ಚಿಕ್ಕಮಗಳೂರು: ಮಲೆನಾಡಿನ ಹೇಮಾವತಿ ಲಕ್ಷಾಂತರ ಜನರ ಜೀವನದಿಯಾಗಿದ್ದು, ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹುಟ್ಟಿ ಬಣಕಲ್ ಮೂಡಿಗೆರೆಯಿಂದ ಹರಿದು ಹಾಸನ ಜಿಲ್ಲೆಯ ಗೋರೂರು ಅಣೆಕಟ್ಟನ್ನು ತಲುಪುತ್ತದೆ. ಆದರೆ, ಇತ್ತೀಚೆಗೆ ನದಿ ತೀರದಲ್ಲಿ ಸ್ನಾನ, ಬಯಲು ಶೌಚ ಮಾಡುವುದರಿಂದ ಕುಡಿಯುವ ನೀರಿನ ಮೂಲ ಮಲಿನಗೊಳ್ಳುತ್ತಿದೆ.
ವೇದಾವತಿ ನದಿ ನೂರಾರು ಗ್ರಾಮಗಳ ಲಕ್ಷಾಂತರ ಜನರ ಕುಡಿಯುವ ನೀರಿನ ಮೂಲವಾಗಿದೆ. ಬಣಕಲ್ ಸಮೀಪ ಹೇಮಾವತಿ ನದಿ ತೀರದಲ್ಲಿ ರಸ್ತೆ ಕೆಲಸಕ್ಕೆಂದು ಬಂದ ನೂರಾರು ಕಾರ್ಮಿಕರು ನದಿ ತೀರದಲ್ಲಿ ಟೆಂಟ್ ನಿರ್ಮಿಸಿ ವಾಸ್ತವ್ಯ ಹೂಡಿದ್ದು, ನದಿ ತೀರದಲ್ಲಿಯೇ ಸ್ನಾನ, ಬಯಲು ಶೌಚ ಮಾಡಿ ಕುಡಿಯುವ ನೀರಿನ ಮೂಲವನ್ನು ಮಲೀನಗೊಳಿಸುತ್ತಿದ್ದಾರೆ.
ಗ್ರಾಮಸ್ಥರಾದ ಸಂಜಯಗೌಡ ಈ ಬಗ್ಗೆ ಮಾತನಾಡಿ, ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆಯಾಗಿದ್ದು, ಹೇಮಾವತಿ ನದಿ ತೀರದಲ್ಲಿ ಬಯಲು ಶೌಚ ಮಾಡುತ್ತಿರುವುದರಿಂದ ಕುಡಿಯುವ ನೀರಿನ ಮೂಲ ಮಲಿನವಾಗುವ ಸಾಧ್ಯತೆ ಇದೆ. ರಸ್ತೆ ಕಾಮಗಾರಿಯ ಗುತ್ತಿಗೆದಾರರು ತಮ್ಮ ಕೆಲಸಗಾರರಿಗೆ ಬೇರೆಡೆ ವಸತಿ ಸೌಕರ್ಯ ಕಲ್ಪಿಸಿಕೊಡಬೇಕು. ಹೀಗೆ ಬಯಲಿನಲ್ಲಿ ಟೆಂಟ್ ಹಾಕಿ ವಾಸಿಸುವುದು ಸರಿಯಲ್ಲ ಎಂದರು.
ಹೇಮಾವತಿ ನದಿ ತೀರದಲ್ಲಿ ಟೆಂಟ್ ನಿರ್ಮಿಸಿ ವಾಸ್ತವ್ಯ ಹೂಡಿರುವುದು ನನ್ನ ಗಮನಕ್ಕೆ ಬಂದಿದೆ. ಅಲ್ಲಿಂದ ಅವರನ್ನು ಬೇರೆಡೆಗೆ ಕಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
.
ಮಹೇಶ್,
ಬಣಕಲ್ ಗ್ರಾಪಂ ಪಿಡಿಒ