Advertisement

ಬೇರೆ ವಿಧಿಯಿಲ್ಲ…ಓಟ್‌ ಮಾಡ್ತಿವಿ !

11:56 AM Apr 19, 2019 | |

ಚಿಕ್ಕಮಗಳೂರು: ಯಾವುದೇ ರಾಜಕೀಯ ಪಕ್ಷದವರೂ ನಮ್ಮ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಆದರೆ ಮತದಾನ ಮಾಡುವುದು ನಮ್ಮ ಹಕ್ಕಾಗಿರುವುದರಿಂದ ವಿಧಿಯಿಲ್ಲದೆ ಹಕ್ಕು ಚಲಾಯಿಸುತ್ತಿದ್ದೇವಷ್ಟೆ… ಇದು ಬಯಲುಸೀಮೆ ಪ್ರದೇಶಗಳಲ್ಲಿ ಚುನಾವಣೆಯ ದಿನ ಗ್ರಾಮಸ್ಥರು ಹೇಳಿದ ಮಾತು.

Advertisement

ಗುರುವಾರ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಯಲುಸೀಮಯ ವಿವಿಧ ಭಾಗಗಳ ಗ್ರಾಮಗಳಿಗೆ ಭೇಟಿ ನೀಡಿದ ಪತ್ರಕರ್ತರುಗಳೊಂದಿಗೆ ಮಾತನಾಡಿದ ಗ್ರಾಮಸ್ಥರು ರಾಜಕೀಯ ಪಕ್ಷಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕರಗಡ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆನಾಶವಾಗಿದೆ. ಮೂರು ಪಕ್ಷದ ಮುಖಂಡರು ತಾವು ಕರಗಡ ಯೋಜನೆಯನ್ನು ಪೂರ್ಣಗೊಳ್ಳಿಸುತ್ತೇವೆಂದು ನಾ ಮುಂದು… ತಾ ಮುಂದು… ಎಂದು ಬಂದು ನಾಟಕ ಮಾಡುತ್ತಾರೆ. ಇದುವರೆಗೂ ಕಾಮಗಾರಿ
ಪೂರ್ಣಗೊಂಡಿಲ್ಲ, ಒಂದು ಹಿಟಾಚಿ, ಒಂದು ಕಲ್ಲು ಕೊರೆಯುವ ಯಂತ್ರ ಹಾಗೂ ಮೂರು ಜನ ಕೆಲಸ ಮಾಡುತ್ತಿದ್ದಾರೆ.

ಹೀಗಾದರೆ ಕಾಮಗಾರಿ ಮುಗಿಯಲು ಸಾಧ್ಯವೆ? ಕಲ್ಲು ಕೊರೆಯಲು
ತಂದಿರುವ ಕ್ರಷರ್‌ ಟಾಯ್ಲೆಟ್‌ ಗುಂಡಿ ತೆಗೆಯುವಾಗ ಬಳಸುವ ಕ್ರಷರ್‌ನಂತಿದೆ. ಇದರಿಂದ ಅಷ್ಟೊಂದು ದೊಡ್ಡ ಬಂಡೆ ಕೊರೆಯಲು ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ. ನೀರಿನ ಸಮಸ್ಯೆಯಿಂದ ಇಡೀ ಗ್ರಾಮಸ್ಥರೇ ಬೇಸರಗೊಂಡಿದ್ದು, ದೇಶದ ಹಿತಕ್ಕಾಗಿ ಅನಿವಾರ್ಯವಾಗಿ ಮತದಾನ ಮಾಡಬೇಕಾಗಿದೆ
ಎಂದು ಗ್ರಾಮಸ್ಥರಾದ ಚಂದ್ರಶೇಖರ್‌ ಹಾಗೂ ಜಗದೀಶ್‌ ತಮ್ಮ ನೋವನ್ನು ತೋಡಿಕೊಂಡರು. ಬೆಳವಾಡಿ ಗ್ರಾಮದಲ್ಲಿಯೂ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಮ್ಮ ಅಳಲು
ತೋಡಿಕೊಂಡರು. ಅದೇ ಪರಿಸ್ಥಿತಿ ಸಿಂದಗೆರೆ, ಪಿಳ್ಳೇನಹಳ್ಳಿ ಗ್ರಾಮಗಳಲ್ಲಿಯೂ ಕಂಡು ಬಂದಿತು.

ಎಸ್‌.ಬಿದರೆ ಗ್ರಾಮದಲ್ಲಿಯಂತೂ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮದಲ್ಲಿ 3-4 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ವಿದ್ಯುತ್‌ ಸಮಸ್ಯೆ ಇದೆ ಎಂಬ ಕಾರಣದಿಂದ ಬೆಳಗಿನ ಜಾವ 3 ಗಂಟೆಗೆ ನೀರು
ಬಿಡುತ್ತಾರೆ. 6 ಗಂಟೆಯವರೆಗೂ ನೀರು ಬರುತ್ತದೆ. ಸಿಗುವ 4-5 ಕೊಡ ನೀರಿಗಾಗಿ ಮನೆಯವರೆಲ್ಲರೂ ನಿದ್ದೆಗೆಟ್ಟು ನಿಲ್ಲುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಸಹ ಗ್ರಾಮ ಪಂಚಾಯತ್‌ನವರು ಟ್ಯಾಂಕರ್‌ ಮೂಲಕ ನೀರು ಬಿಡಲು ಮುಂದಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ
ಹಲವೆಡೆ ಬೋರ್‌ವೆಲ್‌ಗ‌ಳನ್ನು ಕೊರೆದಿದ್ದರೂ ನೀರು ಬಂದಿಲ್ಲ. 1000-1200 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಈಗ ಹೊಸದಾಗಿ ಕೊರೆದಿರುವ ಬೋರ್‌ ವೆಲ್‌ನಲ್ಲಿ ನೀರು ಬಂದಿದೆ. ಆದರೆ ಇನ್ನೂ ಪೈಪ್‌ಲೈನ್‌ ಅಳವಡಿಸಿಲ್ಲ. ಅಲ್ಲಿಯವರೆಗಾದರೂ ಟ್ಯಾಂಕರ್‌
ಮೂಲಕ ನೀರು ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಶೀಘ್ರದಲ್ಲಿಯೇ ಗ್ರಾಮದಲ್ಲಿ ಜಾತ್ರೆ ನಡೆಯಲಿದೆ. ಈ ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಾರೆ. ಆಗ ನೀರನ್ನು ಹೇಗೆ ಒದಗಿಸುವುದು ಎಂಬ ಚಿಂತೆ ನಮ್ಮದಾಗಿದೆ ಎಂದು ಗ್ರಾಮಸ್ಥರು ಹೇಳಿಕೊಂಡರು.

ಒಟ್ಟಾರೆಯಾಗಿ ಬಯಲುಸೀಮೆ ಪ್ರದೇಶಗಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬಿಸಿಲ ತೀವ್ರತೆಯೂ ಹೆಚ್ಚಾಗಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ
ಪರಿತಪಿಸುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲಾದರೂ ಉಲ್ಬಣಗೊಂಡಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕಾಗಿದೆ.

ಎಸ್‌.ಕೆ.ಲಕ್ಷ್ಮೀಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next