Advertisement

ವೃತ್ತಿಯಲ್ಲಿ ಶ್ರದ್ಧೆ-ಪ್ರಾಮಾಣಿಕತೆ ಮುಖ್ಯ: ಅಡಿಗ

05:05 PM Feb 17, 2020 | Team Udayavani |

ಚಿಕ್ಕಮಗಳೂರು: ಪ್ರತಿಯೊಬ್ಬರೂ ತಮ್ಮ ಕಾಯಕವನ್ನು ಗೌರವಿಸಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಅಧ್ಯಕ್ಷ ಉಮೇಶ್‌.ಎಂ.ಅಡಿಗ ಹೇಳಿದರು.

Advertisement

ಭಾನುವಾರ ನಗರದ ಮಧುವನ ಲೇಔಟ್‌ನ ಲಯನ್ಸ್‌ ಸೇವಾ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸುವರ್ಣ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ನಡೆದ ಸುವರ್ಣ ಕೆಲಸಗಾರರಿಗೆ ಒಂದು ದಿನದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿನ್ನಕ್ಕೆ ವಿಶಿಷ್ಟ ರೂಪ ಕೊಡುವ ಸುವರ್ಣ ಕೆಲಸಗಾರರು ತಮ್ಮ ವೃತ್ತಿಯಲ್ಲಿ ಶ್ರದ್ಧೆ ಹೊಂದಿರಬೇಕು. ಗ್ರಾಹಕರೊಂದಿಗೆ ಹಣಕಾಸು ಮತ್ತು ಇತರ ವ್ಯವಹಾರಗಳಲ್ಲಿ ನಂಬಿಕೆ ಹೊಂದಿರಬೇಕು ಹಾಗಿದ್ದಾಗ ಮಾತ್ರ ವೃತ್ತಿಯಲ್ಲಿ ಸಾರ್ಥಕತೆ ಹಾಗೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸುವರ್ಣ ಕೆಲಸಗಾರರು ಅನೇಕ ತೊಂದರೆ ಎದುರಿಸುತ್ತಿದ್ದು, ಆರ್ಥಿಕವಾಗಿ ಹಾಗೂ ವ್ಯಾವಹಾರಿಕವಾಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಕಲಾವಿದರಿಗೆ ಪ್ರೋತ್ಸಾಹ ದೊರಕಬೇಕು. ಅವರ ಕಲೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದರು. ಸುವರ್ಣ ಕೆಲಸಗಾರರು ತಮ್ಮ ವೃತ್ತಿಯಲ್ಲಿ ಕಳ್ಳತನ ಪ್ರಕರಣಗಳಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಜಾಗೃತಿಗೊಳ್ಳಬೇಕು. ಪಾರದರ್ಶಕತೆ ಹೊಂದಿ ಕಾನೂನಾತ್ಮಕವಾಗಿ ಸದೃಢರಾಗಬೇಕು ಎಂದು ಹೇಳಿದರು. ರಾಜ್ಯ ವಕೀಲರ ಪರಿಷತ್ತು ಸದಸ್ಯರಾದ ಎಸ್‌.ಎಲ್‌ ಭೋಜೇಗೌಡ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಸಮಾಜಮುಖೀ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯವಾಗಿದೆ ಎಂದರು.

ಸುವರ್ಣ ಕೆಲಸಗಾರರು ಹಲವು ಕಲೆಗಳಲ್ಲಿ ಪರಿಣಿತಿ ಹೊಂದಿದ್ದು, ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅಂತೆಯೇ ಇಂದಿನ ಆಧುನಿಕ ಯುಗಕ್ಕನುಗುಣವಾಗಿ ಕೌಶಲ್ಯದಲ್ಲಿ ಪರಿಣಿತಿ ಹೊಂದಿದರೆ ಸಾರ್ವಜನಿಕರ ವಿಶ್ವಾಸಗಳಿಸಿ ಜನಪ್ರಿಯಗೊಳ್ಳಬಹುದು ಎಂದು ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಕೆಲಸ ಸಿಗುವುದು ಕಷ್ಟವಾಗಿದೆ. ಆದ್ದರಿಂದ ಯುವ ಪೀಳಿಗೆಗಳಿಗೆ ಆತ್ಮವಿಶ್ವಾಸ ಮೂಡಿಸುವುದರ ಜತೆಗೆ ಕಲೆಗೆ ಹೆಚ್ಚು ಆದ್ಯತೆ ನೀಡಿ ಸುವರ್ಣ ಕಾಯಕವನ್ನು ಕಲಿಸಿಕೊಡಬೇಕು ಅವರ ಜೀವನಕ್ಕೆ ಮಾರ್ಗವಾಗಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸುವರ್ಣ ಕೆಲಸಗಾರರ ಅಭಿವೃದ್ಧಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಲು ಮನವಿ ಸಲ್ಲಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದ ಅವರು, ಸುವರ್ಣ ಕೆಲಸಗಾರರಿಗೆ ಅಗತ್ಯ ಸೌಲಭ್ಯದೊಂದಿಗೆ ಹೆಚ್ಚು ಮಾನ್ಯತೆ ದೊರಕಬೇಕು ಎಂದು ಹೇಳಿದರು.

Advertisement

ಪೊಲೀಸ್‌ ಉಪಾಧಿಧೀಕ್ಷಕ ಬಸವರಾಜ್‌ ಅಂಗಡಿ ಸ್ವತ್ತುಗಳಿಗೆ ಸಂಬಂಧಪಟ್ಟ ಅಪರಾಧಗಳು, ಪಂಚನಾಮೆ, ಶೋಧನೆ, ಬಂಧನ ಹಾಗೂ ವಿಚಾರಣೆಗಳಲ್ಲಿ ಪುರಾವೆ ಕುರಿತು ಸಹಾಯಕ ಕಾರ್ಮಿಕ ಆಯುಕ್ತ ಕೆ.ಜಿ ಜಾನ್ಸನ್‌ ಕಾರ್ಮಿಕ ಕಾನೂನುಗಳು ಕುರಿತು ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್‌ ಕ್ರಿಮಿನಲ್‌ ಮೊಕದ್ದಮೆಗಳಲ್ಲಿ ಸಾಕ್ಷಿ ವಿಚಾರಣೆ ಕುರಿತು ಉಪನ್ಯಾಸ ನೀಡಿದರು. ಹಿರಿಯ ಸಿವಿಲ್‌ ನ್ಯಾಯಾ ಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ, ವಕೀಲರ ಸಂಘದ ಅಧ್ಯಕ್ಷ ಶಿವ, ಜಿಲ್ಲಾ ಸುವರ್ಣ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಎನ್‌.ಎಸ್‌. ಜಗದೀಶ್‌ ಆಚಾರ್ಯ, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎನ್‌.ಎಸ್‌.ಪುರುಷೋತ್ತಮ ಆಚಾರ್ಯ, ವಕೀಲ ಜನಾರ್ದನ್‌ ಆಚಾರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next