Advertisement
ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ ಗಡಿಯಾರದ ಅಂಗಡಿ ನಡೆಸುತ್ತಿರುವ ವಿಜಯ್‌ಕುಮಾರ್ ಹುಟ್ಟು ವಿಕಲಚೇತನ. ಇವರಿಗೆ ಕಿವಿ ಕೇಳಿಸುವುದಿಲ್ಲ, ಮಾತು ಬಾರದು. ಹುಟ್ಟಿನಿಂದ ಇವರಿಗೆ ಅಂಗವೈಕಲ್ಯ ಬಂದಿದ್ದರೂ ಅದಕ್ಕೆ ಶಪಿಸುತ್ತ ಕಾಲ ಕಳೆಯದೇ ಸ್ವ ಸಾಮರ್ಥ್ಯದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
Related Articles
Advertisement
ಎಲ್ಲೆಡೆ ಬೇಡಿಕೆ: ಇವರು ತಯಾರಿಸುವ ಅಪರೂಪದ ಗಡಿಯಾರಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಹೆಚ್ಚಾಗಿ ಗ್ರಾಹಕರು ಇಂತಹ ಗಡಿಯಾರ ಮನೆಯಲ್ಲಿ ಅಲಂಕಾರಕ್ಕಾಗಿ ಬಳಸುತ್ತಾರೆ. ಅದರಲ್ಲೂ ಬೆಂಗಳೂರಿನಿಂದ ಇಂತಹ ಗಡಿಯಾರಕ್ಕೆ ಬೇಡಿಕೆ ಹೆಚ್ಚು ಬರುತ್ತಿದೆ. ಇಂತಹ ಗಡಿಯಾರಗಳನ್ನು ವಿಜಯ್‌ಕುಮಾರ್ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ.
ಗಡಿಯಾರಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸುತ್ತಮುತ್ತಲು ಸಿಗುವ ಅನುಪಯುಕ್ತ ವಸ್ತುಗಳಿಂದಲೇ ಆಯ್ದುಕೊಳ್ಳುತ್ತಾರೆ. ವಿಜಯ್‌ಕುಮಾರ್ ಒಬ್ಬ ಉತ್ತಮ ಚಿತ್ರಕಲಾವಿದರೂ ಆಗಿರುವುದರಿಂದ ಆ್ಯಂಟಿಕ್ಯೂ ಗಡಿಯಾರಗಳನ್ನು ಸುಂದರವಾಗಿ ಸ್ವತಃ ಅವರೇ ತಯಾರಿಸುತ್ತಾರೆ.
ತಮ್ಮ ಬಳಿ ಬರುವವರು ಹಿಂದಿನ ಕಾಲದ ಮರಳು, ನೀರು ಚಾಲಿತ ಗಡಿಯಾರಗಳನ್ನು ಆರ್ಡರ್ ಕೊಟ್ಟು ಮಾಡಿಸುತ್ತಾರೆ. ಇವರ ಅಸಾಧಾರಣ ಪ್ರತಿಭೆಗೆ ಬೆರಾಗಾಗುವ ಗ್ರಾಹಕರು ಸಣ್ಣಪುಟ್ಟ ವಾಚ್ ರಿಪೇರಿಗೂ ವಿಜಯ್ ಬಳಿಗೆ ಬರುತ್ತಾರೆ. ಇದರಿಂದ ವಿಜಯ್ ಅವರ ಅಂಗಡಿ ಸದಾ ಗ್ರಾಹಕರಿಂದಲೇ ತುಂಬಿರುತ್ತದೆ.
ಅಪರೂಪದ ಬಹುಮುಖ ಪ್ರತಿಭೆ ವಿಜಯ್ ಕುಮಾರ್ ನಗರದ ಹನುಮಂತಪ್ಪ ಸರ್ಕಲ್‌ನ ಷರೀಫ್ ಗಲ್ಲಿಯಲ್ಲಿ ಸಣ್ಣದೊಂದು ಅಂಗಡಿಯಿಂದ ಜೀವನ ನಡೆಸುತ್ತಿದ್ದಾರೆ. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬಡತನದ ಬೇಗೆಯಲ್ಲೂ ದೈಹಿಕ ನ್ಯೂನತೆ ನಡುವೆ ವಿಶಿಷ್ಟ ಸಾಧನೆ ಮಾಡುತ್ತಿರುವ ಅವರು ತಮ್ಮ ಅಂಗಡಿಯಲ್ಲಿ ಯಾವಾಗಲೂ ಗಡಿಯಾರಗಳ ಪ್ರಪಂಚದಲ್ಲಿಯೇ ಮುಳುಗಿರುತ್ತಾರೆ. ತಾನೊಬ್ಬ ಅಂಗವಿಕಲ ಎಂಬುದನ್ನು ಮರೆತು ಸದಾ ಹೊಸ ಬಗೆಯ ಗಡಿಯಾರಗಳ ತಯಾರಿಕೆ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿರುತ್ತಾರೆ .
ಸಾಧಕರನ್ನು ಗುರುತಿಸಿ-ಚೈತನ್ಯ ತುಂಬಿಪ್ರತಿನಿತ್ಯ ಹೊಸ ಮಾದರಿ ಗಡಿಯಾರ ತಯಾರಿಕೆಯಲ್ಲಿ ಜಯಕುಮಾರ ನಿರತರಾಗಿರುತ್ತಾರೆ. ತಮ್ಮಂತೆ ಅಂಗವಿಕಲತೆ ಹೊಂದಿದವರಿಗೆ ತಾವು ಕಲಿತ ವಿದ್ಯೆ ಹೇಳಿಕೊಡುತ್ತಾರೆ. ಉತ್ತಮ ಚಿತ್ರಕಲಾವಿದರಾಗಿರುವ ವಿಜಯ್ ಕರಾಟೆಯಲ್ಲಿ ಪರಿಣಿತರಾಗಿದ್ದು, ಬ್ಲ್ಯಾಕ್‌ಬೆಲ್ಟ್ ಚಾಂಪಿಯನ್. ಕಿವುಡ-ಮೂಗನಾಗಿದ್ದುಕೊಂಡು ಸಾಧನೆಗೈದ ಇವರನ್ನು ಕೆಲ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಸರ್ಕಾರ ಇಂತಹ ಅಪರೂಪದ ಸಾಧಕರನ್ನು ಗುರುತಿಸಿ ಇನಷ್ಟು ಚೈತನ್ಯ ತುಂಬಲಿ ಎಂಬುದು ಹಿತೈಷಿಗಳ ಮನವಿ.