Advertisement

ರಾಜ್ಯದ 6 ಜಿಲ್ಲೆಯಲ್ಲಿ ಜನತಾ ನ್ಯಾಯಾಲಯ ಸ್ಥಾಪನೆ

03:01 PM Apr 04, 2019 | Naveen |

ಚಿಕ್ಕಮಗಳೂರು: ರಾಜ್ಯದಲ್ಲಿ ಆರು ಜಿಲ್ಲೆಗಳಲ್ಲಿ ಖಾಯಂ ಜನತಾ ನ್ಯಾಯಾಲಯವನ್ನು ಕಾನೂನು ಬದ್ಧವಾಗಿ ಸ್ಥಾಪಿಸಿದ್ದು, 9 ರೀತಿಯ ಸಾರ್ವಜನಿಕ ಉಪಯುಕ್ತತಾ ಸೇವೆಗಳಿಗೆ ಸಂಬಂಧಿಸಿದಂತೆ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬಹುದಾಗಿದೆ.

Advertisement

ವೀಡಿಯೋ ಕಾನ್ಪರೆನ್ಸ್‌ ಮೂಲಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಮಾಧ್ಯಮದವರೊಂದಿಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವಕುಮಾರ್‌ ಮಾತನಾಡಿ ಈ ಮಾಹಿತಿ ನೀಡಿದರು.

ರಾಜ್ಯದ ಆರು ಜಿಲ್ಲೆಗಳಲ್ಲಿ ಆರಂಭವಾಗಿರುವ ಖಾಯಂ ಜನತಾ ನ್ಯಾಯಾಲಯಗಳ ವ್ಯಾಪ್ತಿಗೆ ಉಳಿದ ಜಿಲ್ಲೆಗಳನ್ನು ಹಂಚಲಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಮಂಗಳೂರು ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಖಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂದರು.

ಈ ಅದಾಲತ್‌ಗೆ ಬರುವ ಪ್ರಕರಣಗಳಲ್ಲಿ ವಿವಾದಕ್ಕೆ ಒಳಗಾದ ಸೊತ್ತಿನ ಮೌಲ್ಯ ಹಾಗೂ ಹಣಕಾಸು ಸಂಸ್ಥೆಗಳ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಆ ಮೌಲ್ಯ ಒಂದು ಕೋಟಿ ರೂ. ಮೀರಿರಬಾರದು. ಮೀರಿದ್ದಲ್ಲಿ ಅದನ್ನು ಸಿವಿಲ್‌ ನ್ಯಾಯಾಲಯದಲ್ಲಿ ಮಾತ್ರ ಪ್ರಶ್ನಿಸಬಹುದಾಗಿದೆ ಎಂದರು.

ಖಾಯಂ ಜನತಾ ನ್ಯಾಯಾಲಯ ನೀಡುವ ಐ ತೀರ್ಪಿನ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತಿಲ್ಲ. ಏನಿದ್ದರೂ ಶ್ರೇಷ್ಠ ನ್ಯಾಯಾಲಯದಲ್ಲಿ ರಿಟ್‌ ಮೂಲಕ ಪ್ರಶ್ನಿಸಬೇಕಾಗುತ್ತದೆ. ನ್ಯಾಯಾಲಯ ನೀಡುವ  ತೀರ್ಪನ್ನು ಸಿವಿಲ್‌ ನ್ಯಾಯಾಲಯಕ್ಕೆ ಕಳುಹಿಸಿಕೊಡಬಹುದಾಗಿದ್ದು, ಆ ನ್ಯಾಯಾಲಯ ಹೊರಡಿಸಿದ ಡಿಕ್ರಿಯಂತೆ  ಮಲ್ಜಾರಿಗೊಳಿಸಬಹುದಾಗಿದೆ ಎಂದು ತಿಳಿಸಿದರು.

Advertisement

ಸರಳ ಪ್ರಕ್ರಿಯೆ: ಖಾಯಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲಾಗಿದೆ. ಕೇವಲ ಬಿಳಿಹಾಳೆಯಲ್ಲಿ ಸೇವಾ ನ್ಯೂನತೆಗಳನ್ನು ಬರೆದು ದೂರು ಅರ್ಜಿಯನ್ನು ಯಾವುದೇ ಶುಲ್ಕವಿಲ್ಲದೆ ಸಲ್ಲಿಸಬಹುದಾಗಿದೆ. ಇದೊಂದು ಗ್ರಾಹಕ ವಿವಾದ ಪರಿಹಾರದ ಫೋರಂ ಇದ್ದಂತೆ ಎಂದು ಹೇಳಿದರು.

ಈ ನ್ಯಾಯಾಲಯದ ವ್ಯಾಪ್ತಿ ಸಾರ್ವಜನಿಕ ಉಪಯುಕ್ತತಾ ಸೇವೆಗಳಿಗೆ ಸೀಮಿತವಾಗಿದ್ದು, ಪಟ್ಟಿ ಮಾಡಿರುವ 9 ಸೇವೆಗಳ ಹೊರತು ಉಳಿದ ಯಾವುದೇ ದೂರನ್ನು ಸ್ವೀಕರಿಸುವುದಿಲ್ಲ.

ಒಂದು ಪ್ರಕರಣವನ್ನು ಹೆಚ್ಚೆಂದರೆ 3 ತಿಂಗಳ ಒಳಗೆ ಮುಗಿಸಿ ಈ ತೀರ್ಪು ನೀಡಬೇಕಾಗಿದೆ. ಒಂದು ಜಿಲ್ಲೆಯಿಂದ ಹೆಚ್ಚಿನ ಅರ್ಜಿಗಳು ಬಂದಲ್ಲಿ ಆ ಜಿಲ್ಲೆಯಲ್ಲೇ ಒಂದು ಖಾಯಂ ಜನತಾ ನ್ಯಾಯಾಲಯ ಸ್ಥಾಪನೆ ಬಗ್ಗೆ ಅಲೋಚಿಸಬಹುದು. ಅರ್ಜಿ ಸಲ್ಲಿಕೆಗೆ ಕಾಲಮಿತಿ ಇಲ್ಲ ಎಂದರು.

ಮಾಧ್ಯಮದವರೊಂದಿಗೆ ಸಂವಾದಿಸಿ ಪ್ರಶ್ನೆಗಳನ್ನು ಆಹ್ವಾನಿಸಿದ ಸದಸ್ಯ ಕಾರ್ಯದರ್ಶಿ, 9 ಸೇವೆಗಳ ಜೊತೆಗೆ ಇಂದಿನ ತುರ್ತು ಸಮಸ್ಯೆಯಾದ ಪರಿಸರದ ಸಮಸ್ಯೆಗಳನ್ನು ಸೇರಿಸಬಾರದೇಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಹಸಿರು ನ್ಯಾಯಪೀಠವನ್ನು ಇದಕ್ಕಾಗಿಯೇ ತೆರೆಯಲಾಗಿದ್ದು, ಹಾಗಾಗಿ ಇಲ್ಲಿ ಅವಕಾಶ ನೀಡಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸಬಹುದೆಂದು ಹೇಳಿದರು.

ಶಿಕ್ಷಣ ಸೇವೆಯಲ್ಲಿ ಆಗುತ್ತಿರುವ ಸಮಸ್ಯೆ ಮತ್ತು ಲೋಪಗಳ ಬಗ್ಗೆ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದರೂ ಈವರೆಗೂ ಒಂದು ಅರ್ಜಿಯೂ ದಾಖಲಾಗಿಲ್ಲ. ಯಾರೇ ದಾಖಲಿಸಿದರೂ ಆ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಪೋಷಕರನ್ನು ಕರೆದು ಪರಿಹಾರದ ಬಗ್ಗೆ ಆಲೋಚಿಸಬಹುದು ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಬಸವರಾಜ ಚೇಂಗಟಿ, ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ವೆಂಕಟೇಶ್‌ ಮತ್ತು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next