Advertisement

ಡಾ|ಶಿವರಾಮ ಕಾರಂತರದ್ದು ಪ್ರಯೋಗಶೀಲ ವ್ಯಕ್ತಿತ್ವ

05:13 PM Aug 30, 2019 | Naveen |

ಚಿಕ್ಕಮಗಳೂರು: ಕಡಲ ತೀರದ ಭಾರ್ಗವ ಡಾ| ಶಿವರಾಮ ಕಾರಂತರದು ವಿಶೇಷವಾದ ಪ್ರಯೋಗಶೀಲ ವ್ಯಕ್ತಿತ್ವ. ಅವರೊಬ್ಬ ನಡೆದಾಡುವ ವಿಶ್ವಕೋಶ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ನಗರದ ಎಂಇಎಸ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಜ್ಞಾನಪೀಠ ಪುರಸ್ಕೃತರ ಬದುಕು-ಬರಹ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ| ಶಿವರಾಮ ಕಾರಂತರ ಕುರಿತು ಮಾತನಾಡಿದರು.

ಶಿವರಾಮ ಕಾರಂತರು ಕೇವಲ 45 ಕಾದಂಬರಿಗಳನ್ನು ಬರೆದು ಪ್ರಸಿದ್ಧರಾದವರಲ್ಲ. 97 ಗೀತ ನಾಟಕಗಳನ್ನು, ಪ್ರಪಂಚದ ಎಲ್ಲಾ ಸಂಗತಿಗಳನ್ನೂ ತಿಳಿಸುವ 9 ವಿಶ್ವಕೋಶಗಳನ್ನು ಕನ್ನಡದಲ್ಲಿ ರಚಿಸಿದವರು. ಅವರು ಅನೇಕ ವೈಜ್ಞಾನಿಕ ಗ್ರಂಥಗಳನ್ನು, 232 ಮಕ್ಕಳ ಕಥೆಗಳನ್ನು ಬರೆದಿದ್ದಾರೆ ಎಂದರು.

ಇಡೀ ರಾತ್ರಿ ನಡೆಯುತ್ತಿದ್ದ ಯಕ್ಷಗಾನವನ್ನು ಮೂರು-ನಾಲ್ಕು ಗಂಟೆಗಳಲ್ಲಿ ಮುಗಿಯುವಂತೆ ಮಾಡಿ ಆಸಕ್ತಿ ಇಲ್ಲದವರಿಗೂ ಪರಿಚಯಿಸಿದ ಕೀರ್ತಿ ಕಾರಂತರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಇಂದು ಪರಿಸರ, ನದಿ ತೀರಗಳು, ಅನೇಕ ಪ್ರಾಣಿ ಪಕ್ಷಿಗಳು ಉಳಿದಿರುವುದಕ್ಕೆ ಕಾರಂತರು ಕಾರಣ ಎಂದರು.

ಎಲ್ಲಿ ಪರಿಸರಕ್ಕೆ ಧಕ್ಕೆಯಾದರೂ ತಕ್ಷಣ ಕಾರಂತರು ಅದನ್ನು ವಿರೋಧಿಸುತ್ತಿದ್ದರು. ಪಶ್ಚಿಮ ಘಟ್ಟ ಹಾಳಾದರೆ ಕರ್ನಾಟಕ ಮಾತ್ರವಲ್ಲ ಇಡೀ ಭೂಮಂಡಲಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ, ಪಶ್ಚಿಮ ಘಟ್ಟವನ್ನು ಉಳಿಸಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಕಾರಂತರು, ಅನೇಕ ಪರಿಸರ ಹೋರಾಟಗಳಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು. ಕಾರಂತರ ಕಥೆಗಳಲ್ಲಿ ಕ್ರಾಂತಿ ಇಲ್ಲ, ಸುಧಾರಣೆಯ ಕಳಕಳಿ, ವೈಜ್ಞಾನಿಕ, ವೈಚಾರಿಕ ಚಿಂತನೆ, ಬದಲಾವಣೆಯ ತುಡಿತ, ಬದುಕನ್ನು ನಿರಾಕರಿಸದೇ ಸ್ವೀಕರಿಸಬೇಕೆನ್ನುವ ಸಂದೇಶವಿದೆ ಎಂದರು.

Advertisement

ಕಾರಂತರ ಕಾದಂಬರಿಗಳಲ್ಲಿನ ಪಾತ್ರಗಳು, ವೈಜ್ಞಾನಿಕ ಚಿಂತನೆಗಳು, ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳೆದುರು ಎಳೆಎಳೆಯಾಗಿ ವಿವರಿಸಿದ ಗಿರಿಜಾ ಶಂಕರ, ಕಾರಂತರ ಕಾದಂಬರಿಗಳಲ್ಲಿ ಬರುವ ಪಾತ್ರಗಳು ಅಳುಮುಂಜಿಗಳಲ್ಲ ಬದುಕನ್ನು ಧೈರ್ಯದಿಂದ ಎದುರಿಸುವ, ಬಂದದ್ದನ್ನು ಬಂದಂತೆಯೇ ಸ್ವೀಕರಿಸುವ ಪಾತ್ರಗಳು ಎಂದು ತಿಳಿಸಿದರು. ಕಾರ್ಯಕ್ರ ಉದ್ಘಾಟಿಸಿ ಮಾತನಾಡಿದ ಮಲೆನಾಡು ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿ ಡಾ| ಡಿ.ಎಲ್.ವಿಜಯ್‌ ಕುಮಾರ್‌, ಇಂತಹ ಕಾರ್ಯಕ್ರಮಗಳಿಂದ ಜ್ಞಾನಪೀಠ ಪುರಸ್ಕೃತರ ಬರಹ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್‌, ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಬದುಕು ಮತ್ತು ಬರಹಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಗಾಯಕ ಕೆ.ಎಚ್.ಬಸವರಾಜ್‌ ಗೀತಗಾಯನ ನಡೆಸಿದರು. ಡಾ| ಶಿವರಾಮ ಕಾರಂತರ ಬದುಕು-ಬರಹ ಕುರಿತು ರಸಪ್ರಶ್ನೆ ಕಾರ್ಯಕ್ರಮ ಜರುಗಿತು. ಮಲೆನಾಡು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್‌.ಶಾಂತಕುಮಾರಿ, ಪ್ರಾಂಶುಪಾಲ ಡಾ|ವಿಷ್ಣುವರ್ಧನ್‌, ಕಸಾಪ ಹಿರಿಯ ಸದಸ್ಯ ಭೈರೇಗೌಡ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ. ಮಂಜುನಾಥಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪ್ರೊ.ಕೆ.ಎನ್‌. ಲಕ್ಷಿ ್ಮೕಕಾಂತ್‌ ಸ್ವಾಗತಿಸಿ, ಉಪನ್ಯಾಸಕ ಕೆಂಚಯ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next