Advertisement

ಕಾರ್ಮಿಕರ ಸಾಧನೆ ಪ್ರೋತ್ಸಾಹಿಸಿ

03:12 PM Mar 02, 2020 | Team Udayavani |

ಚಿಕ್ಕಮಗಳೂರು: ಅಸಂಘಟಿತ ಕಾರ್ಮಿಕರು ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದಾಗ ಅವರನ್ನು ಪ್ರೋತ್ಸಾಹಿಸಬೇಕು ಎಂದು ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಹೇಳಿದರು.

Advertisement

ನಗರದ ಆರ್‌.ಟಿ.ಒ ಕಚೇರಿ ಬಳಿಯ ಕಾರ್ಮಿಕರ ಭವನದ ಆವರಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ವಾರ್ತಾ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಮಿಕ ಸಮ್ಮಾನ ದಿನಾಚರಣೆ, ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಮಹಿಳೆಯರು, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಇಲಾಖೆಯಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಮೂರು ಸಾವಿರ ರೂ. ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕು ಸಾವಿರ ರೂ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಅಧಿ ಕಾರಿಗಳು ಹಾಗೂ ಕಟ್ಟಡದ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣದ ಜತೆಗೆ ಅಧಿಕಾರಿಗಳನ್ನು ನೇಮಿಸಿ ಕಾರ್ಮಿಕರ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲಾಗುವುದು ಎಂದರು.

ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅಸಂಘಟಿತ ವಲಯಗಳಲ್ಲಿ ಬಹುತೇಕ ಕಾರ್ಮಿಕರು ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿರುವುದು ಹೆಮ್ಮೆಯ ಸಂಗತಿ ಇಂತಹ ಕಾರ್ಯಗಳು ಸದಾ ಮುಂದುವರಿಯುವಂತಾಗಲಿ ಎಂದರು.

ತಾಪಂ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಮಾತನಾಡಿ, ಕಳೆದ ವರ್ಷದಿಂದ ಪ್ರಧಾನ ಮಂತ್ರಿಗಳು ಅಸಂಘಟಿತ ಕಾರ್ಮಿಕರ ಸಾಧನೆ ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮದ ಜತೆಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಸಂಘಟಿತ ಕಾರ್ಮಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

Advertisement

ಜಿಲ್ಲೆಯಲ್ಲಿ ಕಾರ್ಮಿಕರಿಗಾಗಿ ಇ.ಎಸ್‌.ಐ ಆಸ್ಪತ್ರೆ ತೆರೆಯುವಂತೆ ಈಗಾಗಲೇ ಚರ್ಚಿಸಲಾಗಿದ್ದು, ಕನಿಷ್ಟ 50ಸಾವಿರ ಕಾರ್ಮಿಕರ ನೋಂದಣಿ ಆಗಬೇಕಿತ್ತು. ಆದರೆ ಜಿಲ್ಲೆಯಲ್ಲಿ 30 ಸಾವಿರ ಕಾರ್ಮಿಕರ ನೋಂದಣಿ ಆಗಿರುವುದರಿಂದ ಇ.ಎಸ್‌ .ಐ ಆಸ್ಪತ್ರೆ ತೆರೆಯಲು ಸಾಧ್ಯವಾಗಿಲ್ಲ ಎಂದರು.

ಅಪರ ಜಿಲ್ಲಾ ಧಿಕಾರಿ ಡಾ| ಕುಮಾರ್‌ ಮಾತನಾಡಿ, ಯಾವುದೇ ದೇಶ, ರಾಜ್ಯ, ಸಮಾಜದ ಪ್ರಗತಿಯು ಅಸಂಘಟಿತ ಕಾರ್ಮಿಕರಿಂದ ಸಾಧ್ಯ ಕಾರ್ಮಿಕರ ಜೀವನ ಭದ್ರತೆ ಮನಗಂಡು ಕೇಂದ್ರ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ ಎಂದರು.

ಅಸಂಘಟಿತ ಕಾರ್ಮಿಕರಿಗೆ ಕಾಯಕನಿಷ್ಠೆ, ಯೋಗ, ತತ್ವಾರ್ದಶಗಳು ಮುಖ್ಯ ಆಸ್ತಿಯಾಗಿದ್ದು, ಸಮಾಜದಲ್ಲಿ ಯಾರೋಬ್ಬರು ಬೇಧಭಾವ ತೋರದೆ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಇರಬೇಕು. ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು ಎಂದರು.

ಚಿಕ್ಕಮಗಳೂರು ವಿಭಾಗದ ಸಹಕಾರ ಕಾರ್ಮಿಕ ಆಯುಕ್ತ ಕೆ.ಜಿ.ಜಾನ್ಸನ್‌ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಪ್ರಗತಿ ಹಾಗೂ ಉತ್ಪಾದನೆಯಲ್ಲಿ ಕಾರ್ಮಿಕರ ಪಾತ್ರ ದೊಡ್ಡದು. ಅವರ ಶ್ರಮದ ಫಲ ಇಂದು ದೇಶ ಸಮರ್ಥವಾಗಿರಲು ಕಾರಣ ಎಂದರು.

ಇದೇ ಸಂದರ್ಭದಲ್ಲಿ ಅಸಂಘಟಿತ ವಲಯದಲ್ಲಿ ಸಾಧನೆ ತೋರಿದ ಸಾಧಕರಿಗೆ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಉಪ ವಿಭಾಗಾ ಧಿಕಾರಿ ಡಾ| ಎಚ್‌.ಎಲ್‌.ನಾಗರಾಜ್‌, ಉಪವಿಭಾಗದ ಕಾರ್ಮಿಕ ಅಧಿಕಾರಿ ಕೃಷ್ಣಮ್ಮ, ಟಿ.ಎಸ್‌. ರವಿಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next