Advertisement

ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಶರಣೆ ಅಕ್ಕನಾಗಮ್ಮ ಪಾತ್ರ ಹಿರಿದು

05:03 PM Jun 24, 2019 | Naveen |

ಚಿಕ್ಕಮಗಳೂರು: ವಚನ ಸಾಹಿತ್ಯ ಸಂರಕ್ಷಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಶರಣೆ ಅಕ್ಕನಾಗಮ್ಮ ಧಿಧೀರಮಹಿಳೆ ಎಂದು ಶಿವಮೊಗ್ಗದ ಚೈತನ್ಯಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಸೋಮಶೇಖರ್‌ ಹೇಳಿದರು.

Advertisement

ಅಕ್ಕಮಹಾದೇವಿ ಮಹಿಳಾ ಸಂಘದ ವಿಜಯಪುರ ಬಡಾವಣೆಯ ಶರಣೆ ಅಕ್ಕನಾಗಲಾಂಬಿಕೆ ತಂಡ ನಗರದ ಶ್ರೀಸೋಮೇಶ್ವರ ಕನ್ವೆನ್ಷನ್‌ಹಾಲ್ನಲ್ಲಿ ಏರ್ಪಡಿಸಿದ್ದ ಕಾರಹುಣ್ಣಿಮೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. 12ನೆಯ ಶತಮಾನದಲ್ಲೆ ಶರಣಕ್ರಾಂತಿಯ ಸಂದರ್ಭ ಮಹಿಳೆಯರಿಗೆ ಸಮಾನತೆ ಕಲ್ಪಿಸಲಾಗಿತ್ತು. ಅನುಭವ ಮಂಟಪದ ವೈಚಾರಿಕ ಬೆಳವಣಿಗೆ ಕಾಯಕನಿಷ್ಠೆಯಲ್ಲಿ ಅಕ್ಕ, ಮುಕ್ತಾಯಕ್ಕ, ಸತ್ಯಕ್ಕ ಲಕ್ಕಮ್ಮ, ನಾಗಲಾಂಬಿಕೆ ಸೇರಿದಂತೆ ಹಲವು ಶರಣೆಯರು ಮುಂಚೂಣಿಯಲ್ಲಿದ್ದರು ಎಂದರು.

ಕಲ್ಯಾಣಕ್ರಾಂತಿಯ ನಂತರ ಶರಣ ಸಮೂಹ ದಿಕ್ಕೆಟ್ಟಾಗ ಧೀರ ಮಹಿಳೆ ಅಕ್ಕನಾಗಲಾಂಬಿಕೆ ವಚನಸಾಹಿತ್ಯವನ್ನು ಓಲೆಗರಿಗಳ ಕಟ್ಟುಗಳನ್ನು ಶರಣತಂಡದೊಂದಿಗೆ ಹೊರಗೆಸಾಗಿಸಿದ್ದು, ಮಹತ್ವದಕಾರ್ಯ. ದಟ್ಟಅರಣ್ಯದ ಉಳುವಿಯತ್ತ ಸಾಗಿದ ಈಕೆಯ ತಂಡ ನಂತರ ಜಿಲ್ಲೆಯ ತರೀಕೆರೆಯ ಎಣ್ಣೆಹೊಳೆ ಮಠಕ್ಕೆ ಬಂದು ತಂಗಿ ಇಲ್ಲೆ ಐಕ್ಯವಾದ ಐತಿಹ್ಯವಿದೆ. ಅಂದು ಅಕ್ಕನಾಗಲಾಂಬಿಕೆ ಧೈರ್ಯಸ್ಥೈರ್ಯಗಳಿಂದ ಸಮಯೋಜಿತವಾಗಿ ಆಲೋಚಿಸಿ ಶರಣರ ಸಾಹಿತ್ಯವ ಸಂರಕ್ಷಿಸಿ ಹೊರತರದಿದ್ದರೆ ಅಪೂರ್ವ ಅನುಭವದ ಗಣಿಯಾದ ವಚನಗಳು ನಮಗೆ ಸಿಗುವುದು ಕಷ್ಟವಾಗುತ್ತಿತ್ತು ಎಂದರು.

ಅಕ್ಕನಾಗಲಾಂಬಿಕೆ ಬಸವಣ್ಣನವರ ಅಕ್ಕ. ಒಂದುರೀತಿಯಲ್ಲಿ ಬಸವಣ್ಣನವರು ಸೇರಿದಂತೆ ಹಲವು ಶರಣೆಯರ ಸ್ಫೂರ್ತಿಯ ಸೆಲೆ. ಈಕೆಯ ಮಗ ಚನ್ನಬಸವಣ್ಣ ಬೆಳಗಿನ ವಚನಗಳ ಮೂಲಕ ತನ್ನದೇ ಛಾಪು ಮೂಡಿದ್ದಾರೆ ಎಂದ ನಾಗರತ್ನ, ಅಂದು ಶರಣೆಯರು ಸಾಮಾಜಿಕ ಪರಿವರ್ತನೆಯಲ್ಲಿ ವಹಿಸಿದ ಪಾತ್ರ ನಮಗೆಲ್ಲ ದಾರಿದೀಪ ಎಂದು ಹೇಳಿದರು.

Advertisement

ಮಹಿಳೆಯರು ಇಂದು ಅಡುಗೆ ಮನೆಯಲ್ಲೇ ಕುಳಿತು ಕಾಲಕಳೆಯುವ ಸಮಯ ಎಂದೋ ಮುಗಿದು ಹೋಗಿದೆ. ನೇವಿ, ಲ್ಯಾಂಡ್‌ಆರ್ಮಿ, ಅಂತರಿಕ್ಷಾಯಾನದಲ್ಲೂ ಹೆಣ್ಣುಮಕ್ಕಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೈಗಾರಿಕೆ, ಉದ್ಯಮ, ವ್ಯಾಪಾರದಲ್ಲೂ ಮಹಿಳೆ ನೈಪುಣ್ಯತೆ ತೋರುತ್ತಿರುವುದು ನಿಸರ್ಗದ ಕೊಡುಗೆ ಎಂದರು. ಅಕ್ಕಮಹಾದೇವಿ ಮಹಿಳಾ ಸಂಘದಅಧ್ಯಕ್ಷೆ ಗೌರಮ್ಮಬಸವೇಗೌಡ ಮಾತನಾಡಿ, ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಕಾರ್ಯಗಳಲ್ಲಿ ಸಾಧ್ಯವಾದಷ್ಟು ಕೈಜೋಡಿಸುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದರು.

ಅಕ್ಕನಾಗಲಾಂಬಿಕೆ ತಂಡದ ಮುಖ್ಯಸ್ಥೆ ಪಾರ್ವತಿ ಬಸವರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಿಲೋಕೇಶ್‌ ಸ್ವಾಗತಿಸಿದರು. ಸುಮಿತ್ರಾ ಶಾಸ್ತ್ರಿ ಪರಿಚಯಿಸಿದರು. ರೇಣುಕಾಕುಮಾರ್‌ ನಿರೂಪಿಸಿದರು. ಲಲಿತಾನಾಗರಾಜ್‌ ವಂದಿಸಿದರು. ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್‌, ಖಜಾಂಚಿ ಯಮುನಾ ಸಿ.ಶೆಟ್ಟಿ, ಕಾರ್ಯದರ್ಶಿ ರೇಖಾ ಉಮಾಶಂಕರ್‌, ಪದಾಧಿಕಾರಿಗಳಾದ ಭಾರತಿ ಶಿವರುದ್ರಪ್ಪ, ನಾಗಮಣಿ, ಪಾರ್ವತಿ ಬಸವರಾಜ್‌ ಇದ್ದರು.

ಅನುರಾಧರೇಣುಕ ಮತ್ತು ಮಂಜುಳಾ ಯೋಗೀಶ್‌ ಅವರು ಶಿವನ ಭಕ್ತಿಗೀತೆ, ಸುಧಾ ರಾಜಶೇಖರ್‌ ಹಾಗೂ ವನಜಾಕ್ಷಿ ವಚನಗಾಯನ. ಸವಿತಾ ಮತ್ತು ಸರಳದೇವರಾಜ್‌ ತಂಡ ಜಾನಪದ ನೃತ್ಯ ಗಮನಸೆಳೆಯಿತು. ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next