Advertisement

ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಮೈಗೂಡಿಸಿಕೊಳ್ಳಿ

05:02 PM Aug 25, 2019 | Naveen |

ಚಿಕ್ಕಮಗಳೂರು: ಇಂದಿನ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ಹೊರಬಂದು ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ಸಲಹೆ ನೀಡಿದರು.

Advertisement

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ನಗರದ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ನಮ್ಮ ಸಂಸ್ಕೃತಿಯ ತಾಯಿ ಬೇರು. ಅದನ್ನು ಯಾವುದೇ ಕಾರಣಕ್ಕೂ ನಾಶವಾಗಲು ಬಿಡಬಾರದು. ಜಾನಪದವನ್ನು ಕಳೆದುಕೊಂಡರೆ ನಾವು ನಮ್ಮತನವನ್ನೇ ಕಳೆದುಕೊಂಡು ಪ್ರಪಂಚದೆದುರು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಧಾನ ಉಪನ್ಯಾಸ ನೀಡಿದ ಸಾಹಿತಿ ಡಾ| ಬೆಳವಾಡಿ ಮಂಜುನಾಥ್‌, ಬ್ರಿಟನ್ನಿನ ಪ್ರಾಚೀನ ಅಣ್ವೇಷಕ ವಿಲಿಯಂ ಜಾನ್‌ ಥಾಮ್ಸ್‌ 1846ರ‌ ಆಗಸ್ಟ್‌ 22ರಂದು ಜಾನಪದವನ್ನು ಫೋಕ್‌ಲೋರ್‌ ಎಂದು ಹೆಸರಿಸಿದ ಹಿನ್ನೆಲೆಯಲ್ಲಿ ವಿಶ್ವ ಜಾನಪದ ದಿನ ಆಚರಣೆಗೆ ಬಂದಿತು ಎಂದು ತಿಳಿಸಿದರು.

ಅಣ್ವೇಷಕ ಥಾಮ್ಸ್‌ ಅವರು ಜಾನಪದ ಶಾಸ್ತ್ರ, ಅದರ ಸ್ವರೂಪ, ಸ್ಥಿತಿ, ವೈವಿಧ್ಯ ಮತ್ತು ಸಂಬಂಧವನ್ನು ಸೂಕ್ಷ್ಮವಾಗಿ ವಿವರಿಸಿ, ಪರಂಪರೆಯಿಂದ ಬಂದಿರುವ ಜಾನಪದ ಸಾಹಿತ್ಯವನ್ನು ಸಂಗ್ರಹಿಸುವಂತೆ ಮನವಿ ಮಾಡಿದ್ದರು. ಅದರ ಫಲವಾಗಿ ಜಗತ್ತಿನಲ್ಲಿ ಜಾನಪದದ ಅಧ್ಯಯನ ಗಂಭೀರವಾಗಿ ನಡೆಯಲಾರಂಭಿಸಿತು ಎಂದು ಹೇಳಿದರು.

Advertisement

ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ| ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಇಂದಿನ ಯುವಪೀಳಿಗೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್‌, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಕಲಾವಿದ ಬಿಳಗಲಿ ನಾಗರಾಜ್‌ ಅವರಿಂದ ಕೊಳಲು ವಾದನ, ಗಾಯಕರಾದ ಜಿ.ಬಿ.ಸುರೇಶ್‌, ಜ್ಯೋತಿ ವಿನೀತ್‌ಕುಮಾರ್‌ ಮತ್ತು ಚಂದ್ರಶೆಟ್ಟಿ ಅವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ತಾಲೂಕು ಪಂಚಾಯತ್‌ ಸದಸ್ಯ ಮಹೇಶ್‌, ಸಮಾಜ ಕಲ್ಯಾಣ ಇಲಾಖೆ ಸಹನಿರ್ದೇಶಕ ಎಚ್.ಡಿ.ರೇವಣ್ಣ, ವಿದ್ಯಾರ್ಥಿ ನಿಲಯದ ವಾರ್ಡನ್‌ ಶ್ರೀಲತಾ, ಉಪನ್ಯಾಸಕ ಜಿ.ಬಿ.ವಿರೂಪಾಕ್ಷ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಸ್ವಾಗತಿಸಿ, ಚಂದ್ರಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next