Advertisement
ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿ ಯಿಂದ ಆದ ಹಾನಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವುದೇ ಸರಕಾರದ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕೆಲವು ತಾತ್ಕಾಲಿಕ ಪರಿಹಾರ ಕಾರ್ಯ ಈಗಾಗಲೇ ಆರಂಭಿಸಲಾಗಿದೆ. ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ ಎಂದು ತಿಳಿಸಿದರು.
Related Articles
Advertisement
ಸಂಪೂರ್ಣ ಸಮೀಕ್ಷೆಯ ನಂತರ ರಾಜ್ಯದ ಯಾವ ಪ್ರದೇಶದಲ್ಲಿ ಎಷ್ಟು ಹಾನಿಯಾಗಿದೆ ಎಂಬ ಅಂದಾಜು ಸಿಗಲಿದೆ. ವಾಸ ಮಾಡಲು ಮನೆ ನಿರ್ಮಿಸುವುದೇ ಸರಕಾರದ ಮೊದಲ ಆದ್ಯತೆಯಾಗಿದ್ದು, ನಂತರ ತೋಟ, ಗದ್ದೆ ಕಳೆದುಕೊಂಡಿರುವವರಿಗೆ ಬದಲಿ ಭೂಮಿ ನೀಡುವ ಬಗ್ಗೆ ಗಮನ ನೀಡಲಾಗುವುದು ಎಂದು ತಿಳಿಸಿದರು.
ಕಾಫಿ ತೋಟ, ಗದ್ದೆ, ಮನೆ ಹಾಳಾಗಿವೆ, ಸೇತುವೆಗಳು ಕೊಚ್ಚಿ ಹೋಗಿವೆ. ರಸ್ತೆಗಳು ನಾಶವಾಗಿವೆ. ಇದಕ್ಕೆ ಸಂಬಂಧಿಸಿ ಎಲ್ಲ ಇಲಾಖೆಗಳಿಂದ ಅಗತ್ಯ ವರದಿ ತರಿಸಿಕೊಳ್ಳಲಾಗುತ್ತಿದೆ. ಎಲ್ಲ ಮಾಹಿತಿ ಪಡೆದು ರಾಜ್ಯಾದ್ಯಂತ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಅಂದಾಜು 30 ಸಾವಿರ ಕೋಟಿ: ರಾಜ್ಯದ ನೆರೆ ಹಾಗೂ ಅತಿವೃಷ್ಟಿ ನಷ್ಟ 30,000 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಕೇಂದ್ರ ಸರ್ಕಾರ ಎಷ್ಟು ಪರಿಹಾರ ಕೊಡಲಿದೆಯೋ ಗೊತ್ತಿಲ್ಲ. ಕಳೆದ ವಾರ ದೆಹಲಿಗೆ ಹೋಗಿ ಗೃಹ ಮಂತ್ರಿಗಳ ಬಳಿ ಪರಿಸ್ಥಿತಿ ವಿವರಿಸಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿರುವೆ. ಅವರು ಸಹ ರಾಜ್ಯದ ಕೆಲವು ಕಡೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ರಾಜ್ಯದಲ್ಲಿ ಎಷ್ಟು ಅನಾಹುತ ಆಗಿದೆ ಎನ್ನುವುದು ಅವರಿಗೆ ಮನವರಿಕೆಯಾಗಿದೆ. ಇನ್ನೊಂದು ಸಲ ಸಮೀಕ್ಷೆ ಮಾಡಿಸಬೇಕಾದಲ್ಲಿ ಮತ್ತೂಂದು ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ನೆರೆ ಮತ್ತು ಬರ ಪರಿಹಾರ ಸ್ಥಿತಿ ಬಗ್ಗೆ ಅಧಿವೇಶನ ಕರೆಯಲು ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಮೊದಲು ಎಲ್ಲ ಕಡೆ ಹೋಗಿ ಪರಿಸ್ಥಿತಿ ಅರಿತು ಬಂದ ನಂತರ ಆ ಬಗ್ಗೆ ಯೋಚಿಸುವುದಾಗಿ ಹೇಳಿದರು.