Advertisement

ಪ್ರವಾಹ ಪರಿಹಾರಕ್ಕೆ ಮೊದಲ ಆದ್ಯತೆ

04:34 PM Jan 29, 2020 | Naveen |

ಚಿಕ್ಕಮಗಳೂರು: ರಾಜ್ಯದಲ್ಲಿ ಸಂಭವಿಸಿದ ತೀವ್ರ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು, ಅತಿವೃಷ್ಟಿ ಪರಿಹಾರಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಹಾಗಾಗಿ, ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ಹೆಚ್ಚಿನ ಅನುದಾನ ನೀಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು.

Advertisement

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ತಾಲೂಕಿನಲ್ಲಿ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿವೃಷ್ಟಿಯ ನಡುವೆಯೂ ಚಿಕ್ಕಮಗಳೂರು ತಾಲೂಕಿನ ರಸ್ತೆ ಅಭಿವೃದ್ಧಿಗೆ, ಪ್ರವಾಸಿ ಮಂದಿರ ನವೀಕರಣಕ್ಕೆ, ಸರ್ಕಾರಿ ಕಾಲೇಜು ಕಟ್ಟಡ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಕಾಲೋನಿಗಳ ಅಭಿವೃದ್ಧಿ ಕಾಮಗಾರಿಗಳಿಗೆ 918 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು. ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 2019-20 ನೇ ಸಾಲಿನಲ್ಲಿ ಶೇ. 96ರಷ್ಟು ಉತ್ತಮ ಫಲಿತಾಂಶ ಬಂದಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿ ವಸತಿ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 824 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 1.60 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದು, ವಸತಿ ಶಾಲೆಗಳ ಮೂಲಕ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರ ಸಚಿವ ಸಿ.ಟಿ.ರವಿ ಮಾತನಾಡಿ, ಜಿಲ್ಲೆ ಭೌಗೋಳಿಕವಾಗಿ ವಿಸ್ತಾರವಾಗಿದೆ. ಸುಮಾರು 2168 ಕಿ.ಮೀ. ರಸ್ತೆ ಹೊಂದಿದೆ. ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಮಲೆನಾಡು ಹಾಗೂ ತರೀಕೆರೆ ಭಾಗದಲ್ಲಿ 412 ಕಿ.ಮೀ. ರಸ್ತೆ ಹಾಗೂ ಅನೇಕ ಸೇತುವೆಗಳು ನಾಶವಾಗಿವೆ. ಸದ್ಯ ಸರ್ಕಾರ ನೀಡಿರುವ ಅನುದಾನ ಕಡಿಮೆ ಇದ್ದು, ಇನ್ನಷ್ಟು ಅನುದಾನ ನೀಡುವಂತೆ ಮನವಿ ಮಾಡಿದರು.

Advertisement

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಬಳಿಕ ಮೂಡಿಗೆರೆ ತಾಲೂಕಿಗೆ 111 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಜಿಲ್ಲಾ ಪಂಚಾಯತ್‌ ಮೂಲಕ 30 ಕೋಟಿ ರೂ. ನೀಡಲಾಗಿದೆ. ಆಗಸ್ಟ್‌-ಸೆಪ್ಪೆಂಬರ್‌ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಹಾನಿಯಾಗಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹೆಚ್ಚಿನ ಅನುದಾನವನ್ನು ಶೀಘ್ರವೇ ಬಿಡುಗಡೆಗೊಳಿಸುವ ಭರವಸೆ ಇದೆ ಎಂದರು.

ತಾಲೂಕಿನಲ್ಲಿ ಒತ್ತುವರಿ ಸಮಸ್ಯೆ ತೀವ್ರತರವಾಗಿದ್ದು, ಬಡ ಕುಟುಂಬಗಳನ್ನು ತೆರವುಗೊಳಿಸಲಾಗುತ್ತಿದೆ. ಡೀಮ್ಡ್ ಅರಣ್ಯ ಸಮಸ್ಯೆಯಿಂದ ಬಡ ಕುಟುಂಬಗಳಿಗೆ ನಿವೇಶನ ನೀಡದೆ ತೊಂದರೆಯಾಗಿದೆ. ಸರ್ಕಾರ ಒತ್ತುವರಿ ಮತ್ತು ಡೀಮ್ಡ್ ಫಾರೆಸ್ಟ್‌ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವಂತೆ ಒತ್ತಾಯಿಸಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ರೇವಣ್ಣ ಅವರು ಚಿಕ್ಕಮಗಳೂರು ತಾಲೂಕು ರಸ್ತೆ ಅಭಿವೃದ್ಧಿಗೆ ಮತ್ತು ಪ್ರವಾಸಿ ಮಂದಿರ ನವೀಕರಣಕ್ಕೆ 21 ಕೋಟಿ. ರೂ. ಅನುದಾನ ನೀಡಿದ್ದಾರೆ. ಅದರೊಂದಿಗೆ ಶೃಂಗೇರಿ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ನೀಡಿದ್ದು, ಇದರೊಂದಿಗೆ ಬಿಜೆಪಿ ಸರ್ಕಾರ ಇನ್ನಷ್ಟು ಅನುದಾನ ನೀಡಿ ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಸರ್ಕಾರ ಅನುದಾನ ನೀಡಿದೆ. ಆದರೆ ಅಧಿಕಾರಿಗಳು ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು. ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ಅನುದಾನ, ಗುತ್ತಿಗೆದಾರರ ಹೆಸರು ಕಾಮಗಾರಿ ಸ್ಥಳದಲ್ಲಿ ಪ್ರಕಟಿಸಬೇಕು. ಕಳಪೆ ಕಾಮಗಾರಿ ಮಾಡಿದಲ್ಲಿ ನಾನು ಸುಮ್ಮನಿರಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಮಾರಂಭದಲ್ಲಿ ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಲೂಕು ಪಂಚಾಯತ್‌ ಅಧ್ಯಕ್ಷ ಜಯಣ್ಣ, ಜಿಲ್ಲಾ ಪಂಚಾಯತ್‌ ಸದಸ್ಯರಾದ ವಿಜಯ್‌ ಕುಮಾರ್‌, ಕವಿತಾ ಲಿಂಗರಾಜು, ಅಮಿತಾ ಮುತ್ತಪ್ಪ, ಜಸಿಂತಾ, ದಕ್ಷಿಣ ವಲಯದ ಐಜಿಪಿ ಅರುಣ್‌ ಚಕ್ರವರ್ತಿ, ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next