂದ ಬರುವಂತಹ ವ್ಯಕ್ತಿಗಳನ್ನು ನಗರದ ಬೀಕನಹಳ್ಳಿ ಹಾಗೂ ತೇಗೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪವಿತ್ರವನದ ಬಳಿಯ ಪೋಸ್ಟ್ ಮೆಟ್ರಿಕ್ ವಸತಿ ನಿಲಯಗಳಲ್ಲಿ ಇರಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಅಗತ್ಯವಿದ್ದಲ್ಲಿ ನಗರದ ಬೇಲೂರು ರಸೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಇರಿಸಲು ಕ್ರಮ ವಹಿಸಲಾಗುವುದು ಎಂದರು.
ಬೇರೆ ಬೇರೆ ಭಾಗಗಳಿಂದ ಬಂದವರನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇರಿಸಿ ಕಾಲಕಾಲಕ್ಕೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಬೇಕು ಮುಖ್ಯವಾಗಿ ವಿದೇಶಗಳಿಂದ ಬಂದವರನ್ನು ಮೊದಲನೇ ದಿನದಿಂದ ಕ್ವಾರಂಟೈನ್ ಅವಧಿ ಮುಗಿಯುವವರೆಗೂ ತಪಾಸಣೆಗೆ ಒಳಪಡಿಸಬೇಕು. ಜತೆಗೆ ಕ್ವಾರಂಟೈನ್‌ನಲ್ಲಿರುವವರು ತಪ್ಪಿಸಿಕೊಳ್ಳದಂತೆ ನಿಗಾವಹಿಸಬೇಕು. ಹಾಸ್ಟೆಲ್ ಕ್ವಾರಂಟೈನ್ ಮುಗಿದ ಬಳಿಕ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯ ಯಾವುದೇ ತಾಲೂಕಿಗೆ ಸೋಂಕಿತ ಪ್ರದೇಶಗಳಿಂದ ಬರುವ ವ್ಯಕ್ತಿಗಳನ್ನು ಕಡ್ಡಾಯವಾಗಿ ನಗರದ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ತಪಾಸಣೆಗೆ ಒಳಪಡಿಸಬೇಕು. ಈ ವೇಳೆ ಯಾರೊಬ್ಬರು ಅಡ್ಡಿಪಡಿಸುವಂತಿಲ್ಲ ಎಂದ ಅವರು, ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸಂಬಂಧಿತ ಯಾವುದೇ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ, ಸದ್ಯ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮವಹಿಸಿ ಜಿಲ್ಲೆ ಹಸಿರು ವಲಯದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಸಿಇಒ ಎಸ್.ಪೂವಿತಾ, ಎಸ್‌ಪಿ ಹರೀಶ್ ಪಾಂಡೆ, ಎಡಿಸಿ ಡಾ| ಕುಮಾರ್, ಉಪವಿಭಾಗಾಧಿಕಾರಿ ಡಾ| ಎಚ್.ಎಲ್.ನಾಗರಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.