Advertisement
ಭಾರೀ ಮಳೆಯಿಂದ ತನ್ನ ಮೂಲ ಚಿತ್ರಣವನ್ನೇ ಕಳೆದುಕೊಂಡ ಮೂಡಿಗೆರೆ ತಾಲೂಕಿನ ಮಲೆಮನೆ, ದುರ್ಗದಹಳ್ಳಿ, ಆಲೇಕಾನ್ ಹೊರಟ್ಟಿ, ಮಧುಗುಂಡಿ ಮುಂತಾದ ಸ್ಥಳಗಳಿಗೆ ಬುಧವಾರ ಸಚಿವರಾದ ಸಿ.ಟಿ.ರವಿ ಮತ್ತು ಮಾಧುಸ್ವಾಮಿ ಭೇಟಿ ನೀಡಿದಾಗ ಸಂತ್ರಸ್ತರು ಪ್ರಕೃತಿ ವಿಕೋಪದ ಕರಾಳತೆಯನ್ನು ಬಿಚ್ಚಿಟ್ಟರು.
Related Articles
Advertisement
ತುರ್ತು ಪರಿಹಾರವಾಗಿ ಮನೆ ಕಳೆದುಕೊಂಡವರಿಗೆ 10 ಸಾವಿರ ರೂ. ಅನ್ನು ಈಗಾಗಲೆ ಕೊಡಲಾಗಿದೆ. ಉಳಿದ ಪರಿಹಾರದ ಹಣವನ್ನು ಮುಂದಿನ ದಿನಗಳಲ್ಲಿ ಕೊಡಲಾಗುವುದು ಎಂದು ತಿಳಿಸಿದರು.
ಕಳೆದ 100 ವರ್ಷಗಳಿಂದ ನಮ್ಮ ಕುಟುಂಬ ಇಲ್ಲಿ ವಾಸಿಸುತ್ತಾ ಬಂದಿದೆ. ಆದರೆ, ಮೊನ್ನೆ ಬಂದ ವಿಪರೀತ ಮಳೆ ನಮ್ಮ ಬದುಕನ್ನೇ ನಾಶ ಮಾಡಿದೆ. 22 ಎಕರೆ ಭೂಮಿ ಹಾಳಾಗಿದೆ. ಕೇವಲ ನಮ್ಮ ಕುಟುಂಬ ಮಾತ್ರವಲ್ಲ, ಸುತ್ತಮುತ್ತಲು 25-30 ಕುಟುಂಬಗಳು ತಮ್ಮ ಜೀವಿತಾವಧಿಯ ಎಲ್ಲಾ ಆಸ್ತಿಯನ್ನು ಕಳೆದುಕೊಂಡಿದ್ದಾರೆ ಎಂದರು. ಅವರಿಗೆ ರವಿ, ಎಂ.ಬಿ.ಚಂದ್ರೇಗೌಡ, ಬಿ.ಚಂದ್ರೇಗೌಡ ಅವರು ಸಹ ಧ್ವನಿಗೂಡಿಸಿದರು.
ಇದೇ ರೀತಿಯ ಸ್ಥಿತಿ ಆಲೇಕಾನ್, ಬಿದರುತಳ, ಮಧುಗುಂಡಿ, ದುರ್ಗದಹಳ್ಳಿ, ಅಲ್ಗಡ ಮುಂತಾದ ಬೆಟ್ಟದ ತಡಿಯಲ್ಲಿ ಇರುವ ಗ್ರಾಮಗಳ ಜನರದ್ದಾಗಿತ್ತು. ಎಲ್ಲರ ಬೇಡಿಕೆಯೂ ಈ ವಿಪರೀತ ಮಳೆ ಸುರಿಯುವ ಪ್ರದೇಶದಿಂದ ನಮ್ಮನ್ನು ಸ್ಥಳಾಂತರಿಸಿ ಭೂಮಿ ಹಾಗೂ ಪರಿಹಾರ ನೀಡಿ, ಹೊಸದಾಗಿ ನಮ್ಮ ಜೀವನವನ್ನು ಆರಂಭಿಸಿಕೊಳ್ಳುತ್ತೇವೆ ಎಂಬುದಾಗಿತ್ತು.
ಈ ಎಲ್ಲಾ ಗ್ರಾಮಗಳಿಗೆ ಹೋಗುವ ರಸ್ತೆಗಳ ಮೇಲೆ ಬಿದ್ದಿದ್ದ ಲಾರಿಗಟ್ಟಲೆ ಮಣ್ಣನ್ನು ತೆಗೆದು ಈಗ ವಾಹನಗಳು ಓಡಾಡುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಆದರೆ, ಅನೇಕ ಕಡೆ ರಸ್ತೆಗಳೇ ನಾಶವಾಗಿ ಕೆಲವು ಗ್ರಾಮಗಳಿಗೆ ಹೊಸದಾಗಿ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದ ಶಾಸಕ ಕುಮಾರಸ್ವಾಮಿ, ಈ ಗ್ರಾಮಗಳ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಈ ಭೂಮಿಯನ್ನು ಅರಣ್ಯ ಇಲಾಖೆಗೆ ಕೊಟ್ಟು ಅಲ್ಲಿಂದ ಸುರಕ್ಷಿತವಾದ ಸ್ಥಳದಲ್ಲಿ ಭೂಮಿ ಪಡೆದು ಈ ಕುಟುಂಬಗಳಿಗೆ ಪುನರ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಬೇಕೆಂದು ಸಚಿವರಿಗೆ ಹೇಳಿದರು.
ಸಚಿವರಾದ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಬೆಟ್ಟದ ಬುಡದಲ್ಲಿರುವ ಈ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿದರಲ್ಲದೇ ಅಲ್ಲಲ್ಲಿ ಮಳೆಯಿಂದ ಸಾಕಷ್ಟು ಹಾನಿಗೊಳಗಾದ ಕುಟುಂಬದವರನ್ನು ಹಾಗೂ ಗದ್ದೆ-ತೋಟಗಳನ್ನು ಕಳೆದುಕೊಂಡ ಗ್ರಾಮಸ್ಥರನ್ನು ಭೇಟಿ ಮಾಡಿ, ಸರ್ಕಾರದಿಂದ ತಕ್ಷಣಕ್ಕೆ ದೊರೆಯುವ ಪರಿಹಾರ ಹಾಗೂ ಮುಂದೆ ಒದಗಿಸಲಿರುವ ಖಾಯಂ ಪರಿಹಾರದ ಬಗ್ಗೆ ವಿವರಿಸಿ ಸಾಂತ್ವನ ಹೇಳಿದರು.
ಆಲೇಕಾನ್ ಹೊರಟ್ಟಿ ಸೇರಿದಂತೆ ಪೂರ್ಣವಾಗಿ ಮನೆ ಕಳೆದುಕೊಂಡು ಸಂತ್ರಸ್ತರಿಗೆ ಆಶ್ರಯ ನೀಡಿರುವ ಬಿದರಹಳ್ಳಿ ಮೊರಾರ್ಜಿ ಶಾಲೆಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿದ್ದ ಸಂತ್ರಸ್ತರು ಸಹ ತಮಗೆ ಬದಲಿ ಭೂಮಿ ಹಾಗೂ ವಸತಿ ಸೌಲಭ್ಯ, ಪರಿಹಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟರು.
ಮಳೆಯ ಹೊಡೆತ ಈ ಭಾಗದಲ್ಲಿ ಕಡಿಮೆಯಾಗಿದೆ. ಭೋರ್ಗರೆದು ಹರಿದ ಹಳ್ಳಗಳು ಈಗ ಶಾಂತವಾಗಿವೆ. ಆದರೆ, ಅತಿವೃಷ್ಟಿಯಿಂದಾದ ಹಾನಿ ಮಾತ್ರ ಹಾಗೇ ಉಳಿದಿದೆ. ಮತ್ತೂಮ್ಮೆ ಇಲ್ಲಿ ರಸ್ತೆಗಳನ್ನು ಸರಿಪಡಿಸಿ ನೀಡಬಹುದು. ಇರುವ ಜಾಗದಲ್ಲಿ ವಸತಿ ಸೌಲಭ್ಯ ಕಲ್ಪಿಸಬಹುದಾದರೂ ಈಗಾಗಲೇ ಮಣ್ಣು, ಕಲ್ಲಿನಲ್ಲಿ ಸೇರಿರುವ ತೋಟಗಳನ್ನು ಪುನಃಶ್ಚೇತನಗೊಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದೊಮದೇ ಪರಿಹಾರ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಅಭಿಪ್ರಾಯಪಟ್ಟರು. ಸಚಿವರಿಗೆ ಅತಿವೃಷ್ಟಿ ಹಾನಿಗೊಳಗಾದ ಕುಟುಂಬಗಳಿಗೆ ಒದಗಿಸಿರುವ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿ ಡಾ| ಬಗಾದಿಗೌತಮ್ ವಿವರ ನೀಡಿದರು. ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ, ಜಿ.ಪಂ. ಸಿಇಒ ಎಸ್.ಅಶ್ವತಿ, ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಇತರರಿದ್ದರು.