Advertisement

ರಾಜ್ಯದಲ್ಲಿ ಸ್ವಂತ ಬಲದೊಂದಿಗೆ ನಿಲ್ಲುವುದೇ ಗುರಿ

12:14 PM May 25, 2019 | Team Udayavani |

ಚಿಕ್ಕಮಗಳೂರು: ಜನಾಕ್ರೋಶ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಕರ್ನಾಟಕದಲ್ಲಿ ನಮ್ಮ ಸ್ವಂತ ಬಲದ ಮೇಲೆ ನಿಲ್ಲುವುದೇ ನಮ್ಮಗುರಿಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾಯದರ್ಶಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿವಿಧ ಘಟಕಗಳು ಶುಕ್ರವಾರ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿವೆ. ಈ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಕಪಾಳಮೋಕ್ಷವಾಗಿದೆ. ಜನಾಕ್ರೋಶ ಎದುರಿಸುತ್ತಿರುವ ಸರ್ಕಾರ ಹೆಚ್ಚು ದಿನ ಉಳಿಯುವ ಸಾಧ್ಯತೆ ಇಲ್ಲ. ನಮ್ಮಗುರಿ ಕರ್ನಾಟಕದಲ್ಲಿ ನಮ್ಮ ಸ್ವಂತ ಬಲದ ಮೇಲೆ ನಿಲ್ಲುವುದಾಗಿದೆ. ಈ ಕೆಲಸ ನಾಳೆಯಿಂದ ಶುರುವಾಗಲಿದೆ ಎಂದು ಹೇಳಿದರು.

ಯುಡಿಯೂರಪ್ಪ ರಾಜ್ಯದಲ್ಲಿ 22 ಸೀಟು ಗೆಲ್ಲಲಿದ್ದೇವೆ ಎಂದು ಹೇಳುತ್ತಿದ್ದರೂ, ಆ ನಿರೀಕ್ಷೆಗೂ ಮೀರಿ ಜನ ಹೆಚ್ಚು ಸೀಟು ಗೆಲ್ಲಿಸಿದ್ದಾರೆ. ಮಹಾಘಟಬಂಧನದ ಪ್ರಯತ್ನವೂ ಕರ್ನಾಟಕದಲ್ಲಿ ಮೊದಲು ನಡೆಯಿತು. ಇದಕ್ಕೂ ಅವಮಾನವಾಗಿದೆ. ಕುಟುಂಬ ರಾಜಕಾರಣ, ಜನ, ರೈತವಿರೋಧಿ ಸರ್ಕಾರ ಒಪ್ಪುವುದಿಲ್ಲ ಎಂಬುದನ್ನು ಚುನಾವಣೆ ಮೂಲಕ ಜನ ತೋರಿಸಿದ್ದಾರೆ. ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌, ಡಾ|ಪರಮೇಶ್ವರ್‌ ಅವರು ಮೋದಿ ವಿರುದ್ಧವಾಗಿ ಕೀಳು ಮಟ್ಟದಲ್ಲಿ ಮಾತನಾಡಿದರು. ಆದರೆ, ಜನ ಬುದ್ಧಿವಂತರಿದ್ದಾರೆ. ದ್ವೇಷದ ರಾಜಕಾರಣ ಒಪ್ಪುವುದಿಲ್ಲ. ಅನ್ನುವ ಸಂದೇಶವನ್ನು ನೀಡಿದರು ಎಂದು ಹೇಳಿದರು.

ಲೋಕಸಭೆಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದು, ಅನಿವಾರ್ಯ ಎನಿಸಿದಾಗ ಕೆಲವು ಮಸೂದೆಗಳನ್ನು ತಿದ್ದುಪಡಿ ಮಾಡಲು ಈ ಹಿಂದೆ ಎನ್‌ಡಿಎ ಸರ್ಕಾರಕ್ಕೆ 2:3 ಬಹುಮತವಿರಲಿಲ್ಲ. ಹಾಗಾಗಿ ಲೋಕಸಭೆಯಲ್ಲಿ ಪಾಸಾದ ಮಸೂದೆಗಳು ರಾಜ್ಯ ಸಭೆಯಲ್ಲಿ ಹಾಗೆ ಕೊಳೆಯುತ್ತಿದ್ದವು. ಆದರೆ, ಈ ಬಾರಿ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ನಮಗೆ ಪೂರ್ಣ ಬಹುಮತವಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಮಸೂದೆಗಳನ್ನು ಮುಂದಿನ 5 ವರ್ಷದಲ್ಲಿ ನಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ತಿಳಿಸಿದರು.

ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ಆದರೆ, ಇಷ್ಟೊಂದು ಅಂತರದಲ್ಲಿ ಗೆಲ್ಲಲು ಕಾರ್ಯಕರ್ತರ ಶ್ರಮವೇ ಕಾರಣ. ಬೆಂಗಳೂರಿನ ಬುದ್ಧಿವಂತ ಮತದಾರರು ಶೇ.40 ರಿಂದ 50 ರಷ್ಟು ಮತದಾನ ಮಾಡಿದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬುದ್ಧಿವಂತ ಜನ ಶೇ.70 ರಷ್ಟು ಮತದಾನ ಮಾಡಿದ್ದಾರೆ ಎಂದು ತಾಳೆ ಹಾಕಿದರು.

Advertisement

ದೇಶದಲ್ಲಿ ಮೋದಿ ಪರವಾದ ವಾತಾವರಣವಿತ್ತು. ಆದರೂ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಒಡಿಸ್ಸಾದಲ್ಲಿ ಏನಾಗುತ್ತೋ ಎಂಬ ಆತಂಕ ಇತ್ತು. ಪಶ್ಚಮ ಬಂಗಾಳದಲ್ಲಿ ಯೋಗಿ ಆದಿತ್ಯನಾಥ ಮತ್ತು ಅಮಿತ್‌ಶಾ ಅವರ ಹೆಲಿಕಾಪ್ಟರ್‌ ಇಳಿಯಲು ಅವಕಾಶವನ್ನೇ ನೀಡಲಿಲ್ಲ. ಅದನ್ನೆಲ್ಲಾ ಮೀರಿ ಅಲ್ಲಿ ಹೆಚ್ಚು ಸ್ಥಾನವನ್ನು ನಮ್ಮ ಪಕ್ಷ ಪಡೆದಿದೆ.ದಕ್ಷಿಣ ಭಾರತದಲ್ಲಿ ಕರ್ನಾಟಕದ ಕೊಡುಗೆ ಅಪಾರ ಎಂದರು.

ಪ್ರಾಮಾಣಿಕ ಪ್ರಯತ್ನ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಲವು ಸಮಸ್ಯೆಗಳು ನನ್ನ ಗಮನದಲ್ಲಿವೆ. ಮುಂದೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರಾಗಿದೆ. ಇನ್ನು ಮೂರು ವರ್ಷದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಹೇಳಿದರು.

ಶಾಸಕ ಸಿ.ಟಿ.ರವಿ, ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ಕಾಫಿಮಂಡಳಿ ಅಧ್ಯಕ್ಷ ಎಂ.ಎಸ್‌.ಭೋಜೇಗೌಡ, ಜಿಪಂ ಅಧ್ಯಕ್ಷೆ ಸುಜಾತ, ಸದಸ್ಯರಾದ ಜಸಂತಾ, ಸೋಮಶೇಖರ್‌, ಹಿರಿಗಯ್ಯ, ಮುಖಂಡರಾದ ತಮ್ಮಯ್ಯ, ರಂಗನಾಥ, ರಾಜಪ್ಪ, ಸಿ.ಎಚ್.ಲೋಕೇಶ್‌,ವೇಣುಗೋಪಾಲ್, ಕಲ್ಮರುಡಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next