ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ಗುಡ್ಡ ಕುಸಿದು 1 ಎಕರೆ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಕಳೆದ 1 ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿ ಮಳೆ ಅಬ್ಬರ ತೀವ್ರವಾಗಿದ್ದು, ಈಗಾಗಲೇ ಅತಿವೃಷ್ಟಿಯಿಂದ ಆದ ಹಾನಿಯಿಂದ ಚೇತರಿಸಿಕೊಳ್ಳುವ ಮೋದಲೇ ಮತ್ತೆ ಮಳೆ ರೌದ್ರಾವತಾರ ತಾಳಿದೆ. ಹಲವೆಡೆ ಕುಸಿದ ಗುಡ್ಡ ಹಾಳಾದ ರಸ್ತೆ ಇವನ್ನೆಲ್ಲ ಸರಿಪಡಿಸುವ ಮೊದಲೇ ಮತ್ತೆ ಭೂ ಕುಸಿತದ ಭೀತಿ ಎದುರಾಗಿದೆ. ಹೀಗಾಗಿ ತಾಲೂಕಿನ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಶನಿವಾರವೂ ಮೂಡಿಗೆರೆ ತಾಲೂಕಿನ ಪಟ್ಟಣ, ಕಳಸ, ಚಾರ್ಮಾಡಿ ಘಾಟಿ, ಕೊಟ್ಟಿಗೆಹಾರ, ಜಾವಳಿ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಹಂಡುಗುಳಿ ಗ್ರಾಮದ ಸತೀಶ್ ಎಂಬುವವರ ಕಾಫಿ ತೋಟದಲ್ಲಿ 30 ಅಡಿಗೂ ಹೆಚ್ಚು ಆಳಕ್ಕೆ ಗುಡ್ಡ ಕುಸಿದಿದ್ದು, 1 ಎಕರೆಗೂ ಹೆಚ್ಚು ಪ್ರದೇಶದ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಚೆನ್ನಡ್ಲು ಗ್ರಾಮದಲ್ಲೂ ಗುಡ್ಡ ಕುಸಿಯುವ ಭೀತಿ ಎದುರಾಗಿರುವುದರಿಂದ ಜನ ಗ್ರಾಮ ತೊರೆಯುತ್ತಿದ್ದಾರೆ. ಈ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶೃಂಗೇರಿ ತಾಲೂಕಿನಲ್ಲಿ ಶನಿವಾರ ಬೆಳಗಿನಿಂದ ಮಳೆ ಸ್ವಲ್ಪ ಬಿಡುವು ನೀಡಿತ್ತಾದರೂ ಮಧ್ಯಾಹ್ನದ ನಂತರ ಪುನಃ ಅಬ್ಬರಿಸಲಾರಂಭಿಸಿದೆ. ನರಸಿಂಹರಾಜಪುರ ಹಾಗೂ ಕೊಪ್ಪ ತಾಲೂಕುಗಳಲ್ಲಿ ಬೆಳಗ್ಗೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಕೆಲವೆಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ಹೇಮಾವತಿ, ತುಂಗಾ ಮತ್ತು ಭದ್ರಾ ನದಿಗಳು ಉಕ್ಕಿ ಹರಿಯುತ್ತಿವೆ.