ಚಿಕ್ಕಮಗಳೂರು: ಮಳೆಗಾಲ ಆರಂಭಗೊಂಡಿರುವುದರಿಂದ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಉಮೇಶ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 4, ತರೀಕೆರೆ ತಾಲೂಕಿನಲ್ಲಿ 1 ಹಾಗೂ ಕೊಪ್ಪ ತಾಲೂಕಿನಲ್ಲಿ 1 ಡೆಂಘೀ ಪ್ರಕರಣ ಸೇರಿದಂತೆ ಇದುವರೆಗೂ ಜಿಲ್ಲೆಯಲ್ಲಿ 19 ಡೆಂಘೀ ಪ್ರಕರಣ, 2 ಮಲೇರಿಯಾ ಪ್ರಕರಣ ಹಾಗೂ 5 ಚಿಕೂನ್‌ಗುನ್ಯಾ ಪ್ರಕರಣಗಳು ಚಿಕ್ಕಮಗಳೂರು ತಾಲೂಕಿನಲ್ಲಿ ಕಂಡುಬಂದಿವೆ. ಪ್ರಕರಣ ಕಂಡುಬಂದ ಪ್ರದೇಶಗಳಲ್ಲಿ ಲಾರ್ವ ಸರ್ವೇ ಕಾರ್ಯ ನಡೆಸಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಸಾಂಕ್ರಮಿಕ ರೋಗ ಹತೋಟಿಯಲ್ಲಿದೆ. ಜಿಲ್ಲೆಯ ಮಲೇರಿಯಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲಾ ಕಡೆಗಳಲ್ಲಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಯಾವ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರಿಲ್ಲ ಅಂತಹ ಕಡೆಗಳಲ್ಲಿ ಬೇರೆ ಕಡೆಯಿಂದ ಆಶಾ ಕಾರ್ಯಕರ್ತೆರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಸರ್ವೇ ಕಾರ್ಯ ಮಾಡಿಸುತ್ತಿದ್ದೇವೆ. ಮಳೆಗಾಲದ ಸಂದರ್ಭದಲ್ಲಿ ನೀರು ಶೇಖರಣೆಯಾಗುವುದರಿಂದ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳ ಹರಡುವಿಕೆ ಜಾಸ್ತಿ ಇರುವುದರಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ 8 ಖಾಸಗಿ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಸರ್ಕಾರ ಆಯ್ಕೆ ಮಾಡಿ ಆದೇಶ ನೀಡಿದೆ. ಸರ್ಕಾರದ ಮಾರ್ಗಸೂಚಿಯಂತೆ ಈ ಆಸ್ಪತ್ರೆಗಳು ಕಾರ್ಯ ನಿರ್ವಹಿಸಲಿವೆ. ಸರ್ಕಾರದ ಮಾರ್ಗಸೂಚಿಯಲ್ಲಿ ಬೇರೆ ಬೇರೆ ರೀತಿಯ ಚಿಕಿತ್ಸಾ ವೆಚ್ಚ ನಿಗದಿಪಡಿಸಿದೆ. ಸರ್ಕಾರಿ ಆಸ್ಪತ್ರೆಯಿಂದ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವಂತೆ ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಒಂದು ದರ, ಸೋಂಕಿತ ವ್ಯಕ್ತಿಯೇ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರೆ ಒಂದು ದರ. ಖಾಸಗಿ ಆಸ್ಪತ್ರೆಯ ಜನರಲ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆದರೆ ಒಂದು ದರ ಹಾಗೂ ಸೋಂಕು ಉಲ್ಬಣಗೊಂಡ ವ್ಯಕ್ತಿಗೆ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಿದರೆ ಒಂದು ಮಾದರಿಯ ದರವನ್ನು ಸರ್ಕಾರ ನಿಗದಿ ಮಾಡಿದೆ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಮಾರ್ಗಸೂಚಿಯಂತೆ ಚಿಕಿತ್ಸೆ ನೀಡಲಿವೆ ಎಂದರು.
ಜೂ.25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ 58 ಪರೀಕ್ಷಾ ಕೇಂದ್ರಗಳನ್ನು ತೆರೆದಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯಿಂದ 3 ಮಂದಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಥರ್ಮಲ್ ಸ್ಕ್ಯಾನರ್, ಎನ್-95 ಮಾಸ್ಕ್ ಗಳನ್ನು ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಸಹಕಾರ ನೀಡಿದೆ ಎಂದು ತಿಳಿಸಿದರು.
ಲಾಕ್‌ಡೌನ್ ಸಂದರ್ಭಲ್ಲಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿತ್ತು. ಲಾಕ್‌ಡೌನ್ ಸಡಿಲಗೊಂಡ ನಂತರ ಎಂದಿನಂತೆ ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಲಾಗಿದೆ. ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದರು.
ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 10 ಜನ ವೈದ್ಯರು, 20 ಜನ ನರ್ಸ್, 10 ಡಿ ಗ್ರೂಪ್ ನೌಕರರು ಹಾಗೂ 5 ಜನ ಲ್ಯಾಬ್ ತಂತ್ರಜ್ಞರ ನೇರ ಸಂದರ್ಶನದ ಮೂಲಕ ನೇಮಕಕ್ಕೆ ಸರ್ಕಾರ ಆದೇಶ ನೀಡಿತ್ತು. ನರ್ಸ್, ಡಿ ಗ್ರೂಪ್ ನೌಕರರು ಹಾಗೂ ಲ್ಯಾಬ್ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ತೆರೆಯಲು ಕಾಮಗಾರಿ ನಡೆಯುತ್ತಿದ್ದು, ಕಟ್ಟಡ, ಮೂಲಭೂತ ಸೌಲಭ್ಯ ಕಾಮಗಾರಿ ಮುಗಿದಿದೆ. ಟೆಸ್ಟಿಂಗ್ ಯಂತ್ರೋಪಕರಣಗಳು ವಿದೇಶದಿಂದ ತರಿಸಿಕೊಳ್ಳಬೇಕಾಗಿರುವುದರಿಂದ ತಡವಾಗುತ್ತಿದೆ. ಸದ್ಯದಲ್ಲೇ ಟೆಸ್ಟಿಂಗ್ ಲ್ಯಾಬ್ ಕಾರ್ಯಾರಂಭ ಮಾಡಲಿದ್ದು, ದಿನಕ್ಕೆ 500 ರಿಂದ 600 ಮಂದಿಯ ಸ್ವಾಬ್ ಟೆಸ್ಟ್ ಸಾಧ್ಯವಾಗಲಿದೆ.
ಡಾ| ಉಮೇಶ್,
ಜಿಲ್ಲಾ ಆರೋಗ್ಯಾಧಿಕಾರಿ