ಚಿಕ್ಕಮಗಳೂರು: ಜಿಲ್ಲಾದ್ಯಂತ ಕಳೆದ 16 ದಿನಗಳಿಂದ ಅಬ್ಬರಿಸಿದ ಮಳೆ ಸ್ವಲ್ಪಮಟ್ಟಿಗೆ ಬಿಡುವು ನೀಡಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಕೊಂಚ ಇಳಿಕೆ ಕಂಡಿದೆ. ಆದರೂ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿವೆ. ಭಾನುವಾರ ಹಗಲಿನ ವೇಳೆ ಮಳೆ ಬಿಡುವು ನೀಡಿದ್ದರೂ ರಾತ್ರಿ ಭಾರೀ ಮಳೆಯಾಗಿದೆ.
ಮಳೆಯ ಅಬ್ಬರಕ್ಕೆ ಜಿಲ್ಲಾದ್ಯಂತ 31 ಮನೆಗಳಿಗೆ ಹಾನಿಯಾಗಿದೆ. 6 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 11 ಮನೆಗಳಿಗೆ ಶೇ. 25ರಿಂದ 75ರಷ್ಟು ಹಾನಿ ಸಂಭವಿಸಿದೆ. 14 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ. ಓರ್ವ ಮಹಿಳೆ ಮೃತಪಟ್ಟಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ.
ಮಳೆಯ ಅಬ್ಬರಕ್ಕೆ ಒಂದೇ ದಿನ 89.61 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. 142 ವಿದ್ಯುತ್ ಕಂಬ, 260 ಕಿ.ಮೀ. ರಸ್ತೆ, 3 ಸೇತುವೆ, 2.84 ಕಿ.ಮೀ. ವಿದ್ಯುತ್ ತಂತಿ ಹಾಗೂ 3 ನೀರಿನ ಟ್ಯಾಂಕ್‌ಗಳಿಗೆ ಹಾನಿಯಾಗಿದೆ. ಮರಗಳು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಧರೆ- ಭೂ ಕುಸಿತ ಸಂಭವಿಸಿದೆ. ಜು.18 ಮತ್ತು 19ರಂದು ಜಿಲ್ಲಾದ್ಯಂತ ಇರುವ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಜಿಲ್ಲಾ ಧಿಕಾರಿ ಕೆ.ಎನ್.ರಮೇಶ್ ಸೋಮವಾರ ಆದೇಶ ಹೊರಡಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಭಾನುವಾರ ಹಗಲಿನ ವೇಳೆ ಮಳೆಯ ಅಬ್ಬರ ತಗ್ಗಿದ್ದು ರಾತ್ರಿ ವೇಳೆ ಭಾರೀ ಮಳೆಯಾಗಿದೆ. ಸೋಮವಾರ ಮಧ್ಯಾಹ್ನದವರೆಗೂ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ನಂತರ ಸ್ವಲ್ಪಮಟ್ಟಿಗೆ ಬಿಡುವು ನೀಡಿದೆ. ಮೋಡ ಕವಿದ ವಾತಾವರಣ ಮುಂದುವರಿದಿದ್ದು ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಚಿಕ್ಕಮಗಳೂರು ತಾಲೂಕು ಅರೇನೂರು ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಪ್ರಯಾಣಿಕರು ಪರ ದಾಡುವಂತಾಗಿತ್ತು. ಬೆಳಗಿನ ಜಾವ ಅಬ್ಬರಿಸಿದ ಗಾಳಿ- ಮಳೆಗೆ ಮರ ಬಿದ್ದು ಅಂದಾಜು 1 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಸ್ಥಳೀಯರು ಮರ ತೆರವು ಕಾರ್ಯಾಚರಣೆ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತರೀಕೆರೆ ತಾಲೂಕು ಕಲ್ಲತ್ತಗಿರಿ ಜಲಪಾತದಲ್ಲಿ ನೀರು ಅಬ್ಬರಿಸಿ ಹರಿಯುತ್ತಿದ್ದು, ತ್ಯಾಗದಬಾಗಿ ತಾಂಡ್ಯ, ಸಿದ್ದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಮೇಲೆ ಹಳ್ಳದ ನೀರು ಉಕ್ಕಿ ಹರಿದು ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳಲು ಪರದಾಡಿದರು.
ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಗ್ರಾಮದಲ್ಲಿ ಸಹದೇವ್ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಗಲಿನ ವೇಳೆ ಬಿಡುವು ನೀಡುತ್ತಿರುವ ಮಳೆರಾಯ ರಾತ್ರಿ ವೇಳೆ ಅಬ್ಬರಿಸುತ್ತಿದ್ದಾನೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.