Advertisement

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

06:39 PM Nov 12, 2024 | Team Udayavani |

ಚಿಕ್ಕಮಗಳೂರು: ನಕ್ಸಲ್ ಸಹಾನುಭೂತಿಯುಳ್ಳ ಇಬ್ಬರನ್ನು ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿರುವ ಬೆನ್ನಲ್ಲೆ, ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

Advertisement

ಕೊಪ್ಪ ತಾಲೂಕು ಕಡೆಗುಂಡಿ ಗ್ರಾಮದವರೊಬ್ಬರ ಮನೆಯೊಂದರಲ್ಲಿ ಮೂರು ಬಂದೂಕು ಪತ್ತೆಯಾಗಿದ್ದು, ಈ ಮನೆಗೆ ನಕ್ಸಲರ ತಂಡ ಭೇಟಿ ನೀಡಿದ್ದಾರೆಂಬ ಸುಳಿವು ಸಿಕ್ಕಿದೆ ಎಂಬ ಸುದ್ದಿ ಹೊರಬಿದ್ದಿದೆ. ಬಂದೂಕು ಸಿಕ್ಕಿರುವ ಹಿನ್ನೆಲೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್, ಸಿಂಗ್ ಸಿಐಡಿ ಎಡಿಜಿಪಿ ಪ್ರಣಬ್ ಮೊಹಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ನಕ್ಸಲ್ ತಂಡದವರು ಕೊಪ್ಪ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ನಕ್ಸಲ್ ಸಹಾನುಭೂತಿಯುಳ್ಳ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚೆಕ್‌ಪೋಸ್ಟ್ ಗಳಲ್ಲಿ ನಾಕಾಬಂಧಿ ಹಾಕಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

ಶೃಂಗೇರಿ ಮತ್ತು ಕೊಪ್ಪ ತಾಲೂಕಿನಲ್ಲಿ ನಕ್ಸಲರು ಓಡಾಡಿರುವ ಮಾಹಿತಿ ಆಧರಿಸಿ ಎರಡೂ ತಾಲೂಕಿನ ಹಲವೆಡೆ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ನೇತೃತ್ವದಲ್ಲಿ ಕೂಂಬಿಂಗ್ ನಡೆಯುತ್ತಿದ್ದು, ಪಶ್ಚಿಮ ವಲಯ ಐಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಶೃಂಗೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಎಎನ್‌ಎಫ್ ಕ್ಯಾಂಪ್‌ನಲ್ಲಿದ್ದ ಸಿಬ್ಬಂದಿಗಳು ಏಕಕಾಲದಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ. ಹಲವೆಡೆಗಳಲ್ಲಿ ಚೆಕ್‌ಪೋಸ್ಟ್ ಅಳವಡಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಎಎನ್‌ಎಫ್ ತಂಡ ಈಗ ಹಲವು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎನ್ನಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದ್ದು ಮಲೆನಾಡಿನಲ್ಲಿ ನಕ್ಸಲ್ ಆತಂಕ ಮತ್ತೆ ಮನೆಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next