Advertisement
ಬುಧವಾರ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನಿಗಾಗಿ ಶೋಧ ಕಾರ್ಯ ಗುರುವಾರವೂ ಮುಂದುವರೆದಿತ್ತು.
Related Articles
Advertisement
ಮೇಲ್ಭಾಗದ ಹುಲ್ಲುಗಾವಲಿನ ಗುಡ್ಡ ಸಹ ಕುಸಿದಿದ್ದು, ಮಣ್ಣು, ಕಲ್ಲು ರಸ್ತೆ ಮೇಲೆ ಬಿದ್ದಿವೆ. ಒಂದು ಸಣ್ಣ ಕಾರು ಮಾತ್ರ ಹೋಗುವಷ್ಟು ಜಾಗವಿದೆ. ಈ ರಸ್ತೆಯಲ್ಲಿ ಮಳೆ ಮುಂದುವರಿದು ಬಿರುಸಿನಿಂದ ಬಂದರೆ ಇನ್ನಷ್ಟು ಕುಸಿತಗಳುಂಟಾಗುವ ಸಂಭವವಿದೆ.
ಮನೆ ಕುಸಿತ: ನಗರದ ವಿಜಯಪುರ ಬಡಾವಣೆಯಲ್ಲಿ ಕುಸುಮಾ ಅವರ ಮನೆಯ ಗೋಡೆ ಮಳೆಯಿಂದಾಗಿ ಬಿದ್ದಿದ್ದು, ಸಾವಿರಾರು ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಅರವಿಂದ ನಗರದಲ್ಲೂ ಮನೆಯೊಂದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ತಾಯಿ ಮತ್ತು ಮಗುವಿಗೆ ಯಾವುದೇ ತೊಂದರೆಯಾಗಿಲ್ಲ.
ಮೂಡಿಗೆರೆ ತಾಲೂಕಿನಲ್ಲಿ ಗುರುವಾರವೂ ಮಳೆಯ ಆರ್ಭಟ ಮುಂದುವರೆದಿತ್ತು. ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ನದಿಯಲ್ಲಿ ಮುಳುಗಿಹೋಗಿತ್ತು. ಸೇತುವೆಯ ಮೇಲೆ ಸುಮಾರು 4 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ.
ಶೃಂಗೇರಿ ತಾಲೂಕಿನಾದ್ಯಂತ ಮಳೆಯೊಂದಿಗೆ ಭಾರೀ ಗಾಳಿಯೂ ಬೀಸುತ್ತಿದೆ. ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಶೃಂಗೇರಿ ಶಂಕರ ಮಠದ ಗುರುಭವನ ಹಾಗೂ ಗಾಂಧಿ ಭವನಕ್ಕೆ ನದಿಯ ನೀರು ನುಗ್ಗಿದೆ. ಮಠದ ಪ್ರಸಾದ ನಿಲಯಕ್ಕೂ ನೀರು ನುಗ್ಗಿದೆ. ನರಸಿಂಹ ವನಕ್ಕೆ ತೆರಳುವ ಮಾರ್ಗ ನೀರಿನಲ್ಲಿ ಮುಳುಗಿದೆ. ಮಳೆ- ಗಾಳಿಯಿಂದಾಗಿ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗಿದೆ.
ನರಸಿಂಹರಾಜಪುರ ತಾಲೂಕಿನಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು, ತಾಲೂಕಿನ ಕಡಹೀನಬೈಲು ಗ್ರಾಮದಲ್ಲಿ ಮನೆಯ ಮೇಲೆ ಬೃಹತ್ ಗಾತ್ರದ ಸಾಗವಾನಿ ಮರ ಬಿದ್ದ ಹಿನ್ನೆಲೆಯಲ್ಲಿ ಚಂದನ, ರಘು, ಮೀನಾ, ರೂಪಾ ಎಂಬುವವರಿಗೆ ಗಾಯವಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುತ್ತಿನಕೊಪ್ಪ- ಶಂಕರಪುರ-ಮುಡುಬ ರಸ್ತೆಯಲ್ಲಿದ್ದ ಸೇತುವೆ ಬುಧವಾರದಿಂದಲೂ ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿದೆ. ಮಧುಕರ್ ಶೆಟ್ಟಿ ಅವರ ಅಡಕೆ ತೋಟಕ್ಕೆ ನದಿ ನೀರು ನುಗ್ಗಿದ್ದು, ತೋಟ ಸಂಪೂರ್ಣ ಜಲಾವೃತವಾಗಿದೆ.
ತರೀಕೆರೆ ತಾಲೂಕಿನಲ್ಲೂ ಭಾರೀ ಮಳೆಯಾಗುತ್ತಿದೆ. ಕೆಮ್ಮಣ್ಣುಗುಂಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಹತ್ತಗಿರಿ ಜಲಪಾತದಲ್ಲಿ ನೀರಿನ ಪ್ರಮಾಣ ತೀವ್ರವಾಗಿದ್ದು, ವೀರಭದ್ರೇಶ್ವರ ಸ್ವಾಮಿ ದೇಗುಲಕ್ಕೆ ಜಲ ದಿಗ್ಬಂದನ ಹಾಕಿದಂತಾಗಿದೆ. ಕಲ್ಹತ್ತಗಿರಿ ಜಲಪಾತದಲ್ಲಿ ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಲಪಾತದತ್ತ ಪ್ರವಾಸಿಗರು ತೆರಳದಂತೆ ತಡೆಯಲಾಗುತ್ತಿದೆ. ತರೀಕೆರೆ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಮನೆಗಳು ಬಿದ್ದು ಹಾನಿಯಾಗಿರುವ ವರದಿಯಾಗಿದೆ.
ಕೊಪ್ಪ ತಾಲೂಕಿನಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಕಡೂರು ತಾಲೂಕಿನಲ್ಲೂ ನಿರಂತರ ಮಳೆಯಾಗುತ್ತಿದೆ.