Advertisement

ಕರಗ ಮಹೋತ್ಸವದಲ್ಲಿ ಭಕ್ತಿಯ ಪರಾಕಾಷ್ಠೆ

01:05 PM May 04, 2019 | Naveen |

ಚಿಕ್ಕಮಗಳೂರು: ಬೆನ್ನಿಗೆ ಕಬ್ಬಿಣದ ಸಲಾಕೆ ಚುಚ್ಚಿಕೊಂಡು ಮೀಟರ್‌ಗಟ್ಟಲೆ ಟ್ರ್ಯಾಕ್ಟರ್‌ ಎಳೆಯುವ ಭಕ್ತರು, ಎಳೆಮಕ್ಕಳು ಬಾಯಿಗೆ ಕಬ್ಬಿಣದ ಸಲಾಕೆ ಚುಚ್ಚಿಕೊಳ್ಳುವ ವಿಶಿಷ್ಠವಾದ ಹರಕೆ. ಭಕ್ತರು ಬೆನ್ನಿಗೆ ಸಲಾಕೆ ಚುಚ್ಚಿಕೊಂಡು ಹಗ್ಗದ ಮೇಲೆ ನೇತಾಡಿ ದೇವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹರಕೆ ತೀರಿಸಿದರು.

Advertisement

ನಗರದಲ್ಲಿ ಶುಕ್ರವಾರ ನಡೆದ ಕರುಮಾರಿಯಮ್ಮ ದೇವಿಯ ವಿಶೇಷ ಕರಗ ಮಹೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು. ಇದು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು.

ಇಲ್ಲಿನ ಬಸವನಹಳ್ಳಿ ಕೆರೆ ಪ್ರದೇಶದಿಂದ ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಹೊರಟ ಉತ್ಸವದಲ್ಲಿ ಗಮನ ಸೆಳೆದಂತದ್ದು ಭಕ್ತರು ಭಕ್ತಿಯ ಪರಾಕಾಷ್ಠೆಯ ದ್ಯೋತಕವಾಗಿ ನಡೆದ ಸಿಡಿ ರೂಪದ ಭಕ್ತಿಯಾರ್ಚನೆಯ ವಿಧಿವಿಧಾನ.

ನೋಡುಗರ ಎದೆಯನ್ನು ಝಲ್ಲೆನಿಸುವ ರೀತಿಯಲ್ಲಿ ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಳ್ಳುತ್ತಿರುವ ಭಕ್ತರು. ಎಳೆಮಕ್ಕಳು ಕೂಡ ಬಾಯಿಗೆ ಕಬ್ಬಿಣದ ಸಲಾಕೆಯನ್ನು ಚುಚ್ಚಿಕೊಳ್ಳುವ ಮೂಲಕ ಹರಕೆಯನ್ನು ತೀರಿಸಿದರು. ಉತ್ಸವದ ಕೊನೆ ಕ್ಷಣದಲ್ಲಿ ಹರಕೆ ಹೊತ್ತ ಕೆಲವು ಭಕ್ತರು ಬೆನ್ನಿಗೆ ಚುಚ್ಚಲಾಗಿದ್ದ ಕಬ್ಬಿಣದ ಸಲಾಕೆಯೊಂದಿಗೆ ನೆಲದಿಂದ ಸುಮಾರು 100 ಅಡಿಗಳಷ್ಟು ಮೇಲೆ ಕಟ್ಟಲಾಗಿದ್ದ ಹಗ್ಗದೊಂದಿಗೆ ನೇತಾಡುತ್ತಾ ದೇವರಿಗೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ನೆರೆದಿದ್ದ ಭಕ್ತರನ್ನು ರೋಮಾಂಚನಗೊಳಿಸಿದರು.

ಕಳೆದ 50 ವರ್ಷಗಳಿಂದಲೂ ಆಚರಣೆ ಮಾಡಿಕೊಂಡು ಬರುತ್ತಿರುವ ಜಾತ್ರೆ ಹತ್ತು ಹಲವು ವಿಶೇಷಗಳಿಂದ ಕೂಡಿದೆ. ಹರಕೆ ಮಾಡಿಕೊಂಡ ಹಾಗೂ ಇಷ್ಟಾರ್ಥ ಈಡೇರಿಸಿಕೊಂಡ ಭಕ್ತರು ತಮ್ಮ ಭಕ್ತಿಯನ್ನು ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಂಡು ಮೀಟರ್‌ಗಟ್ಟಲೆ ದೂರದವರೆಗೆ ಟ್ರ್ಯಾಕ್ಟರ್‌, ಆಟೋ ಇತರೆ ನಾಲ್ಕು ಚಕ್ರದ ಭಾರೀ ವಾಹನಗಳನ್ನು ಎಳೆದು ಆಶ್ಚರ್ಯ ಮೂಡಿಸಿದರು.

Advertisement

ಭಕ್ತಿಯ ಪರವಶತೆಯಲ್ಲಿ ವಾಹನ ಎಳೆಯುತ್ತಿದ್ದವರನ್ನು ಸುತ್ತಲೂ ನೆರೆದಿದ್ದ ಸಾವಿರಾರು ಭಕ್ತರು ದೈವಸ್ತುತಿ ಮೂಲಕ ಹುರಿದುಂಬಿಸಿ ಭಕ್ತಿಯಾರ್ಚನೆ ನಿರ್ವಿಘ್ನವಾಗಿ ನಡೆಯುವಂತಾಗಲು ಸಹಕರಿಸಿದರು. ಇನ್ನು ಕೆಲವು ಭಕ್ತಾಧಿಗಳು ತಮ್ಮ ಹರಕೆಗಳನ್ನು ಬಾಯಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಳ್ಳುವ ಮೂಲಕ ತೀರಿಸಿದರು. ತರುವಾಯ ಭಕ್ತರು ದೇವಸ್ಥಾನ ಪ್ರವೇಶಿಸಿ ಅಂತಿಮ ವಿಧಿವಿಧಾನ ಪೂರೈಸಿದರು. ಮನೆಯಲ್ಲಿ ಸುಃಖ, ಶಾಂತಿ, ಕುಟುಂಬದ ಸಮಸ್ಯೆಗಳು ನಿವಾರಣೆಯಾದ ಹಿನ್ನೆಲೆಯಲ್ಲಿ ಭಕ್ತರು ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಂಡು ಲಾರಿ, ಆಟೋ ಮತ್ತು ಇತರೆ ವಾಹನಗಳನ್ನು ಎಳೆದರು.

ಹರಕೆ ಹೊತ್ತಿದ್ದ 50 ಕ್ಕೂ ಹೆಚ್ಚು ಭಕ್ತಾದಿಗಳು ವಿವಿಧ ರೀತಿಯಲ್ಲಿ ತಮ್ಮ ಹರಕೆಗಳನ್ನು ತೀರಿಸಿದರು. ಇವರೆಲ್ಲರೂ ಕೂಲಿಕಾರ್ಮಿಕರಾಗಿದ್ದು, ಕಳೆದ 10 ದಿನಗಳಿಂದಲೂ ವ್ರತವನ್ನು ಪಾಲಿಸುತ್ತಿದ್ದರು.

ಒಟ್ಟಾರೆ ನಗರದ ತಮಿಳು ಕಾಲೋನಿಯಲ್ಲಿ ನಡೆಯುವ ಕರುಮಾರಿಯಮ್ಮ ದೇವಿ ಜಾತ್ರೆ ನೋಡಗರ ಗಮನ ಸೆಳೆಯಿತು. ಎಲ್ಲಾ ಸಮುದಾಯದ ಜನರು ಕೂಡ ಜಾತ್ರೆಯಲ್ಲಿ ಭಾಗವಹಿಸಿದ್ದರು. ದೂರದ ಊರಿನಿಂದ ಬಂದ ಭಕ್ತರು ಹರಿಕೆ ತೀರಿಸಿ, ದೇವಿ ದರ್ಶನವನ್ನು ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next