ಚಿಕ್ಕಮಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರದಂತೆ ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಸಹ, ಜನರು ಮಾತ್ರ ಲಾಕ್‌ಡೌನ್‌ಗೆ ಡೋಂಟ್‌ಕೇರ್ ಎನ್ನದೇ ಸಂಚರಿಸುತ್ತಿರುವುದು ಆರಕ್ಷಕರಿಗೆ ತಲೆನೋವಾಗಿದೆ. ಅನಗತ್ಯವಾಗಿ ತಿರುಗಾಡುವರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತಿದ್ದಾರೆ. ಕೆಲವರು ಲಾಕ್ ಡೌನ್‌ಗೂ ನಮ್ಮಗೂ ಸಂಬಂಧವೇ ಇಲ್ಲವೆಂಬಂತೆ ಕುಂಟು ನೆಪ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ವಾಹನ ಸಂಚಾರ ನಿಯಂತ್ರಿಲು ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರೇ ರಸ್ತೆಗಿಳಿದರು.
ಬೋಳರಾಮೇಶ್ವರ ದೇವಾಲಯ ಸಮೀಪದ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಎಸ್‌ಪಿ ಹರೀಶ್ ಪಾಂಡೆ ತಾವೇ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು. ಕಾರಣವಿಲ್ಲದೇ ತಿರುಗಾಡುವರ ವಾಹನ ಜಪ್ತಿ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ನಕಲಿ ಕರ್ಫ್ಯೂ ಪಾಸ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕರ್ಫ್ಯೂ ಪಾಸ್ ಹೊಂದಿರುವವರ ಪಾಸ್‌ಗಳನ್ನು ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಕಟ್ಟುನಿಟ್ಟಾಗಿ ವಾಹನ ತಪಾಸಣೆ ನಡೆಸಲಾಗುತ್ತಿದ್ದು, ಅನಗತ್ಯವಾಗಿ ತಿರುಗಾಡುವರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.
ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದು, ಸರ್ಕಾರದ ಆದೇಶಕ್ಕೂ ನಮ್ಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಹಾಗಾಗಿ, ಪೊಲೀಸರು ಹೈರಾಣಾಗಿ ಹೋಗಿದ್ದು, ಜನಸಂಚಾರವನ್ನು ನಿಯಂತ್ರಿಸಲು ಇನ್ನೂ ಕಟ್ಟುನಿಟ್ಟಿನ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಬುಧವಾರ ಬೆಳಿಗ್ಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ರೈತರು ಮತ್ತು ವ್ಯಾಪಾರಸ್ಥರು ಏಕಕಾಲದಲ್ಲಿ ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಇಡೀ ಕೃಷಿ ಉತ್ಪನ್ನ ಮಾರುಕಟ್ಟೆಯೇ ಜನಜಂಗುಳಿಯಿಂದ ತುಂಬಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟಿಗೆ ಮುಗಿಬಿದ್ದರು.
ಜನರನ್ನು ಚದರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸದರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹಾರ ನಡೆಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿಕೊಂಡರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಮಾರ್ಪಟಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಜನರು ಡೋಟ್ ಕೇರ್ ಎನ್ನುತ್ತಿರುವುದು ವಿಪರ್ಯಾಸವಾಗಿದೆ.