ಚಿಕ್ಕಮಗಳೂರು: ನಿಸರ್ಗ ಚಂಡಮಾರುತ ರಾಜ್ಯದ ಕರಾವಳಿ ಭಾಗಕ್ಕೆ ಅಪ್ಪಳಿಸಿದ್ದು ಕಾಫಿ ನಾಡಿನಲ್ಲಿ ಗುರುವಾರವೂ ಮೋಡ ಕವಿದ ವಾತಾವರಣ ಮುಂದುವರಿದಿದೆ. ಜಿಲ್ಲಾದ್ಯಂತ ಕಳೆದೆರೆಡು ದಿನಗಳಿಂದ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಸೋನೆ ಮಳೆಯಾಗಿದೆ. ಬುಧವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಗಾಳಿ ಬೀಸಿದ್ದರಿಂದ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನಡೆದಿತ್ತು.
ಗುರುವಾರ ಗಾಳಿ ಮತ್ತು ಮಳೆಯ ತೀವ್ರತೆ ಕಡಿಮೆಯಾಗಿದ್ದು ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆಯ ಕೆಲ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕು ಸುತ್ತಮುತ್ತ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ವೇಳೆಗೆ ಸಾಧಾರಣ ಮಳೆಯಾಗಿದೆ. ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ, ಬಣಕಲ್, ಬಾಳೂರು, ಕಳಸ, ಕುದುರೆಮುಖ, ಚಾರ್ಮಾಡಿ ಘಾಟಿ ಸುತ್ತಮುತ್ತ ಮಳೆಯಾಗಿದೆ.
ಕೊಪ್ಪ, ಶೃಂಗೇರಿ, ಎನ್.ಆರ್. ಪುರ, ಬಾಳೆಹೊನ್ನೂರು ಸುತ್ತಮುತ್ತ ಸೋನೆ ಮಳೆಯಾಗಿದೆ. ಬುಧವಾರ ಮೂಡಿಗೆರೆ ತಾಲೂಕು ಚಾರ್ಮಾಡಿಘಾಟಿ ಭಾಗದಲ್ಲಿ ಎಡಬಿಡದೆ ಸುರಿದ ಮಳೆಯಿಂದ ಕೋಳಿಮೊಟ್ಟೆ ತುಂಬಿದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು ಸಾವಿರಾರು ಕೋಳಿ ಮೊಟ್ಟೆ ನಾಶವಾಗಿರುವ ಘಟನೆ ನಡೆದಿದೆ.
ಚಾರ್ಮಾಡಿ ಘಾಟಿ ಮೂರನೇ ತಿರುವಿನಲ್ಲಿ ಎಡಬಿಡದೆ ಸುರಿಯುತ್ತಿದ್ದ ಮಳೆಯಿಂದ ವಾಹನ ಚಾಲಕನಿಗೆ ರಸ್ತೆ ಕಾಣದ ಈ ಅವಘಡ ನಡೆದಿದೆ. ಮತ್ತೂಂದು ವಾಹನದ ಸಹಾಯ ಪಡೆದು ಪಲ್ಟಿಯಾಗಿದ್ದ ವಾಹನವನ್ನು ಮೇಲೆತ್ತಲಾಗಿದ್ದು ಸಾವಿರಾರು ಕೋಳಿ ಮೊಟ್ಟೆ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. ನಿಸರ್ಗ ಚಂಡಮಾರುತದಿಂದ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದ ಗಾಳಿ, ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಚಂಡಮಾರುತದ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ.