Advertisement
ನರಸಿಂಹರಾಜಪುರ ತಾಲೂಕಿನ ಮಾಳೂರುದಿಣ್ಣೆ ಎಂಬಲ್ಲಿ ಗಾಳಿಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಕುಮಾರ್ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದ ಶ್ರೀವತ್ಸ ಎಂಬ ಯುವಕ ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ.
Related Articles
Advertisement
ಮಂಗಳವಾರ ತಡರಾತ್ರಿ ಚಾರ್ಮಾಡಿ ಘಾಟಿಯಲ್ಲಿ ಹಲವೆಡೆ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ರಸ್ತೆಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಆರಂಭಗೊಂಡಿತಾದರೂ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ ಸಂಚಾರ ನಿಷೇಧಿಸಲಾಗಿದೆ.
ಮಳೆಯಿಂದ ನರಸಿಂಹರಾಜಪುರ ತಾಲೂಕಿನಲ್ಲೂ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಭದ್ರಾ ನದಿ ಉಕ್ಕಿ ಹರಿದು ಅಕ್ಕಪಕ್ಕದ ತೋಟಗಳೆಲ್ಲ ಜಲಾವೃತಗೊಂಡು ಲಕ್ಷಾಂತರ ರೂ. ನಷ್ಟವುಂಟಾಗಿದೆ. ಇಟ್ಟಿನಹಳ್ಳಿ ಹಾಗೂ ಕುಳಗೂರು ಗ್ರಾಮಗಳಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿದ್ದ ಕಿರು ಸೇತುವೆ ಮುಳುಗಡೆಯಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಸರೀಕಟ್ಟೆ-ಹೇರೂರು ರಸ್ತೆಯಲ್ಲಿ ಮರಬಿದ್ದು ಸಂಚಾರ ಸ್ಥಗಿತವಾಗಿದೆ.
ತರೀಕೆರೆ ತಾಲೂಕಿನಲ್ಲಿ ಗಾಳಿ- ಮಳೆಯಿಂದ ಬರಗೇನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪಟ್ಟಣದ ತಾಲೂಕು ಕಚೇರಿ ಹಿಂಭಾಗ ಮರವೊಂದು ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಈ ವೇಳೆ ಕಾರಿನೊಳಗೆ ಯಾರೂ ಇರಲಿಲ್ಲ.
ಶೃಂಗೇರಿಯಲ್ಲಿ ಮಳೆ-ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಬುಧವಾರವೂ ನದಿಯ ನೀರಿನ ಮಟ್ಟ ಸತತ ಏರುತ್ತಿದೆ.
ಶೃಂಗೇರಿ ಶಾರದಾ ಪೀಠದ ಕಪ್ಪೆಶಂಕರ ದೇಗುಲ, ಸಂದ್ಯಾವಂದನ ಮಂಟಪ ನೀರಿನಲ್ಲಿ ಮುಳುಗಿದ್ದರೆ ಶ್ರೀ ಮಠದಿಂದ ನರಸಿಂಹವನಕ್ಕೆ ತೆರಳುವ ಮಾರ್ಗದಲ್ಲಿ ಪ್ರವಾಹದಿಂದ ನೀರು ತುಂಬಿದೆ. ಪಟ್ಟಣದ ವಾಹನ ನಿಲುಗಡೆ ಜಾಗವಾದ ಗಾಂಧಿ ಮೈದಾನ ಜಲಾವೃತವಾಗಿದ್ದು, ಬೈಪಾಸ್ ರಸ್ತೆಯಲ್ಲಿ ಪ್ರವಾಹದ ನೀರು ನಿಂತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಕೆವಿಆರ್ ರಸ್ತೆಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿದೆ. ಗ್ರಾಮೀಣ ಪ್ರದೇಶದ ಕಿಕ್ರೆ, ಮರಟೆ ಸೇರಿದಂತೆ ಅನೇಕ ಹಳ್ಳಗಳು ಉಕ್ಕಿ ಹರಿಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಕಲ್ಕಟ್ಟೆಯಲ್ಲಿ ಮರ ಮುರಿದು ಮನೆ ಮೇಲೆ ಬಿದ್ದಿದ್ದರಿಂದ ದುರ್ಗಾ ಎಂಬುವವರು ಗಾಯಗೊಂಡಿದ್ದಾರೆ. ಕುಡಿಯುವ ನೀರು ಪೂರೈಸುವ ನೀರು ಸರಬರಾಜು ಘಟಕಕ್ಕೆ ಪ್ರವಾಹದ ನೀರು ನುಗ್ಗಿದ್ದರಿಂದ ಎರಡು ದಿನ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಗಿರಿ ಶ್ರೇಣಿಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊನ್ನಮ್ಮನ ಹಳ್ಳಕ್ಕೆ ನೀರಿನ ಹರಿವು ಹೆಚ್ಚಾಗಿದೆ. ಜಲಪಾತದಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿತ್ತು. ಕಳೆದ ಹಲವು ವರ್ಷಗಳ ನಂತರ ಹೊನ್ನಮ್ಮನ ಹಳ್ಳಕ್ಕೆ ಈ ಪ್ರಮಾಣದ ನೀರು ಬಂದಿದೆ.
ಖಾಂಡ್ಯ ದೇವಾಲಯದ ರಾಮಮೂರ್ತಿ ಭಟ್ ಅವರ ಮನೆಯ ಮೇಲೆ ಬೃಹತ್ ಮರವೊಂದು ಬಿದ್ದಿದ್ದು ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದಲ್ಲದೆ ತಾಲೂಕಿನ ಕೆಲವೆಡೆ ಮನೆ, ಕೊಟ್ಟಿಗೆಗಳು ಕುಸಿದಿವೆ.
ಸಂಚಾರ ಸ್ಥಗಿತ: ಬಾಳೆಹೊನ್ನೂರಿನಲ್ಲಿ ಆಶ್ಲೇಷ ಮಳೆ ಅಬ್ಬರಕ್ಕೆ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಬಾಳೆಹೊನ್ನೂರು, ಮಾಗುಂಡಿ, ಹೊರನಾಡು, ಕಳಸ, ಬಾಳೆಹೊಳೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಹೊಳೆಬಾಗಿಲು, ತೆಪ್ಪದಗಂಡಿ ಹಾಗೂ ಮಹಲ್ಗೋಡಿನಲ್ಲಿ ರಸ್ತೆ ಮೇಲೆ ನೀರು ನಿಂತಿದ್ದರಿಂದ ಸಂಚಾರ ಬಂದ್ ಆಗಿತ್ತು.