Advertisement

ಜನಸಂಪರ್ಕ ಸಭೆಯಲ್ಲಿ ದೂರಿನ ಸುರಿಮಳೆ

11:54 AM Jul 10, 2019 | Naveen |

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ವತಿಯಿಂದ ನಡೆದ ಕಸಬಾ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಕಂದಾಯ ಇಲಾಖೆ ವಿರುದ್ಧವೇ ಹೆಚ್ಚಿನ ದೂರುಗಳು ಕೇಳಿ ಬಂದವು.

Advertisement

ತೇಗೂರು ಗ್ರಾಪಂ ವ್ಯಾಪ್ತಿಯ ಆದಿಶಕ್ತಿ ನಗರದ ಸ.ನಂ.115 ಗೋಮಾಳವಾಗಿದೆ. ಆದರೂ ಅದನ್ನು ಗ್ರಾಮ ಠಾಣಾ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಹಕ್ಕುಪತ್ರ ನೀಡುತ್ತಿಲ್ಲ. ಕೂಡಲೆ ಗ್ರಾಮಠಾಣಾ ಎಂದಿರುವುದನ್ನು ಗೋಮಾಳವೆಂದು ಪರಿವರ್ತಿಸಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.

ಅದೇ ರೀತಿಯ ಅರ್ಜಿ ರಾಂಪುರ ಗ್ರಾಮಸ್ಥರಿಂದಲೂ ಬಂದಿತ್ತು. ಈ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಮೂಗ್ತಿಹಳ್ಳಿ ಗ್ರಾಮದ ಪುಟ್ಟರಂಗಪ್ಪ ಎಂಬುವವರು ಗಂಗಾ ಕಲ್ಯಾಣ ಯೋಜನೆಯಡಿ 2017ರಲ್ಲಿ ತಮಗೆ ಬೋರ್‌ವೆಲ್ ಮಂಜೂರಾಗಿತ್ತು. ಈವರೆಗೂ ಕೆಲಸ ಮಾಡಿಕೊಟ್ಟಿಲ್ಲವೆಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಇಂಜಿನಿಯರ್‌, ಮೆಸ್ಕಾಂ ಕೆಲಸ ಸಂಪೂರ್ಣವಾಗಿದೆ ಎಂದು ಹೇಳಿದರು. ದೇವರಾಜ ಅರಸು ಅಭಿವೃದ್ಧಿ ನಿಗಮದವರು ಪಂಪ್‌ಸೆಟ್ ಹಾಗೂ ಮೋಟಾರ್‌ ಅಳವಡಿಸಬೇಕಾಗಿರುವುದರಿಂದ ಆ ಇಲಾಖೆಗೆ ಅರ್ಜಿ ವರ್ಗಾಯಿಸುವಂತೆ ಸೂಚಿಸಲಾಯಿತು.

ತೇಗೂರು ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಗ್ರಾಮಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದರೂ ಈಗ ಪುನಃ ಗ್ರಾಮಸಭೆಯಲ್ಲಿ ವಿಷಯ ಮಂಡಿಸುವುದಾಗಿ ಹೇಳಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

Advertisement

ಇದಕ್ಕೆ ಪ್ರತಿಕ್ರಯಿಸಿದ ತೇಗೂರು ಗ್ರಾಪಂ ಪಿಡಿಒ, ಈ ಹಿಂದೆ 118 ಫಲಾನುಭವಿಗಳನ್ನು ಆಶ್ರಯ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು. ಗ್ರಾಮಸಭೆಯಲ್ಲಿಯೂ ಅನುಮೋದನೆ ಪಡೆದುಕೊಳ್ಳಲಾಗಿತ್ತು. ನಂತರ ಗ್ರಾಪಂ ಆಡಳಿತ ಮಂಡಳಿ ಬದಲಾಗಿದ್ದು, ಈಗಿನ ಆಡಳಿತ ಮಂಡಳಿ ತಾವು ಆಯ್ಕೆ ಮಾಡಿದ ಫಲಾನುಭವಿಗಳಿಗೆ ಸವಲತ್ತು ನೀಡಬೇಕೆಂದು ಹೇಳುತ್ತಿದ್ದಾರೆಂದು ಮಾಹಿತಿ ನೀಡಿದರು.

ಜಿಪಂ ಸಿಇಒ ಎಸ್‌.ಅಶ್ವತಿ ಮಾತನಾಡಿ, ಒಮ್ಮೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರು ಅರ್ಹರು ಎಂದು ತೀರ್ಮಾನಿಸಿ ಗ್ರಾಮಸಭೆಯಲ್ಲಿ ಅನುಮೋದನೆ ಪಡೆದುಕೊಂಡ ನಂತರ ಮತ್ತೂಮ್ಮೆ ಗ್ರಾಮಸಭೆಗೆ ಹೋಗುವ ಅವಶ್ಯಕತೆ ಇಲ್ಲ. ಈ ಹಿಂದೆ ಆಯ್ಕೆ ಮಾಡಿದ್ದ ಫಲಾನುಭವಿಗಳಿಗೇ ಸವಲತ್ತು ನೀಡಿ ಎಂದು ಆದೇಶಿಸಿದರು.

ಮಲ್ಲೇನಹಳ್ಳಿ ಗ್ರಾಮದಲ್ಲಿ 94 ಸಿ ಅಡಿ 124 ಅರ್ಜಿಗಳನ್ನು ಹಿಂದೆ ಪಡೆದುಕೊಳ್ಳಲಾಗಿತ್ತು. ಈ ಪೈಕಿ ಕೆಲವರಿಗೆ ಹಕ್ಕುಪತ್ರವನ್ನು ನೀಡಲಾಗಿದೆ. ನಂತರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಕಚೇರಿಯಲ್ಲಿ ಕೇಳಿದರೆ ಕಡತವೇ ಇರಲಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಬಗಾದಿ ಗೌತಮ್‌, ಕೂಡಲೆ ಈ ಬಗ್ಗೆ ಪರಿಶೀಲಿಸಿ ತಮಗೆ ವರದಿ ಸಲ್ಲಿಸಬೇಕು. ಅರ್ಜಿದಾರರ ಅರ್ಜಿಗಳನ್ನು ವಿಲೇ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರು.

ಬಹುತೇಕ ಅರ್ಜಿಗಳು 94ಸಿ ಮತ್ತು 94ಸಿಸಿಗೆ ಸಂಬಂಧಿಸಿವೆ. ಆದ್ದರಿಂದ, ಜಿಲ್ಲಾಧಿಕಾರಿಗಳು, ಈ ಬಗ್ಗೆಯೇ ಹೆಚ್ಚಿನ ದೂರುಗಳಿವೆ. ಕೂಡಲೆ 94ಸಿ ಮತ್ತು 94ಸಿಸಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಿ. ಶೀಘ್ರವೇ ಈ ಕುರಿತು ಪ್ರಗತಿ ಪರಿಶೀಲನೆ ನಡೆಸುವುದಾಗಿ ತಹಶೀಲ್ದಾರರಿಗೆ ತಿಳಿಸಿದರು. ದೀನ್‌ದಯಾಳ್‌ ಉಪಾಧ್ಯಾಯ ಯೋಜನೆಯಡಿ ಗುತ್ತಿಗೆದಾರರು ಕೇವಲ ಪೈಪ್‌ಗ್ಳನ್ನು ಹಾಕಿ ಹೋಗಿದ್ದಾರೆಂಬ ದೂರು ಕೇಳಿ ಬಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಎಇಇ, ಮಂಗಳೂರಿನ ಜ್ಯೋತಿ ಎಲೆಕ್ಟ್ರಿಕಲ್ಸ್ನವರು ಜಿಲ್ಲೆಯ ಗುತ್ತಿಗೆ ಪಡೆದುಕೊಂಡಿದ್ದಾರೆ. ಕೆಲಸ ಮಾಡಲಾಗುತ್ತಿದೆ ಎಂದರು.

ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಜಿಲ್ಲೆಯಾದ್ಯಂತ ಇದೇ ರೀತಿಯ ದೂರುಗಳು ಕೇಳಿ ಬರುತ್ತಿವೆ. ಕೂಡಲೆ ಈ ಬಗ್ಗೆ ಪರಿಶೀಲಿಸಿ ಎಲ್ಲೆಡೆ ಕೆಲಸ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next