Advertisement

ಜಿಎಸ್‌ಟಿ ಪದ್ಧತಿ ಅನುಸರಣಿಯಿಂದ ನಿಚ್ಚಳಗೊಳ್ಳಲಿ

05:24 PM Jun 10, 2019 | Team Udayavani |

ಚಿಕ್ಕಮಗಳೂರು: ಜಿಎಸ್‌ಟಿ ಪದ್ಧತಿ ಅನುಸರಣಿಯಿಂದ ನಿಚ್ಚಳಗೊಳ್ಳಬೇಕಿದೆ ಎಂದು ತೆರಿಗೆತಜ್ಞ ಬೆಂಗಳೂರಿನ ಲೆಕ್ಕಪರಿಶೋಧಕ ಗೆಲ್ಲಾ ಪ್ರವೀಣಕುಮಾರ್‌ ಅಭಿಪ್ರಾಯಿಸಿದರು.

Advertisement

ಜಿಲ್ಲಾ ತೆರಿಗೆ ಸಲಹೆಗಾರರ ಸಂಸ್ಥೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸರ್ಕಾರಗಳಿಗೆ ಪ್ರಮುಖ ಆದಾಯ ತೆರಿಗೆ ಪಾವತಿ ಆಗಿರುತ್ತದೆ. ಹಿಂದಿನಿಂದಲೂ ತೆರಿಗೆ ಪಾವತಿಸಲು ಅನೇಕ ಪದ್ಧತಿಗಳನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ವಾಣಿಜ್ಯ ತೆರಿಗೆಪದ್ಧತಿ ಬಹಳವರ್ಷ ಜಾರಿಯಲ್ಲಿದ್ದು ನಂತರ ಮೌಲ್ಯವರ್ಧಿತ ತೆರಿಗೆ ಪದ್ಧತಿ ಕೆಲವರ್ಷಗಳು ಜಾರಿಯಲ್ಲಿತ್ತು. 2017ರ ಜುಲೈನಿಂದ ಏಕರೂಪ ತೆರಿಗೆ ಪದ್ಧತಿ ಜಿಎಸ್‌ಟಿ ಜಾರಿಯಲ್ಲಿದೆ ಎಂದರು.

ನೊಂದಾಯಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳು ತೆರಿಗೆ ಪಾವತಿಸಲು ನೂತನ ಪದ್ಧತಿಯಲ್ಲಿ ಅನೇಕ ಗೊಂದಲ, ಅನುಮಾನ, ಸಮಸ್ಯೆಗಳು ಸಹಜವಾಗಿ ಗೋಜಲು ಮಾಡಿದೆ. ಕಾಲಕಾಲಕ್ಕೆ ಸರ್ಕಾರ ತೆರಿಗೆ ಇಲಾಖೆಯ ಮೂಲಕ ನಿರ್ದೇಶನಗಳನ್ನು ನೀಡುತ್ತ ಗೊಂದಲಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದರು.

2017-18ನೇ ಸಾಲಿನ ಜಿಎಸ್‌ಟಿ ವಾರ್ಷಿಕ ವರದಿಯನ್ನು ಜೂನ್‌ ಅಂತ್ಯದೊಳಗೆ ಸಲ್ಲಿಸುವುದು ಕಡ್ಡಾಯವಾಗಿದೆ. ವಿಶೇಷವಾಗಿ ನಮೂನೆ-9, 9ಎ ಮತ್ತು 9ಸಿ ಭರ್ತಿ ಮಾಡುವ ಬಗ್ಗೆ ಅನೇಕ ಅನುಮಾನಗಳು ತೆರಿಗೆ ಸಲಹೆಗಾರರನ್ನು ಕಾಡುತ್ತಿದೆ. ಐದಾರು ಅಂಶಗಳ ವಿವರಣೆಯನ್ನು ಕೆಲದಿನಗಳ ಹಿಂದಷ್ಟೇ ಇಲಾಖೆ ನೀಡಿದೆ. ಯಾವುದೇ ವ್ಯವಸ್ಥೆ ಆರಂಭದ ದಿನಗಳಲ್ಲಿ ಸ್ವಲ್ಪಮಟ್ಟಿನ ವಿವಾದಗಳಿಂದ ಕೂಡಿರುವುದು ಸಹಜ. ಅನುಸರಣಿಯಿಂದ ಕಾಲಕ್ರಮೇಣ ಅವುಗಳಿಗೆಲ್ಲ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

Advertisement

ಈ ಹಿಂದಿನ ಮೌಲ್ಯವರ್ಧಿತ ತೆರಿಗೆಪದ್ಧತಿ ಅತ್ಯಂತ ಸರಳವಾಗಿದ್ದು, ಸುಲಭವಾಗಿ ತೆರಿಗೆ ಪಾವತಿಸಲು ಅನುಕೂಲಕರವಾಗಿತ್ತು. ಪ್ರಸ್ತುತ ಜಾರಿಯಲ್ಲಿರುವ ಏಕರೂಪ ತೆರಿಗೆ ಪದ್ಧತಿ ಜಿಎಸ್‌ಟಿ ಅನೇಕ ಗೊಂದಲಗಳಿಂದ ಕ್ಲಿಷ್ಟವಾಗಿದೆ ಎಂಬ ಅಭಿಪ್ರಾಯವಿದೆ. ತೆರಿಗೆ ಇಲಾಖೆ ಹಾಗೂ ಸಾಫ್ಟ್‌ವೇರ್‌ ತಜ್ಞರ ನಡುವೆ ಹೊಂದಾಣಿಕೆಯ ಕೊರತೆ ಇರುವಂತಿದೆ. ಜಿಎಸ್‌ಟಿ ಜಾರಿಗೆಮುನ್ನ ಇನ್ನಷ್ಟು ಸಿದ್ಧತೆಗಳು ಅಗತ್ಯವಿತ್ತು. ತಾಂತ್ರಿಕ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಇದೆ. ಅನೇಕ ಸಂದರ್ಭಗಳಲ್ಲಿ ತೆರಿಗೆ ಪಾವತಿಗೆ ಸಾಫ್ಟ್‌ವೇರ್‌ ಸಹಕರಿಸುತ್ತಿಲ್ಲ. ಕಂಪ್ಯೂಟರ್‌ ಹ್ಯಾಕ್‌ಆಗಿ ತೊಂದರೆಯಾಗುತ್ತಿದೆ ಎಂದರು.

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಪಾಲಿನ ಬಗ್ಗೆಯೂ ಸಣ್ಣಪುಟ್ಟ ವಿವಾದಗಳಿವೆ. ಒಟ್ಟಾರೆ ಸಮನ್ವಯತೆಯ ಕೊರತೆ ಸ್ಪಷ್ಟವಾಗಿದೆ. ಕಾಲಕ್ರಮೇಣ ಇವೆಲ್ಲವೂ ಸಮರ್ಪಕವಾಗಲು ಕೆಲವು ವರ್ಷಗಳೆ ಬೇಕಾಗಬಹುದು ಹೇಳಿದರು.

ಜಿಲ್ಲಾತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಂ.ಅಬ್ದುಲ್ಸತ್ತಾರ್‌ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿ, ತೆರಿಗೆ ಪದ್ಧತಿಯಲ್ಲಿ ನಡೆಯುತ್ತಿರುವ ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಹೊಸ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ಸಂಘ ಹಿರಿಯ ತಜ್ಞ ಸಲಹೆಗಾರರನ್ನು ಆಹ್ವಾನಿಸಿ ಇಂತಹ ಹಲವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ವೃತ್ತಿನಿರತ ಸದಸ್ಯರಿಗೆ ನೆರವು ನೀಡುತ್ತಿದೆ ಎಂದರು. ಸಂಘದ ಉಪಾಧ್ಯಕ್ಷ ಕೆ.ಡಿ. ಪುಟ್ಟಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಂ. ಕಿರಣ್‌ಸೋಮಯ್ಯ ವಂದಿಸಿದರು. ಉಪಾಧ್ಯಕ್ಷ ರಮಾನಂದಪೈ ಮತ್ತು ಖಜಾಂಚಿ ಶ್ಯಾಮಲಾರಾವ್‌ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ತೆರಿಗೆ ಸಲಹೆಗಾರರು ಮತ್ತು ಲೆಕ್ಕಪರಿಶೋಧಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next