Advertisement
ನಗರದ ಮಲೆನಾಡು ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಆರಕ್ಷಕ ಇಲಾಖೆ, ಶಿಕ್ಷಣ ಮತ್ತು ವಾರ್ತಾ ಇಲಾಖೆ ಹಾಗೂ ಮಲೆನಾಡು ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಗುರುವಾರ ನಡೆದ ‘ಸಂವಿಧಾನ ಓದು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ದೇಶದಲ್ಲಿ ತಾಂತ್ರಿಕತೆ ಇಂದು ಬೆಳೆದಿದ್ದರೆ ಅದಕ್ಕೂ ಸಂವಿಧಾನವೇ ಕಾರಣ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿ ಹಾಗೂ ವೃತ್ತಿಯನ್ನು ಬದಲಿಸುವ ಹಾಗಿಲ್ಲ. ವೃತ್ತಿ ವಂಶಪಾರಂಪರ್ಯವಾಗಿಬಿಟ್ಟಿದೆ. ಆದರೆ, ಸಂವಿಧಾನದಿಂದ ಇದೆಲ್ಲವೂ ಬದಲಾಗಿದೆ. ಪಾದರಕ್ಷೆ ತಯಾರಿಸುವ ವರ್ಗದ ವ್ಯಕ್ತಿಯೊಬ್ಬ ದೇಶದ ಅಧ್ಯಕ್ಷರಾಗಿದ್ದಾರೆ. ಅತೀ ಹಿಂದುಳಿದ ವ್ಯಕ್ತಿ ಪ್ರಧಾನ ಮಂತ್ರಿಯಾಗಿದ್ದಾರೆ. ಇದೆಲ್ಲ ಸಂವಿಧಾನದಿಂದ ಸಾಧ್ಯವಾಯಿತೆಂದು ತಿಳಿಸಿದರು.
ಆಯಾಯ ಧರ್ಮದವರಿಗೆ ಅವರದೇ ಆದ ಧರ್ಮಗ್ರಂಥಗಳಿವೆ. ಆದರೆ, ದೇಶದ ಎಲ್ಲರಿಗೂ ಇರುವ ಮಹಾಗ್ರಂಥ ಭಾರತದ ಸಂವಿಧಾನ. ಅದನ್ನು ಓದಿದರೆ ಅರ್ಥವಾಗುವುದಿಲ್ಲ. ಅದೊಂದು ಕಾರ್ಯಕ್ರಮ. ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಿಸಿದೆ. ಕೃಷಿ, ಕೈಗಾರಿಕೆ ಬೆಳೆಯಲು, ಅನಕ್ಷರತೆ, ಕಂದಾಚಾರ ಹೋಗಲಾಡಿಸಲು ಸಂವಿಧಾನವೇ ಕಾರಣವಾಗಿದೆ. ಸಂವಿಧಾನ ಕೇವಲ ರಾಜಕೀಯ ವ್ಯವಸ್ಥೆಯಲ್ಲ. ಅದು ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ನೀಡಿದೆ ಎಂದು ವಿವರಿಸಿದರು.
ದೇಶವನ್ನು ಮೊದಲು ಸಂಕ್ಷಿಪ್ತವಾಗಿಯಾದರೂ ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ಇತಿಹಾಸ, ಜನ, ಆರ್ಥಿಕ ಸಂಬಂಧ, ಧಾರ್ಮಿಕತೆ, ಜಾತಿ, ಸಾಮಾಜಿಕ ಸಂಬಂಧ, ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯ, ಭಾಷೆಯ ಬಗ್ಗೆ ತಿಳಿದರೆ ದೇಶ ಅರ್ಥವಾಗುತ್ತದೆ. ಅವುಗಳ ಬಗ್ಗೆ ಕನಿಷ್ಠ ತಿಳಿವಳಿಕೆ ಇರಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ದೇಶದಲ್ಲಿ ಶುದ್ಧ ಮಾನವ ಪ್ರಭೇದವಿಲ್ಲ. ಹಾಗೆಯೇ, ಶುದ್ಧ ಭಾಷೆಯೂ ಇಲ್ಲ. ಶುದ್ಧ ರಾಷ್ಟ್ರೀಯತೆಯನ್ನು ಕಾಣಲಾಗದು. ಇವೆಲ್ಲವೂ ಕೂಡ ಅಂತರ್ ಸಂಬಂಧಗಳನ್ನು ಹೊಂದಿವೆ. ಹಾಗಾಗಿಯೇ ಬಹುತ್ವದ ಸಂಸ್ಕೃತಿಯನ್ನು ಸಂವಿಧಾನದ ಮೂಲಕ ರಕ್ಷಿಸಲಾಗಿದೆ ಎಂದರು.
ಹಿಂದೆ ಪ್ರತಿಯೊಂದು ಗ್ರಾಮ ಸ್ವಾವಲಂಬಿಯಾಗಿತ್ತು. ಆದರೆ ಇಂದು ಜಾಗತೀಕರಣ ಮನುಷ್ಯನ ಮನಸ್ಸಿನ ಮೇಲೂ ಪರಿಣಾಮ ಬೀರಿದೆ. ಬಹುರಾಷ್ಟ್ರೀಯ ಕಂಪೆನಿಗಳು ಕೇವಲ ಮಾರುಕಟ್ಟೆಯನ್ನು ಆಳುತ್ತಿಲ್ಲ. ನಮ್ಮ ಮನಸ್ಸನ್ನು ಆಳುತ್ತಿವೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಸ್ಥಾಪಿಸುವ ಜವಾಬ್ದಾರಿ ಸರ್ಕಾರದ್ದು, ಪ್ರತಿ ವ್ಯಕ್ತಿಗೆ ಅನ್ನ, ಬಟ್ಟೆ, ಶಿಕ್ಷಣ, ಉದ್ಯೋಗ, ಆರೋಗ್ಯವನ್ನು ನೀಡಬೇಕು. ಅದನ್ನು ಸರ್ಕಾರಗಳು ಮರೆತಿವೆ ಅನಿಸುತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉಮೇಶ್ ಎಂ.ಅಡಿಗ, ಸಂವಿಧಾನ ಬಿಟ್ಟು ಯೋಚಿಸಲು ಸಾಧ್ಯವಿಲ್ಲ. ಅದು ಕೇವಲ ನ್ಯಾಯಾಧೀಶರಿಗೆ, ವಕೀಲರಿಗೆ ಮಾತ್ರವಲ್ಲ. ಎಲ್ಲರಿಗೂ ಅದರ ಅರಿವಿರಬೇಕೆಂಬ ಉದ್ದೇಶದಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಈ ಅಭಿಯಾನ ಕೈಗೊಂಡಿದ್ದಾರೆ ಎಂದರು. ರಾಜಶೇಖರ ಕಿಗ್ಗಾ ‘ಸಂವಿಧಾನ ಓದು’ ಕೃತಿ ಬಗ್ಗೆ ಮಾತನಾಡಿದರು.
ಜಿ.ಕ.ಸೆ.ಪ್ರಾ. ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಸ್ವಾಗತಿಸಿದರು. ಎಂಇಎಸ್ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕ ಡಿ.ಎಸ್.ದೇವರಾಜು, ಎಂಇಎಸ್ ಆಡಳಿತಾಧಿಕಾರಿ ಶಾಂತಕುಮಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ವೆಂಕಟೇಶ್, ಕಾಲೇಜು ಪ್ರಾಚಾರ್ಯ ವಿಷ್ಣುವರ್ಧನ, ನ್ಯಾಯವಾದಿ ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.