ಚಿಕ್ಕಮಗಳೂರು: ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ ತೀರಾ ಕಡಿಮೆ ದರದಲ್ಲಿ 3,667 ಎಕರೆ ಜಮೀನನ್ನು ಕಾನೂನು ಉಲ್ಲಂಘಿಸಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಗುರುವಾರ ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕೂಡಲೇ ಜಮೀನು ಮಾರಾಟ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ನಿರ್ಧಾರ ಕೈಬಿಡದಿದ್ದರೆ ಉಗ್ರ ಹೋರಾಟ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತ ನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸಮ್ಮಿಶ್ರ ಸರ್ಕಾರ ಕಾನೂನು ಉಲ್ಲಂಘಿಸಿ ಜಿಂದಾಲ್ ಕಂಪನಿಗೆ ಅತ್ಯಂತ ಕಡಿಮೆ ದರದಲ್ಲಿ 3,667 ಎಕರೆ ಸರ್ಕಾರಿ ಭೂಮಿ ಮಾರಾಟ ಮಾಡಲು ಮುಂದಾಗಿದೆ. ಈ ವ್ಯವಹಾರದಲ್ಲಿ ಸರ್ಕಾರದ ಪ್ರಮುಖರು ಕೋಟ್ಯಂತರ ರೂ. ಭ್ರಷ್ಟಾಚಾರ ಎಸಗಿರುವ ಶಂಕೆ ಮೂಡುತ್ತಿದೆ. ರಾಜ್ಯ ಸರ್ಕಾರ ಈ ಕೂಡಲೇ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಪ್ರಕ್ರಿಯೆಯನ್ನು ಕೈಬಿಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಹಣ ಲೂಟಿ ಹೊಡೆಯುವ ಉದ್ದೇಶ: ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳ ಅವಶ್ಯಕತೆ ಇದೆಯಾದರೂ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಂಪನಿಗಳಿಗೆ ನೀಡುವುದಕ್ಕೆ ತಮ್ಮ ವಿರೋಧವಿದೆ. ಸರ್ಕಾರಿ ಭೂಮಿಯನ್ನು ಲೀಸ್‌ಗೆ ನೀಡಲು ಬಿಜೆಪಿಯ ವಿರೋಧವಿಲ್ಲ. ಆದರೆ, ಮಾರಾಟ ಮಾಡಲು ವಿರೋಧವಿದೆ. ಹಿಂದಿನ ಒಪ್ಪಂದದಂತೆ ಜಿಂದಾಲ್ ಕಂಪನಿ ಸಿ ಮತ್ತು ಡಿ ಹುದ್ದೆಗಳನ್ನು ಕನ್ನಡಿಗರಿಗೆ ನೀಡಬೇಕೆಂಬ ಷರತ್ತನ್ನು ಈಡೇರಿಸಿಲ್ಲ. ಮೂಲ ಸೌಕರ್ಯ ಅಭಿವೃದ್ಧಿಗೆಂದು ಪಡೆದ ಸರ್ಕಾರಿ ಜಾಗದಲ್ಲಿ ಜಿಂದಾಲ್ ಕಂಪನಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ. ಸರ್ಕಾರ ನೀಡಿದ 2ಟಿಎಂಸಿ ನೀರು ಬಳಕೆಯ ಷರತ್ತು ಉಲ್ಲಂಘಿಸಿ 5 ಟಿಎಂಸಿ ನೀರು ಬಳಸಿಕೊಳ್ಳುವ ಮೂಲಕ ಜಿಂದಾಲ್ ಕಂಪನಿ ಸರ್ಕಾರದ ನಿಬಂಧನೆಗಳನ್ನು ಉಲ್ಲಂಘಿಸುತ್ತಿದೆ. ಇಂತಹ ಕಂಪನಿಗೆ ಮತ್ತೆ ತೀರಾ ಕಡಿಮೆ ದರದಲ್ಲಿ ಭೂಮಿ ಮಾರಾಟ ಮಾಡಲು ಮುಂದಾಗಿರುವುದರ ಹಿಂದೆ ಸರ್ಕಾರದ ಹಣ ಲೂಟಿ ಹೊಡೆಯುವ ಉದ್ದೇಶವಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ರಾಜ್ಯಾದ್ಯಂತ ಲಕ್ಷಾಂತರ ಮಂದಿ ರೈತರು ಸರ್ಕಾರಿ ಭೂಮಿಯನ್ನು ಕೃಷಿಗಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ರೈತರಿಗೆ ಭೂಮಿ ನೀಡಲು ಒಪ್ಪದ ರಾಜ್ಯ ಸರ್ಕಾರ, ಅತ್ಯಂತ ಕಡಿಮೆ ದರಕ್ಕೆ ಭೂಮಿಯನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಲು ಹೊರಟಿರುವುದರ ಹಿಂದೆ ಕಿಕ್ ಬ್ಯಾಕ್ ಉದ್ದೇಶವಿದೆ ಎಂಬ ಶಂಕೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ ಎಂದರು.
ರೈತರಿಗೆ ಜಮೀನು ನೀಡಿ: ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇದ್ದರೆ ರೈತರು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಕಡಿಮೆ ದರದಲ್ಲಿ ಲೀಸ್‌ಗೆ ನೀಡಲಿ. ಆದನ್ನು ಬಿಟ್ಟು ಜಿಂದಾಲ್ಗೆ ಕಡಿಮೆ ದರದಲ್ಲಿ ಸರ್ಕಾರಿ ಜಾಗ ಮಾರಾಟ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ರಾಜ್ಯ ಸರ್ಕಾರ ಈ ಒಪ್ಪಂದದಿಂದ ಹಿಂದೆ ಸರಿಯಬೇಕು. ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪುಣ್ಯಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಜಿಪಂ ಸದಸ್ಯರಾದ ಜಸಿಂತಾ ಅನಿಲ್ಕುಮಾರ್, ಸೋಮಶೇಖರ್, ತಾಪಂ ಅಧ್ಯಕ್ಷ ಜಯಣ್ಣ, ಮುಖಂಡರಾದ ಪ್ರೇಮ್‌ಕುಮಾರ್, ದೀಪಕ್ ದೊಡ್ಡಯ್ಯ, ವರಸಿದ್ಧಿ ವೇಣುಗೋಪಾಲ್, ಸಿ.ಎಚ್.ಲೋಕೇಶ್, ರಾಜ್‌ಶೇಖರ್, ನಾರಾಯಣಗೌಡ, ಭೋಜೇಗೌಡ, ದೇವರಾಜ್ ಶೆಟ್ಟಿ, ಸಿಡಿಎ ಮಾಜಿ ಅಧ್ಯಕ್ಷ ರಾಜಪ್ಪ ಹಾಗೂ ಕಾರ್ಯಕರ್ತರು ಮತ್ತಿತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
2006-2007ರಲ್ಲಿ ರಾಜ್ಯದಲ್ಲಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಂದಾಲ್ ಕಂಪನಿಗೆ 10ವರ್ಷಗಳ ಅವಧಿಗೆ ಭೂಮಿ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದ ಲೀಸ್ ಕಮ್ ಸೇಲ್ ಒಪ್ಪಂದವಾಗಿದ್ದು, ಕಂಪನಿಗೆ ಭೂಮಿ ಮಾರಾಟ ಮಾಡುವ ಒಪ್ಪಂದವಾಗಿರಲಿಲ್ಲ. ಆದರೆ, ಈಗಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಈ ಒಪ್ಪಂದವನ್ನು ವಿಸ್ತರಣೆ ಮಾಡಿ, ಎಕರೆಗೆ ಕೇವಲ 1.22ಲಕ್ಷ ರೂ.ನಂತೆ 3,667ಎಕರೆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿದೆ. ಕಿಕ್ ಬ್ಯಾಕ್ ಪಡೆಯುವ ಹುನ್ನಾರ ನಡೆಸಿದೆ.
•
ಶೋಭಾ ಕರಂದ್ಲಾಜೆ, ಸಂಸದೆ