Advertisement
ಮೂಡಿಗೆರೆ ತಾಲೂಕಿನಾದ್ಯಂತ 120ಕ್ಕೂ ಹೆಚ್ಚು ಜನರು ನಡುಗುಡ್ಡೆಯಲ್ಲಿ ಶುಕ್ರವಾರ ಸಂಜೆಯಿಂದ ಸಿಲುಕಿದ್ದಾರೆ. ಚಿಕ್ಕಮಗಳೂರು ತಾಲೂಕಿನ ವಿವಿಧೆಡೆಗಳಲ್ಲಿ ಹಲವು ಮನೆಗಳು ಕುಸಿದು ಬಿದ್ದಿವೆ. ಖಾಂಡ್ಯದಲ್ಲಿ ಭದ್ರಾ ನದಿ ದೇವಾಲಯ, ಚರ್ಚ್, ಮಸೀದಿ ಹಾಗೂ ಮನೆಗಳಿಗೆ ನುಗ್ಗಿದೆ.
Related Articles
Advertisement
ಮನೆಗಳು ಕುಸಿತ: ಚಿಕ್ಕಮಗಳೂರು ತಾಲೂಕಿನಲ್ಲಿ ಮಳೆಯ ಅಬ್ಬರ ಶನಿವಾರ ಸ್ವಲ್ಪ ಕಡಿಮೆಯಾಗಿತ್ತಾದರೂ ಹಿರೇಮಗಳೂರು ಭಾಗದಲ್ಲಿ 2 ಮನೆಗಳು ಬಿದ್ದು ಹೋಗಿವೆ. ಕಳಸ, ಬಾಳೂರು ಭಾಗದಲ್ಲೂ ಹತ್ತಾರು ಮನೆಗಳು ಕುಸಿದು ಬಿದ್ದಿವೆ.
100ಕ್ಕೂ ಹೆಚ್ಚು ಜನರ ರಕ್ಷಣೆ: ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಖಾಂಡ್ಯದ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸಂಗಮೇಶ್ವರಪೇಟೆಯ ವಿದ್ಯಾರ್ಥಿ ನಿಲಯಕ್ಕೆ ಕಳುಹಿಸಿದೆ. ಖಾಂಡ್ಯ ಗ್ರಾಮದೊಳಗೆ ಭದ್ರಾ ನದಿ ಹರಿದಿದ್ದು, ಖಾಂಡ್ಯ ದೇವಾಲಯ, ಮಸೀದಿ, ಚರ್ಚ್‌ಗಳು ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದೆ.
ಸಂಪರ್ಕ ಕಡಿತ: ನರಸಿಂಹರಾಜಪುರ ತಾಲೂಕಿನಲ್ಲೂ ನಿರಂತರ ಮಳೆಯಾಗುತ್ತಿದ್ದು, ಹೊನ್ನೆಕುಡಿಗೆ ಗ್ರಾಪಂ ವ್ಯಾಪ್ತಿಯ ಕೂಸಗಲ್ ಸಾಯದ ಗುರುಮೂರ್ತಿ ಎಂಬುವರ ಮನೆಗೆ ನೀರು ನುಗ್ಗಿದೆ. ತಾಲೂಕಿನ ಬಾಳೆಹೊನ್ನೂರಿನ ಬಳಿ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಕಳಸ-ಬಾಳೆಹೊನ್ನೂರು ರಸ್ತೆ ಜಲಾವೃತವಾಗಿದೆ. ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಶೆಟ್ಟಿಕೊಪ್ಪ ಗಾಂಧಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಊಟದ ಹಾಲ್ಗೂ ನುಗ್ಗಿದ ನೀರು: ಶೃಂಗೇರಿ ತಾಲೂಕಿನಲ್ಲೂ ಮಳೆಯ ಆರ್ಭಟ ಮುಂದುವರಿದಿದ್ದು, ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶೃಂಗೇರಿ ಶಂಕರ ಮಠದ ಗುರುಭವನ ಹಾಗೂ ಗಾಂಧಿ ಭವನಕ್ಕೆ ನದಿ ನೀರು ನುಗ್ಗಿದೆ. ಮಠದ ಊಟದ ಹಾಲ್ಗೂ ನೀರು ನುಗ್ಗಿದೆ. ಯಾತ್ರಿ ನಿವಾಸಕ್ಕೂ ನದಿ ನೀರು ನುಗ್ಗಿದ್ದು, ನರಸಿಂಹ ವನಕ್ಕೆ ತೆರಳುವ ಮಾರ್ಗ ನೀರಿನಲ್ಲಿ ಮುಳುಗಿದೆ. ತಾಲೂಕಿನ ವಿವಿಧೆಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಕಡೂರು ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಆದರೆ, ಕಳೆದ ಕೆಲದಿನಗಳಿಂದ ಸುರಿದ ಮಳೆಯಿಂದ ಇಂದು ಬೀರೂರು ಹಾಗೂ ಕಡೂರಿನಲ್ಲಿ ಹಲವು ಮನೆಗಳು ಕುಸಿದು ಬಿದ್ದಿವೆ. ತರೀಕೆರೆ ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ.