ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ ಮಧ್ಯಾಹ್ನದ ನಂತರ ಮಳೆ ಸುರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಮುದ್ರೆಮನೆಯಿಂದ ಹೊಯ್ಸಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದು ಸಂಚಾರ ಸ್ಥಗಿತಗೊಂಡಿದೆ.
ಮೂಡಿಗೆರೆ ತಾಲೂಕಿನ ಕಳಸ, ಕುದುರೆಮುಖ, ಕೊಟ್ಟಿಗೆಹಾರ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ತಾಲೂಕುಗಳಲ್ಲೂ ಪ್ರತಿನಿತ್ಯ ಕೆಲ ಸಮಯ ಉತ್ತಮ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನಲ್ಲೂ ಕೆಲವೆಡೆ ಆಗಾಗ್ಗೆ ಜೋರಾಗಿ ಮಳೆಯಾಗುತ್ತಿದೆ. ಮೂರ್‍ನಾಲ್ಕು ದಿನದಿಂದ ಮೂಡಿಗೆರೆ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನದ
ನಂತರ ದಿಢೀರ್ ಎಂಬಂತೆ ಮಳೆ ಸುರಿಯುತ್ತಿದೆ.
ಮಳೆಯಿಂದ ಗೋಣಿಬೀಡು, ಬಣಕಲ್, ಬಾಳೂರು ಹೋಬಳಿ ವ್ಯಾಪಿಯ ಅಲ್ಲಲ್ಲಿ ಸಣ್ಣಪುಟ್ಟ ಅವಘಡಗಳು ಸಂಭವಿಸಿವೆ. ಭಾರೀ ಮಳೆಯಿಂದಾಗಿ ತಾಲೂಕಿನ ಮುದ್ರೆಮನೆಯಿಂದ ಹೊಯ್ಸಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿರ್ಮಿಸಿರುವ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ. ಹೊಯ್ಸಳಲು ಗ್ರಾಮದಲ್ಲಿ 700ಕ್ಕೂ ಅಧಿಕ ಮಂದಿ ವಾಸವಾಗಿದ್ದು, ಪಟ್ಟಣಕ್ಕೆ ತೆರಳಲು ಈ ರಸ್ತೆಯೊಂದನ್ನೇ ಅವಲಂಬಿಸಿದ್ದಾರೆ. ಇದೀಗ ಸೇತುವೆ ಕುಸಿದು ಬಿದ್ದಿದ್ದರಿಂದ ಯಾವ ವಾಹನವೂ ಚಲಿಸದಂತಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಸೇತುವೆ ದುರಸ್ತಿಪಡಿಸಿ ಜನರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.