ಚಿಕ್ಕಮಗಳೂರು: ಕೋವಿಡ್ ಲಸಿಕೆ ಪಡೆಯಲು ಜನರು ಉದ್ದ ಉದ್ದದ ಸಾಲಿನಲ್ಲಿ ನಿಂತಿರುವ ಸುದ್ದಿಗಳನ್ನು ನೀವು ಓದಿದ್ದೀರಿ. ಆದರೆ ಇಲ್ಲಿ ಬಂದ ಎಲ್ಲರಿಗೂ ಟೋಕನ್ ನೀಡಿಲ್ಲ ಎಂದು ಜನರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ಘಟನೆ ನಡೆದಿದ್ದು ಚಿಕ್ಕಮಗಳೂರು ನಗರದ ಜೂನಿಯರ್ ಕಾಲೇಜು ಆವರಣದಲ್ಲಿ. ಇಲ್ಲಿ ಇಂದು ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಹೀಗಾಗಿ ಮುಂಜಾನೆಯಿಂದಲೇ ಜನರು ಸಾಲುಗಟ್ಟಿ ಬಂದಿದ್ದರು.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಯಲ್ಲಿ 46 ಸಾವಿರ ಕೋವಿಡ್ ಪ್ರಕರಣ ಪತ್ತೆ, 979 ಸಾವು
500ಕ್ಕೂ ಹೆಚ್ಚು ಜನ ಮುಂಜಾನೆಯಿಂದ ಕೋವಿಡ್ ಲಸಿಕೆ ಪಡೆಯಲೆಂದು ಕಾದು ನಿಂತಿದ್ದರು. ಆದರೆ ಅಧಿಕಾರಿಗಳು ಬಂದು ಕೇವಲ 200 ಮಂದಿಗೆ ಟೋಕನ್ ಕೊಟ್ಟಿದ್ದರು. ಇದರಿಂದ ಟೋಕನ್ ಸಿಗದ ಜನರು ರೊಚ್ಚಿಗೆದ್ದ ಘಟನೆ ನಡೆಯಿತು.
ಬೆಳ್ಳಂಬೆಳಗ್ಗೆ ಕಾದು ನಿಂತರೂ ಟೋಕನ್ ನೀಡಿಲ್ಲ ಎಂದು ಅಧಿಕಾರಿಗಳು, ಏಜೆನ್ಸಿ ವಿರುದ್ಧ ಆಕ್ರೋಶಗೊಂಡ ಜನರು ಸಿಬ್ಬಂದಿ ಜೊತೆ ಮಾತಿನ ಚಕಮಕಿಯನ್ನು ನಡೆಸಿದರು.