Advertisement
ಗುರುವಾರ ಬೆಳಗ್ಗೆ 7 ಗಂಟೆಯಿಂದ ಜಿಲ್ಲಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ಮತದಾನ ಆರಂಭವಾಯಿತು. ಬೆಳಗ್ಗೆ ವೇಗವಾಗಿನಡೆದ ಮತದಾನ ಮಧ್ಯಾಹ್ನದ ವೇಳೆಗೆ ಸ್ವಲ್ಪ ನಿಧಾನವಾಗಿದ್ದು, ಸಂಜೆ ಪುನಃ ವೇಗ ಪಡೆದುಕೊಂಡಿತು.
ಯುವತಿಯರು ಹೆಚ್ಚಿನ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಎಲ್ಲೆಡೆ ಕಂಡು ಬಂತು. ವಯೋವೃದ್ಧರು, ಅಂಗವಿಕಲರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಎಲ್ಲ ಮತಗಟ್ಟೆಗಳ ಬಳಿಯಲ್ಲಿಯೂ ನೆರೆದಿದ್ದ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಕೊನೆಯ ಪ್ರಯತ್ನವಾಗಿ ಮತದಾನ ಮಾಡಲು ಬರುವವರನ್ನು ರಸ್ತೆಯಲ್ಲಿಯೇ ಅಡ್ಡಗಟ್ಟಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಮತ ಚಲಾಯಿಸಿದ ಪ್ರಮುಖರು: ಬಾಳೆಹೊನ್ನೂರಲ್ಲಿ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನರೇಣುಕ ಡಾ|
ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಕೊಪ್ಪ ತಾಲೂಕಿನಲ್ಲಿ ಹರಿಹರಪುರ ಮಠದ ಶ್ರೀ ಸಚ್ಚಿದಾನಂದ
ಸ್ವಾಮೀಜಿ ಮತದಾನ ಮಾಡಿದರು.
Related Articles
ವಕ್ತಾರ ಎಸ್. ಎಲ್. ಭೋಜೇಗೌಡ ಪತ್ನಿ ಸಮೇತರಾಗಿ ಮತಗಟ್ಟೆಗೆ ಆಗಿಸಿ ಹಕ್ಕು ಚಲಾಯಿಸಿದರು. ಕಡೂರು ತಾಲೂಕು ಸಖರಾಯಪಟ್ಟಣದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಮತ ಹಾಕಿದರು. ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ತಮ್ಮ ಹಕ್ಕು ಚಲಾಯಿಸಿದರು.
Advertisement
ಮತದಾರರ ಪಟ್ಟಿ ಗೊಂದಲ ಕಡಿಮೆ: ಬಹುತೇಕ ಎಲ್ಲ ಚುನಾವಣೆಗಳಲ್ಲೂ ಮತದಾರರ ಪಟ್ಟಿಯಲ್ಲಿನ ಗೊಂದಲ ಸಾಮಾನ್ಯ. ಆದರೆ ಈ ಚುನಾವಣೆಯಲ್ಲಿ ಈ ಗೊಂದಲ ಎಲ್ಲಿಯೂ ಕಂಡು ಬರಲಿಲ್ಲ. ಚುನಾವಣೆಗೂ ಮುನ್ನ ಎಲ್ಲ ಬೂತ್ಗಳಲ್ಲಿಮತದಾರರ ಪಟ್ಟಿ ಪ್ರಕಟಿಸಿ ತಪ್ಪುಗಳನ್ನು ತಿದ್ದಿಸಲು ಅವಕಾಶ ನೀಡಿದ್ದ ಕಾರಣ ಈ ಬಾರಿ ಈ ಗೊಂದಲ ಕಂಡು ಬರಲಿಲ್ಲ. ಬಹಿಷ್ಕಾರ : ಲಿಂಗದಹಳ್ಳಿ ಹೋಬಳಿಯ ಮಲ್ಲಿಗೇನಹಳ್ಳಿ ಮತಗಟ್ಟೆಯಲ್ಲಿ ಮತದಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿದ್ದರು.
980 ಮತದಾರರನ್ನು ಹೊಂದಿರುವ ಮಲ್ಲಿಗೇನಹಳ್ಳಿ, ಸಿದ್ದಾಪುರ ಮತ್ತು ಸಿದ್ದಾಪುರ ತಾಂಡಾದ ಗ್ರಾಮಸ್ಥರು ಮತದಾನದಿಂದ
ದೂರ ಉಳಿದರು. ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಹೊರತುಪಡಿಸಿ ಯಾವ ಮತದಾರರು ಮತದಾನ ಕೇಂದ್ರದತ್ತ
ಸುಳಿಯಲಿಲ್ಲ, ಹೀಗಾಗಿ ಮತಗಟ್ಟೆಯ ಬಳಿ ಜನರಿಲ್ಲದೆ ಬಿಕೋ ಎನಿಸುತ್ತಿತ್ತು. ಮತದಾನ ಬಹಿಷ್ಕರಿಸಲಾಗುತ್ತಿದೆ ಎಂಬ ಸುಳಿವಿನ
ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕರು ಮತ್ತು ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಗ್ರಾಮಕ್ಕೆ ತೆರಳಿ ಮನವೊಲಿಸುವ ಪ್ರಯತ್ನ
ನಡೆಸಿದರು. ಮತದಾರರು ಅವರ ಮಾತಿಗೆ ಕಿವಿಗೊಡಲಿಲ್ಲ. ಮೂಡಿಗೆರೆ ತಾಲೂಕು ಕೆಂಜಿಗೆ ಗ್ರಾಮದಲ್ಲಿದ್ದ ಮತಗಟ್ಟೆಯನ್ನು
ಬೇರೆಡೆಗೆ ಸ್ಥಳಾಂತರಿಸಿರುವುದನ್ನು ಖಂಡಿಸಿ ಕೆಂಜಿಗೆ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರು. ಮಧ್ಯಾಹ್ನದವರೆಗೂ ಯಾವುದೇ ಗ್ರಾಮಸ್ಥರು ಮತದಾನ ಮಾಡಿರಲಿಲ್ಲ. ಚುನಾವಣೆ ಬಹಿಷ್ಕರಿಸಿರುವ ವಿಚಾರ ತಿಳಿದ ಕೂಡಲೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಅಧಿಕಾರಿಗಳೊಂದಿಗೆ
ಗ್ರಾಮಕ್ಕೆ ತೆರಳಿ ಗ್ರಾಮಸ್ಥರುಗಳೊಂದಿಗೆ ಚರ್ಚಿಸಿದರು. ಮುಂದಿನ ಚುನಾವಣೆಗೆ ಮತಗಟ್ಟೆಯನ್ನು ಗ್ರಾಮದಲ್ಲಿ ಪುನಃ ತೆರೆಯುವ ಭರವಸೆ ನೀಡಿದ ನಂತರ ಗ್ರಾಮಸ್ಥರು ಮತದಾನದಲ್ಲಿ ಪಾಲ್ಗೊಂಡರು. ಕೈಕೊಟ್ಟ ಇ.ವಿ.ಎಂ.: ಜಿಲ್ಲೆಯ ಹಲವೆಡೆಗಳಲ್ಲಿ ಇ.ವಿ.ಎಂ.ಗಳು ಕೈಕೊಟ್ಟಿದ್ದರಿಂದ ಮತದಾನಕ್ಕೆ ವಿಳಂಬವಾಗಿದೆ. ನಗರದ ಎಂ.ಜಿ.ರಸ್ತೆಯ ಬೂತ್ ಸಂಖ್ಯೆ 164 ರಲ್ಲಿ ಬೆಳಗ್ಗೆ ಇ.ವಿ.ಎಂ. ಕೈಕೊಟ್ಟಿದ್ದರಿಂದ ಮತದಾನ 7 ಗಂಟೆಗೆ ಆರಂಭಗೊಳ್ಳಲಿಲ್ಲ.
ಅಧಿಕಾರಿಗಳು ಬೇರೆ ಇ.ವಿ.ಎಂ. ಯಂತ್ರ ತಂದ ನಂತರ ಸುಮಾರು 40 ನಿಮಿಷ ತಡವಾಗಿ ಮತದಾನ ಆರಂಭವಾಯಿತು.ನಗರದ ಗೃಹ
ಮಂಡಳಿ ಬಡಾವಣೆಯ ಮತಗಟ್ಟೆಯಲ್ಲಿ ಮಧ್ಯಾಹ್ನ 1.30ಕ್ಕೆ ಇ.ವಿ.ಎಂ. ಕೈಕೊಟ್ಟಿತು. ಅದನ್ನು ಸರಿಪಡಿಸಲು ಸುಮಾರು ಅರ್ಧಗಂಟೆ ಕಾಲ ಮತದಾನ ಸ್ಥಗಿತಗೊಳಿಸಲಾಗಿತ್ತು. ಉಳಿದಂತೆ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಹಲವೆಡೆ ಇ.ವಿ.ಎಂ.ಗಳುಕೈಕೊಟ್ಟು ಮತದಾನಕ್ಕೆ
ಸ್ವಲ್ಪ ಅಡ್ಡಿಯಾದ ಘಟನೆ ವರದಿಯಾಗಿದೆ. ಜಿಲ್ಲಾದ್ಯಂತ ಚುನಾವಣೆ ಶಾಂತಿಯುತವಾಗಿ ನಡೆಯಲು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.