ಚಿಕ್ಕಮಗಳೂರು: ಅಕ್ರಮ ಸಕ್ರಮ ಯೋಜನೆಯಡಿ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಕಂದಾಯ ಅದಾಲತ್ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ನಮೂನೆ 50, 53, 90ಸಿ, 90ಸಿಸಿ ಗಳಡಿ ಸಲ್ಲಿಸಿರುವ ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ವಿಲೇವಾರಿ ಮಾಡಲು ಕಂದಾಯ ಅದಾಲತ್ ಆಯೋಜಿಸಲಾಗುವುದು. ಅಧಿಕಾರಿಗಳಿಗೆ ಕಾಲಮಿತಿ ನಿಗದಿಗೊಳಿಸಿ ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗುವುದು ಎಂದರು.
ಅ.3ಕ್ಕೆ ಸಭೆ: ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದಿರುವುದರಿಂದ ಕೆಲಸ ಕಾರ್ಯಗಳು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲವೆಂಬುದು ತಮ್ಮ ಗಮನಕ್ಕೆ ಬಂದಿದೆ. ಅದೇ ಪರಿಸ್ಥಿತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ ಇದೆ. ಆಡಳಿತ ಯಂತ್ರವನ್ನು ಚುರುಕುಗೊಳ್ಳಬೇಕು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ಆಗಬೇಕು. ಈ ನಿಟ್ಟಿನಲ್ಲಿ ಅ.3 ರಂದು ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಕರೆಯಲಾಗಿದೆ ಎಂದರು.
ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಹಾಗೂ ಅಮೃತ್ ಯೋಜನೆಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ. ಯುಜಿಡಿ ಕಾಮಗಾರಿಯನ್ನು ಜನವರಿ 2020ರೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಅದೇ ರೀತಿ ಅಮೃತ್ ಯೋಜನೆ ಪೂರ್ಣಗೊಳಿಸಲು 2020 ಡಿಸೆಂಬರ್ ವರೆಗೂ ಕಾಲಾವಕಾಶವಿದೆ ಎಂದು ತಿಳಿಸಿದರು.
ನಗರದ ಕೆಲವೆಡೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ರವಿ, ತಮ್ಮ ಗಮನಕ್ಕೆ ಬಂದ ಇಂತಹ ಕಟ್ಟಡಗಳ ಕುರಿತು ಕ್ರಮ ಕೈಗೊಳ್ಳಲು ಈ ಹಿಂದೆಯೇ ಸೂಚಿಸಿದ್ದೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತೆರವುಗೊಳಿಸಿರುವ ಕುರಿತು ನಗರಸಭೆಯವರು ಸಿಡಿಎ ಮೇಲೆ, ಸಿಡಿಎ ನಗರಸಭೆ ಮೇಲೆ ಜವಾಬ್ದಾರಿ ವಹಿಸಿ ಸುಮ್ಮನಾಗುತ್ತಿದೆ. ನಮಗೆ ಯಾರ ಮೇಲೂ ಪ್ರೀತಿಯೂ ಇಲ್ಲ, ಪೂರ್ವಾಗ್ರಹ ಪೀಡಿತರಾಗಿಯೂ ಇಲ್ಲ. ಪ್ರಕರಣಗಳ ಕುರಿತು ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಕಟ್ಟಡ ಸರಿಯಾಗಿದ್ದರೆ ಸರಿ ಇದೆ ಎಂಬ ಹಿಂಬರಹ ಕೊಡಿ. ಅಕ್ರಮವಾಗಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂಬ ಆದೇಶ ನೀಡಿರುವುದಾಗಿ ಹೇಳಿದರು. ಕಲ್ಯಾಣನಗರದಲ್ಲಿ ಉದ್ಯಾನವನವನ್ನು ನಿವೃತ್ತ ಸರ್ಕಾರಿ ನೌಕರರೊಬ್ಬರು ಒತ್ತುವರಿ ಮಾಡಿ ಮಾರಾಟ ಮಾಡಿದ್ದಾರೆ ಎಂಬ ದೂರು ಬಂದಿದ್ದು, ಈ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ನಗರದಲ್ಲಿ ಮೆಡಿಕಲ್ ಕಾಲೇಜು ತೆರೆಯುವ ಸಂಬಂಧ ದಾಖಲೆಗಳೊಂದಿಗೆ 2 ದಿನಗಳಲ್ಲಿ ಪ್ರಸ್ತಾವನೆ ಹೋಗಲಿದೆ. ಕೇದ್ರದಲ್ಲಿ 25 ರಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಸಭೆ
ನಡೆಯಲಿದೆ. ಆ ಸಭೆಗೆ ಪ್ರಸ್ತಾವನೆ ಸಲ್ಲಿಸುವ ಯತ್ನ ನಡೆಯುತ್ತಿದೆ. ಇಲ್ಲವಾದಲ್ಲಿ ಪುನಃ 2-3 ತಿಂಗಳು ಕಾಯಬೇಕಾಗುತ್ತದೆ. ಸದರಿ ಸಭೆಯಲ್ಲಿ ಕಾಲೇಜು ಆರಂಭಕ್ಕೆ ಒಪ್ಪಿಗೆ ದೊರೆತಲ್ಲಿ ಕೇಂದ್ರ ಸರ್ಕಾರವು ನೋಡಲ್ ಅಧಿಕಾರಿಯನ್ನು ನೇಮಿಸುತ್ತದೆ ಎಂದು ಹೇಳಿದರು.