ಚಿಕ್ಕಮಗಳೂರು: ಪ್ರತಿಭೆ ಅಧ್ಯಯನಮುಖೀ- ಸಮಾಜ ಮುಖೀಯಾಗಬೇಕೆ ಹೊರತು ಸ್ವಾರ್ಥ ಮುಖೀಯಾಗಬಾರದು. ಸಮಾಜ-ಸಂಸ್ಕೃತಿ-ದೇಶದ ಏಳಿಗೆಗಾಗಿ ಪ್ರತಿಭೆ ಬಳಕೆಯಾದರೆ ಮೆರಗು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಿಸಿದರು. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವಾರ್ಷಿಕ ಮಹಾಸಭೆಯ ಅಂಗವಾಗಿ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಪ್ರಾಚಾರ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಭೆ ಪ್ರದರ್ಶನಕ್ಕಲ್ಲದೆ ನಿದರ್ಶನವಾದರೆ ಸೊಗಸು. ಪ್ರತಿಯೊಬ್ಬರಲ್ಲೂ ಪ್ರತಿಭೆಯೊಂದಿರಬೇಕು. ಅಭ್ಯಾಸ-ಗುರು-ಸೇವೆ ಇರಬೇಕು ಎಂಬ ಕವಿವಾಣಿಗೆ ಸ್ವಲ್ಪ ಜಾಹೀರಾತೂ ಬೇಕು ಎಂಬುದನ್ನು ಸೇರಿಸಿಕೊಳ್ಳಬೇಕು. ಜಾಹೀರಾತಿಲ್ಲದ ಬದುಕು ಕತ್ತಲೆಯಲ್ಲಿ ಹುಡುಗಿಗೆ ಕಣ್ಣು ಹೊಡೆದಂತಾಗುವುದೆಂದು ತಿಳಿಸಿದರು.
ಬಾಗುವುದರಲ್ಲಿ ಇರುವಷ್ಟು ಸಾಮರ್ಥ್ಯ ಬೀಗುವುದರಲ್ಲಿಲ್ಲ. ತೆನೆಬಿಟ್ಟ ಭತ್ತ-ಗೊನೆ ಬಿಟ್ಟ ಬಾಳೆ-ಫಲಬಿಟ್ಟ ಮಾವು ಬಾಗುತ್ತದೆ. ಏನೂ ಇಲ್ಲದ ನಾವು ಬೀಗಬಾರದೆಂಬುದು ಪ್ರಕೃತಿಯ ಸಂದೇಶ. ಅಹಂಕಾರ ಕಡಿಮೆ ಮಾಡಿಕೊಳ್ಳಬೇಕು. ಪ್ರತಿಭೆ ವಿದ್ಯಾರ್ಥಿಗಳ ಸ್ಥಾನ-ಆಸ್ಥಾನಕ್ಕಾಗಿ ಸೀಮಿತವಾಗಬಾರದು. ಸಮಾಜದ ಅಭ್ಯುದಯಕ್ಕೆ ನಮ್ಮ ಪ್ರತಿಭೆ ಬಳಕೆಯಾಗುವಂತಾದರೆ ಅದರಲ್ಲಿ ಸಾರ್ಥಕತೆ ಇರುತ್ತದೆ. ಬೆಂಕಿ ಆರಿಸಬೇಕು, ದೀಪವನ್ನಲ್ಲ. ದೀಪ ಹಚ್ಚಬೇಕು ಬೆಂಕಿ ಹಚ್ಚಬಾರದು. ಜೀವನದ ಅಧ್ಯಯನ-ಅನುಭವಗಳು ಪ್ರತಿಭೆಗೆ ಪೂರಕ. ಸ್ವಯಂ ಅಭಿಜಾತ ಪ್ರತಿಭೆಗಳಿಗೆ ತರಬೇತಿ ಕಾಂತಿ ನೀಡುತ್ತದೆ ಎಂದರು.
ವಿದ್ಯೆಯಿಂದ ವಿನಯವಂತಿಕೆ ಕಲಿಯದಿದ್ದರೆ ಪ್ರಯೋಜವಿಲ್ಲ. ಸೌಜನ್ಯವನ್ನು ಸಂಸ್ಕಾರಯುತವಾಗಿ ಪಡೆಯಬೇಕು. ಸುಂದರವಾಗಿ ಬದುಕುವುದೇ ಮಕ್ಕಳು ತಂದೆ-ತಾಯಿ ಹಾಗೂ ಗುರುಗಳಿಗೆ ನೀಡಬಹುದಾದ ಬಹುದೊಡ್ಡ ಕಾಣಿಕೆ. ಹಾಸಿಗೆ ಇದ್ದಷ್ಟು ಕಾಲುಚಾಚು ಎಂದರೆ ಟೇಬಲ್ ಇದ್ದಷ್ಟು ಕೈ ಚಾಚುತ್ತೇನೆ ಎನ್ನಬಾರದು. ದೇಶ ಮತ್ತು ಸಂಸ್ಕೃತಿಯ ಚಿಂತನೆ ಜೀವನಪರ್ಯಂತ ನೆನಪಿನಲ್ಲಿರಬೇಕು ಎಂದು ತಿಳಿಹೇಳಿದರು.
ನಿವೃತ್ತಿ ಅಂಚಿನಲ್ಲಿರುವ ಡಿಡಿಪಿಯು ಡಿ.ಎಸ್.ದೇವರಾಜು, ವರ್ಗಾವಣೆಗೊಂಡ ಎಫ್‌ಡಿಎ ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ, ಉಪನ್ಯಾಸಕ ದೇವೇಂದ್ರ, ಜಿಲ್ಲಾ ನಿವೃತ್ತ ಪ್ರಾಚಾರ್ಯರಾದ ಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ವಿ.ದಯಾನಂದ, ಬೇಗಾರಿನ ಸರ್ವಮಂಗಳಾ, ಬೀರೂರಿನ ಯಶೋಧಮ್ಮ, ಕಡೂರಿನ ಲಲಿತಮ್ಮ, ದೇವನೂರಿನ ಪರಮೇಶ್ವರಪ್ಪ, ಬುಕ್ಕಾಂಬುದಿಯ ಎಚ್.ನಾಗರಾಜಪ್ಪ ಮತ್ತು ಬಣಕಲ್ ಪ.ಪೂ.ಕಾಲೇಜಿನ ಜಮ್‌ಶೀದ್ ಅಹಮ್ಮದ್ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಡಿಡಿಪಿಯು ಡಿ.ಎಸ್.ದೇವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, 19ತಿಂಗಳಿನಿಂದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಎಲ್ಲ ಪ್ರಾಂಶುಪಾಲರು ಅತ್ಯುತ್ತಮವಾಗಿ ಸಹಕರಿಸಿದ್ದಾರೆ. ಜಿಲ್ಲೆಯಲ್ಲಿ ಅತ್ಯುತ್ತಮ ಸಂಪನ್ಮೂಲ ಶಿಕ್ಷಕರಿದ್ದಾರೆ. ವಿಶೇಷವಾಗಿ ಫಲಿತಾಂಶದತ್ತ ಗಮನಕೊಡುವುದು ಡಿಡಿಪಿಯು ಸ್ಥಾನದ ದೊಡ್ಡಹೊಣೆ. ಎಲ್ಲರ ಸಹಕಾರದಿಂದ ಜಿಲ್ಲೆ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಬಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ಹೊಂದುವಂತಾಗಲಿ ಎಂದು ಆಶಿಸಿದರು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆ ಮತ್ತು ತಾಲೂಕಿಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ, ಪ್ರಶಸ್ತಿ ಪತ್ರದೊಂದಿಗೆ ಕಣ್ಣನ್ ಅಭಿನಂದಿಸಿದರು.
ಜಿಲ್ಲಾ ಪ.ಪೂ.ಕಾ.ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ.ವೈ.ಎ.ಸುರೇಶ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ಜಿ.ಸತೀಶ್ ಶಾಸ್ತ್ರಿ ಪ್ರತಿಭಾವಂತರನ್ನು, ಸಹಕಾರ್ಯದರ್ಶಿ ಸೋಮಶೇಖರ್ ಸನ್ಮಾನಿತರನ್ನು ಪರಿಚಯಿಸಿದರು. ಖಜಾಂಚಿ ಎಂ.ಬಿ.ಜಯಶ್ರೀ ವಂದಿಸಿ, ಕಳಸಾಪುರ ಸರ್ಕಾರಿ ಪ.ಪೂ.ಕಾಲೇಜು ಪ್ರಾಚಾರ್ಯ ಎಚ್.ಎಂ.ನಾಗರಾಜರಾವ್ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಜಯಪ್ಪ, ಸಹಕಾರ್ಯದರ್ಶಿ ವಿಜಯಣ್ಣ, ರಾಜ್ಯಸಂಘದ ಜಿಲ್ಲಾ ಪ್ರತಿನಿಧಿ ಟಿ.ಎಂ.ರುದ್ರಮುನಿ ವೇದಿಕೆಯಲ್ಲಿದ್ದರು.