Advertisement

ಮೋದಿ ಆಡಳಿತದಲ್ಲಿ ಸೈನಿಕರ ಕುಟುಂಬಕ್ಕೆ ನೆಮ್ಮದಿ

03:51 PM Apr 13, 2019 | Naveen |

ಕೊಪ್ಪ: ನರೇಂದ್ರ ಮೋದಿ ಸರ್ಕಾರದಲ್ಲಿ ದೇಶದ ಸೈನಿಕರ ಕುಟುಂಬ ಸಂತೋಷದಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ದಿನೇಶ್‌ ತಿಳಿಸಿದರು.

Advertisement

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ರಾಘವೇಂದ್ರ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದಿನ ಯುಪಿಎ ಆಡಳಿತ ಕಾಲದಲ್ಲಿ ಪಾಕಿಸ್ತಾನದ ಸೇನೆ ನಮ್ಮ ಗಡಿಯೊಳಗೆ ನುಗ್ಗಿ ನಮ್ಮ ಸೈನಿಕರ ರುಂಡವನ್ನು ಕಡಿದು ಚೆಂಡಾಡಿದಾಗ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ 15 ದಿನಗಳವರೆಗೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂದರು.

ಇತ್ತೀಚೆಗೆ ನಡೆದ ಪುಲ್ವಾಮಾ ಉಗ್ರ ದಾಳಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹುತಾತ್ಮರಾದ ಒಬ್ಬ ಸೈನಿಕರ ಒಂದೊಂದು ರಕ್ತದ ಹನಿಗೂ ಶತ್ರುಗಳು ಬಾರೀ ಬೆಲೆ ತೆರಬೇಕಾಗುತ್ತದೆ. ಸೈನಿಕರ ಒಂದು ತಲೆಗೆ ಪ್ರತಿಯಾಗಿ 10 ಉಗ್ರರ ತಲೆ ತೆಗೆಯಲಾಗುವುದು ಎಂಬುದಾಗಿ ಗುಡುಗಿದ್ದರು ಎಂದು ಹೇಳಿದರು.

ಹೇಳಿದ 12 ದಿವಸಕ್ಕೆ ನಮ್ಮ ಸೈನಿಕರು ಪಾಕಿಸ್ತಾನದ ಉಗ್ರ ನೆಲೆಗಳಿಗೆ ಸರ್ಜಿಕಲ್‌ ಸ್ಟ್ರೆಕ್ ಮೂಲಕ ದಾಳಿ ನಡೆಸಿ 350ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಇದು ಮೋದಿಯವರ ಕಠಿಣ ಆಡಳಿತ ನೀತಿಗೆ ಸಾಕ್ಷಿ ಎಂದರು.

Advertisement

ಮೋದಿ ಪ್ರಧಾನಿಯಾಗುವ ಮುನ್ನ ನಿವೃತ್ತ ಸೈನಿಕರಿಗೆ ಸಿಗುತ್ತಿದ್ದ ಪಿಂಚಣಿ ಊಟಕ್ಕೂ ಸಾಲುತ್ತಿರಲಿಲ್ಲ. ನಂತರ ಸಮಾನ ಹುದ್ದೆ ಸಮಾನ ವೇತನ ಜಾರಿಗೊಳಿಸುವ ಮೂಲಕ ಸೈನಿಕರ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿದ್ದಾರೆ.

ಇದಕ್ಕಾಗಿ 60,000 ಕೋಟಿ ಅನುದಾನ ನೀಡಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರೈಕೆ ಮಾಡಿದ್ದಾರೆ. ಬುಲೆಟ್‌ ಪ್ರೂಫ್‌ ಜಾಕೆಟ್‌ಗಳನ್ನು ಒದಗಿಸುವ ಮೂಲಕ ಸೈನಿಕರ ನೈತಿಕ ಸ್ಥೈ ರ್ಯ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

ಡಿ.ಎನ್‌. ಜೀವರಾಜ್‌ ಶಾಸಕರಾಗಿದ್ದಾಗ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಗ್ರೂಪ್‌ ಡಿ. ನೌಕರರನ್ನು ನೇಮಕ ಮಾಡಿದ್ದರು. ಆದರೆ ಈಗಿನ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ತೆಗೆದುಹಾಕಿದ್ದಾರೆ. ಈಗ ಹೊಸದಾಗಿ ನೇಮಕ ಮಾಡಬೇಕಾದರೆ 50 ಸಾವಿರ ರೂ. ಲಂಚ ನೀಡಬೇಕಾದ ಪರಿಸ್ಥಿತಿ ಉಂಟಾಗಿದೆ. ಒಂದು ಪ್ರಕರಣದಲ್ಲಿ ವಿಷಯ ಗೊತ್ತಾಗಿ ಜಿಪಂ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ವಿಚಾರಣೆಗೊಳಪಡಿಸಿ ಹಣವನ್ನು ವಾಪಸ್‌ ಕೊಡಿಸಲಾಗಿದೆ ಎಂದರು.

ಪ್ರಕೃತಿ ವಿಕೋಪದಡಿ ಬಂದ 8 ಕೋಟಿ ಹಣದಲ್ಲಿ ಯಾವುದೇ ರಚನಾತ್ಮಕ ಕಾಮಗಾರಿ ಆಗಿಲ್ಲ. ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಕುದುರೆಗುಂಡಿಯಲ್ಲಿ ಕಾಂಗ್ರೆಸ್‌ ಮುಖಂಡರೊಬ್ಬರ ತೋಟಕ್ಕೆ 35 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಇದಕ್ಕೆ ಪಿಡಬ್ಲ್ಯೂಡಿಯ 15 ಲಕ್ಷ ಹಾಗೂ ಪ್ರಕೃತಿ ವಿಕೋಪ ಅನುದಾನದ 20 ಲಕ್ಷ ಹಣ ಬಳಸಲಾಗಿದೆ. ಶಾಸಕರಾಗಿ 11 ತಿಂಗಳು ಕಳೆದರೂ ಈವರೆಗೆ ಒಂದೇ ಒಂದು ಗುರುತಿಸಿಕೊಳ್ಳುವಂತೆ ಕಾಮಗಾರಿ ಆಗಿಲ್ಲ ಎಂದು ಆರೋಪಿಸಿದರು.

ದೇಶದ ರೈತರ ಶೇ. 81ರಷ್ಟು ಮಂದಿ ಸಣ್ಣ ಮತ್ತು ಅತೀ ಸಣ್ಣ ರೈತರಿದ್ದಾರೆ. ಇವರ ಏಳಿಗೆಯನ್ನು ಕೇಂದ್ರೀಕರಿಸಿ ಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್‌ ಸನ್ಮಾನ್‌ ಯೋಜನೆ ಜಾರಿಗೆ ತಂದಿದ್ದಾರೆ. ಇತರ ರಾಜ್ಯಗಳಲ್ಲಿ ಕೋಟಿಗಟ್ಟಲೇ ಹಣ ರೈತರ ಖಾತೆಗೆ ಜಮಾ ಆಗಿದೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ 20 ರೈತರು ಇದರ ಲಾಭ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಕೆ ಮಾಡದೇ ಇರುವುದೇ ಕಾರಣ ಎಂದರು.

ತಾವು ರೈತರ ಪರ ಎನ್ನುವ ಮುಖ್ಯಮಂತ್ರಿಗಳು ರೈತರಿಗೆ ಯಾವ ರೀತಿ ಅನ್ಯಾಯ ಮಾಡಿದ್ದಾರೆ ಎಂದು ಇದರಿಂದ ಗೊತ್ತಾಗುತ್ತದೆ. ಇವರ ಸ್ವಾರ್ಥಕ್ಕಾಗಿ ಯಾರನ್ನೂ ಬೇಕಾದರೂ ಬಲಿಕೊಡುತ್ತಾರೆ ಎಂದು ದೂರಿದರು. ಸಮರ್ಥ ಮತ್ತು ದಕ್ಷ ನಾಯಕತ್ವದ ಶೋಭಾ ಕರಂದ್ಲಾಜೆಯವರನ್ನು ಗೆಲ್ಲಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್‌. ಜೀವರಾಜ್‌, ಕ್ಷೇತ್ರ ಚುನಾವಣಾ ಉಸ್ತುವಾರಿ ಎಸ್‌.ಎನ್‌. ರಾಮಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಮೋದ್‌ ಬಿಜೆಪಿ ಬಾಗಿಲು ಬಡಿದಿದ್ದರು
ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿರುವ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬಾಗಿಲು ಬಡಿದಿದ್ದರು. ಆದರೆ ಅವರನ್ನು ಪಕ್ಷ ಒಳಗೆ ಸೇರಿಸಿಕೊಂಡಿರಲಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್‌ನಿಂದ ಉಡುಪಿಯಲ್ಲಿ ವಿಧಾನಸಭೆಗೆ ಸ್ಪರ್ಧಿಸಿ
2 ಬಾರಿ ಸೋತು, ಮತ್ತೆ ಗೆದ್ದು ಮಂತ್ರಿಯಾಗಿ ಕಳೆದ ಚುನಾವಣೆ ಸಂದರ್ಭ ಬಿಜೆಪಿ ಸೇರಲು ಮುಂದಾಗಿದ್ದರು. ಬಿಜೆಪಿ ನಿರಾಕರಿಸಿದ್ದರಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತರು. ಈಗ ಕುಮಾರಸ್ವಾಮಿ ಬಳಿ ಜೆಡಿಎಸ್‌ನಿಂದ ಸೀಟು ಗಿಟ್ಟಿಸಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋತರೆ ಜೆಡಿಎಸ್‌ನಲ್ಲಿರುವುದು ಅನುಮಾನ.
.ದಿನೇಶ್‌ ಹೊಸೂರು,
ಬಿಜೆಪಿ ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ.

Advertisement

Udayavani is now on Telegram. Click here to join our channel and stay updated with the latest news.

Next