Advertisement

ಅಭಿಮಾನಿಗಳ ಮನಗೆದ್ದ ಮೇರುನಟ ಡಾ|ರಾಜ್‌ಕುಮಾರ್‌

04:51 PM Apr 25, 2019 | Team Udayavani |

ಚಿಕ್ಕಮಗಳೂರು: ಇಂದಿಗೂ ಕೂಡ ಇಡಿ ಸಂಸಾರದೊಂದಿಗೆ ಕುಳಿತು ನೋಡಬಹುದಾದ ಚಿತ್ರಗಳು ಎಂದರೆ ಅದು ಡಾ| ರಾಜ್‌ಕುಮಾರ್‌ ಅವರ ಚಿತ್ರಗಳು ಮಾತ್ರ. ಅಂತಹ ಅಭಿನಯದ ಚತುರತೆ ಅವರಲ್ಲಿ ಅಡಗಿತ್ತು ಎಂದು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಸ.ಗಿರಿಜಾಶಂಕರ ಹೇಳಿದರು.

Advertisement

ನಗರದ ಬಸವನಹಳ್ಳಿ ರಾಜಾಸ್ಟುಡಿಯೋ ಮುಂಭಾಗ ಡಾ| ರಾಜ್‌ಕುಮಾರ್‌ ಅಭಿಮಾನಿ ಎ.ಎನ್‌. ಮೂರ್ತಿ ಬುಧವಾರ ಏರ್ಪಡಿಸಿದ್ದ ರಾಜ್‌ರ 90ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಡಿಗ್ರಿ ಮಾಡದೆ, ನಾಯಕನಾಗಲಿ-ಕಳನಾಯಕನಾಗಲಿ ಯಾವುದೇ ಪಾತ್ರದಲ್ಲೂ ಒಳಹೊಕ್ಕು ಪರಕಾಯ ಪ್ರವೇಶ ಮಾಡಿ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಅಭಿಮಾನಿಗಳ ಮನಗೆದ್ದ ಮೇರು ನಟ ರಾಜ್‌ ಎಂದರು.

ಡಾ| ರಾಜ್‌ ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶಿಸಿದರು. ರಂಗಭೂಮಿಯಲ್ಲೂ ಕೂಡ ಅವರ ನಟನೆಯನ್ನು ಎಲ್ಲರೂ ಪ್ರೀತಿಸುತ್ತಿದ್ದರು. ರಾಜ್‌ಕುಮಾರ್‌ ನಾಟಕ ನೋಡಿ ಬೇಡರಕಣ್ಣಪ್ಪ ಚಿತ್ರಕ್ಕೆ ನಿರ್ದೇಶಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಬೇಡರಕಣ್ಣಪ್ಪ ಚಿತ್ರವನ್ನು ನೋಡಿದರೆ ರಾಜ್‌ ಓರ್ವ ಬೇಡನಾಗಿ ಮಾಡಿದ ಪಾತ್ರ ಅತ್ಯದ್ಭುತ. ಬೇಡ ಜನಾಂಗವನ್ನು ನೋಡಿದಾಗಲೆಲ್ಲಾ ರಾಜ್‌ಕುಮಾರ್‌ರೆ ನಮ್ಮ ಕಣ್ಮುಂದೆ ಬರುತ್ತಾರೆ ಎಂದು ಹೇಳಿದರು.

ಹಾಸ್ಯದೊಂದಿಗೆ ವಿಷಯಾದಾರಿತವಾದ ಕಥೆಯನ್ನು ಹೊಂದಿ ಪಂಚಭಾಷ ನಟರಾಗಿ ಇನ್ನಷ್ಟು ಹೆಚ್ಚು ಹಣ ಸಂಪಾದಿಸುವ ಬಹಳಷ್ಟು ಅವಕಾಶ ರಾಜ್‌ ಅವರಿಗೆ ಇತ್ತು. ಆದರೂ ಕನ್ನಡದ ಜನ ನನಗೆ ಪ್ರೀತಿ, ವಿಶ್ವಾಸ ತುಂಬಿ ಇಷ್ಟರ ಮಟ್ಟಿಗೆ ಬೆಳೆಸಿದ್ದಾರೆ ಎಂದು ಕನ್ನಡ ಚಿತ್ರವನ್ನು ಬಿಟ್ಟು ಬೇರೆ ಚಿತ್ರ ಮಾಡಲಿಲ್ಲ. ಇಂತಹ ಬದ್ಧತೆ ರಾಜ್‌ ಅವರ ಹೃದಯವಂತಿಕೆಗೆ ಸಾಕ್ಷಿ ಎಂದರು.

Advertisement

ಗೋಕಾಕ್‌ ಚಳುವಳಿ ಸಂದರ್ಭ ನಾನು ಅವರ ಜೊತೆಯಲ್ಲಿ ಭಾಗವಹಿಸಿದ್ದೆ. ಆ ಚಳುವಳಿಗೆ ಹೊಸ ದಿಕ್ಕು ಸಿಕ್ಕಿದ್ದೆ ರಾಜಕುಮಾರರಿಂದ. ಅದರೊಂದಿಗೆ ಇಡೀ ರಾಜ್ಯ ಎದ್ದು ಕೈಜೋಡಿಸಿತು. ಅಂದಿನಿಂದ ಇಂದೂ ಕೂಡ ರಾಷ್ಟ್ರನಾಯಕರು ಸೇರಿ ಯಾವುದೆ ದೊಡ್ಡಮಟ್ಟದ ರಾಜಕಾರಣಿ ಬಂದರೂ ಬಸ್‌ ಅಥವ ಇನ್ನಿತಹೆ ವಾಹನಗಳನ್ನು ಕಳುಹಿಸಿ ಜನರನ್ನು ಕರೆತರಬೇಕು. ಆದರೆ ಅಂದು ರಾಜ್‌ಕುಮಾರ್‌ ಬರುವರು ಎಂದಾಗ ಅವರ ಸ್ವಂತ ಹಣದಲ್ಲಿ ಬಸ್‌ ಏರಿ ಲಕ್ಷಾಂತರ ಜನ ಅಭಿಮಾನದಿಂದ ಮುಗಿಬಿದ್ದು ಬಂದು ಅವರನ್ನು ನೋಡಿ ಸಂತೋಷದಿಂದ ಹಿಂತಿರುಗುತ್ತಿದ್ದರು ಎಂದರು.

ಅಭಿಮಾನಿ ಎ.ಎನ್‌. ಮೂರ್ತಿ ಮಾತನಾಡಿ, ಕನ್ನಡಿಗರ ಆರಾಧ್ಯ ದೈವ ರಾಜ್‌ಕುಮಾರ್‌ ಓರ್ವ ಮರೆಯಲಾಗದ ಮಾಣಿಕ್ಯ, ಚಿತ್ರರಂಗದಲ್ಲಿ ಅಣ್ಣಾವ್ರು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೊ ಅಷ್ಟೆದೊಡ್ಡ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದರು. ಅಂತಹ ಸರಳಜೀವಿಯನ್ನು ಮೊತ್ತೂಬ್ಬರಲ್ಲಿ ಕಾಣಲು ಸಾಧ್ಯವಿಲ್ಲ. ರಾಜ್‌ಕುಮಾರ್‌ ಹುಟ್ಟುಹಬ್ಬದಂದು ನಿಮ್ಮೆಲ್ಲರ ಸಹಕಾರದಿಂದ ಅಭಿಮಾನಿಗಳನ್ನು ಕರೆದು ಪರಸ್ಪರ ರಾಜ್‌ ಅವರ ವ್ಯಕ್ತಿತ್ವವನ್ನು ಗುಣಗಾನ ಮಾಡಿ ನೆನಪಿಸಿಕೊಳ್ಳುವ ಭಾಗ್ಯ ದೇವರು ಕಲ್ಪಿಸಿದ್ದಾನೆ. ನಾನು ನನ್ನ ಉಸಿರು ಇರುವ ತನಕ ಈ ಆಚರಣೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಡಾ| ರಾಜ್‌ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಕೇಕ್‌ ಕತ್ತರಿಸಿ ನಂತರ ಅಭಿಮಾನಿಗಳಿಗೆ ಉಪಹಾರ ನೀಡಲಾಯಿತು.

ಮಿಲನ್‌ ಚಿತ್ರಮಂದಿರದ ವ್ಯವಸ್ಥಾಪಕ ಶಿವಪ್ಪ, ಹಿರಿಯ ಪತ್ರಕರ್ತ ಜಿ.ವಿ. ಚೂಡನಾಥ್‌ ಅಯ್ಯರ್‌, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎನ್‌.ಎಸ್‌.ಶಿವಸ್ವಾಮಿ, ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಂ.ಎನ್‌. ಮಂಜುನಾಥರಾವ್‌, ಕಲ್ಕಟ್ಟೆ ನಾಗರಾಜ್‌ರಾವ್‌, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ನೀಲೇಶ್‌, ಉಮ್ಮಣ್ಣ, ಗುರುವೇಶ್‌, ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌. ವೆಂಕಟೇಶ್‌, ವಕೀಲ ಜಗದೀಶ್‌, ನಾರಾಯಣಸ್ವಾಮಿ, ಎಂ.ಎಸ್‌. ಉಮೇಶ್‌ಕುಮಾರ್‌, ಗಿರಿಧರ್‌ಯತೀಶ್‌, ಎ.ಎನ್‌.ದೀಪಕ್‌ ಇತರರು ಇದ್ದರು.

ಒಬ್ಬ ನಟ, ಒರ್ವಕವಿ, ಒಬ್ಬಚಿತ್ರಗಾರ, ಸಾಹಿತಿ ಭೌತಿಕವಾಗಿ ಇಲ್ಲದಿದ್ದರೂ ಸಹ ಅವರ ನಟನೆ, ಸಾಹಿತ್ಯ, ಕಲೆ, ಗಾಯನದ ಮೂಲಕ ಅವರನ್ನು ನೆನೆಸಿಕೊಳ್ಳುತ್ತೀವಲ್ಲ ಅಂತಹವನಿಗೆ ಎಂದೂ ಸಾವಿಲ್ಲ ಹಾಗಾಗಿ ರಾಜ್‌ಕುಮಾರ್‌ ಮರೆಯಲಾಗದಂತಹ ಓರ್ವ ಚಿರಂಜೀವಿ.
•ಗಿರಿಜಾಶಂಕರ,
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ.

Advertisement

Udayavani is now on Telegram. Click here to join our channel and stay updated with the latest news.

Next