Advertisement

ಮೈತ್ರಿ ಬಿಗಿ ಹಿಡಿತ-ಬಿಜೆಪಿಗೆ ಹೊಡೆತ?

01:27 PM Apr 27, 2019 | Naveen |

ಚಿಕ್ಕಮಗಳೂರು: ಮಲೆನಾಡು, ಬಯಲು ಸೀಮೆ ಪ್ರದೇಶಗಳನ್ನು ಹೊಂದಿರುವ, 2 ತಾಲೂಕುಗಳನ್ನು ಒಳಗೊಂಡಿರುವ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2014ರ ಲೋಕಸಭಾ ಚುನಾವಣೆಗಿಂತಲೂ ಈ ಬಾರಿಯ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿನ ಹೆಚ್ಚಿಗೆ ಮತದಾನವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ.70.88 ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಇಲ್ಲಿ ಶೇ.72.04 ರಷ್ಟು ಮತದಾನವಾಗಿದೆ.

Advertisement

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿ ಮಧ್ಯೆ ಜಿದ್ದಾಜಿದ್ದಿಯ ಹಣಾಹಣಿ ನಡೆದಿರುವ ಸಾಧ್ಯತೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ಅಭ್ಯರ್ಥಿಗಿಂತ ಸುಮಾರು 7 ಸಾವಿರದಷ್ಟು ಮತಗಳನ್ನು ಹೆಚ್ಚಾಗಿ ಪಡೆದಿದ್ದರು. ಆದರೆ ಈ ಬಾರಿ ಯಾರೇ ಮುನ್ನಡೆ ಸಾಧಿಸಿದರೂ ಅಂತರ ಮಾತ್ರ ಅತೀ ಕಡಿಮೆ ಮತಗಳಲ್ಲಿರಲಿದೆ ಎನ್ನಲಾಗುತ್ತಿದೆ.

ಬಲಾಬಲ: ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿದ್ದು, ತಾಪಂ ಆಡಳಿತವೂ ಬಿಜೆಪಿ ಕೈಲಿದೆ. ತರೀಕೆರೆ ಪುರಸಭೆ ಆಡಳಿತವು ಕಾಂಗ್ರೆಸ್‌ ತೆಕ್ಕೆಯಲ್ಲಿದೆ. ಜೆಡಿಎಸ್‌ನ ಇಬ್ಬರು ವಿಧಾನಪರಿಷತ್‌ ಸದಸ್ಯರು ಮೈತ್ರಿ ಪಕ್ಷದೊಂದಿಗೆ ಇದ್ದಾರೆ.

ಮೈತ್ರಿ ಪರ ಕೆಲಸ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಕಣಕ್ಕಿಳಿದಿದ್ದ ಟಿ.ಎಚ್. ಶಿವಶಂಕರಪ್ಪ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಸ್‌.ಎಂ. ನಾಗರಾಜ್‌ ಅವರೊಂದಿಗೆ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಜಿ.ಎಚ್. ಶ್ರೀನಿವಾಸ್‌ ಹಾಗೂ ಗೋಪಿಕೃಷ್ಣ ಇವರೆಲ್ಲ ಒಟ್ಟಾಗಿ ಈ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರ ಪರವಾಗಿ ಕೆಲಸ ಮಾಡಿರುವುದು ಮೈತ್ರಿ ಪಕ್ಷದ ಅಭ್ಯರ್ಥಿಗೆ ವರವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಪಕ್ಷದಲ್ಲೇ ಶೋಭಾಗೆ ವಿರೋಧ: ಈ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದಲ್ಲಿಯೇ ವಿರೋಧವಿತ್ತು. ಆದರೆ, ಇಲ್ಲಿಯೂ ಸಹ ಪ್ರಧಾನಿ ನರೇಂದ್ರ ಮೋದಿ ಹವಾ ಇದ್ದುದರಿಂದಾಗಿ ಬಿಜೆಪಿಗೆ ಸ್ವಲ್ಪಮಟ್ಟಿನ ಅನುಕೂಲವಾಗಿದೆ.

Advertisement

ಸಂಘ-ಪರಿವಾರ ಮುತುವರ್ಜಿ ವಹಿಸಿಲ್ಲ: ಮೂಲ ಬಿಜೆಪಿಯವರು ಹಾಗೂ ಸಂಘ ಪರಿವಾರದವರನ್ನು ಶಾಸಕರಾಗಲಿ, ಅಭ್ಯರ್ಥಿಯಾಗಲಿ ಹೆಚ್ಚಿನ ಮಟ್ಟಿಗೆ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಅವರುಗಳು ಹೆಚ್ಚಿನ ಮುತುವರ್ಜಿ ವಹಿಸಿ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ. ಇದು ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು ಎಂಬ ಮಾತುಗಳೂ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಜನರ ಆಶೋತ್ತರಕ್ಕೆ ಶೋಭಾ ಸ್ಪಂದಿಸಿಲ್ಲ: ಜನಶತಾಬ್ದಿ ರೈಲಿಗೆ ತರೀಕೆರೆಯಲ್ಲಿ ನಿಲುಗಡೆ ಕೊಡಬೇಕೆಂಬ ಬೇಡಿಕೆ ಹೆಚ್ಚಾಗಿದ್ದರೂ ಸಂಸದರು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ. ರೈಲಿಗೆ ತರೀಕೆರೆಯಲ್ಲಿ ನಿಲುಗಡೆ ನೀಡಿದ್ದರೆ ಗ್ರಾಮೀಣ ಪ್ರದೇಶದ ಜನತೆಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮತದಾರರು ಶೋಭಾ ವಿರುದ್ಧ ಅಸಮಾಧಾನಗೊಂಡಿದ್ದರು ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಅವಕಾಶ ಬಳಸಿಕೊಳ್ಳುವಲ್ಲಿ ಮೈತ್ರಿ ವಿಫಲ: ಕ್ಷೇತ್ರದಲ್ಲಿ ಹೆಚ್ಚಿನ ಮುನ್ನಡೆ ಪಡೆಯುವ ಅವಕಾಶವಿದ್ದರೂ ಅದನ್ನು ಮೈತ್ರಿ ಪಕ್ಷದವರು ಸರಿಯಾಗಿ ಬಳಸಿಕೊಳ್ಳಲಿಲ್ಲ. ಮತ್ತಷ್ಟು ಸಂಘಟಿತ ಪ್ರಯತ್ನ ಮಾಡಿದ್ದರೆ ಮತ್ತಷ್ಟು ಲಾಭ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಇದರಲ್ಲಿ ಮೈತ್ರಿ ಪಕ್ಷದವರು ವಿಫಲರಾಗಿದ್ದಾರೆ ಎಂಬ ಮಾತುಗಳೂ ಕ್ಷೇತ್ರದ ಕೆಲಭಾಗಗಳಲ್ಲಿ ಕೇಳಿ ಬರುತ್ತಿವೆ.

ಮೋದಿ ಅಲೆ: 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರು, ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರಮೋದಿ ಪರವಾದ ಅಲೆಯಿದೆ. ಯುವ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜಾತಿ ಗೌಣವಾಗಿದೆ. ಮೋದಿ ನೋಡಿ ಮತದಾರರು ಮತ ಹಾಕಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಡಿ.ಎಸ್‌. ಸುರೇಶ್‌ ಇರುವುದು, ಕಾರ್ಯಕರ್ತರ ಸಂಘಟನೆಯ ಫಲದಿಂದ ಬಿಜೆಪಿ 10,000ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಲಿದೆ. ಕಳೆದ ಚುನಾವಣೆಗಿಂತ ಈ ಬಾರೀ ಹೆಚ್ಚಿನ ಮತದಾನವಾಗಿರುವುದು ಕೂಡ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಲೆಕ್ಕಚಾರ ಹಾಕಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next