ಚಿಕ್ಕಮಗಳೂರು: ಕೇಂದ್ರ ರಸ್ತೆ ನಿಧಿಯಿಂದ (ಸಿಆರ್‌ಎಫ್)ಬಿಡುಗಡೆಯಾದ ಅನುದಾನವನ್ನು ಕಳೆದ ಸಮ್ಮಿಶ್ರ ಸರ್ಕಾರ ಜಿಲ್ಲೆಗೆ ನೀಡದ ಹಿನ್ನಲೆಯಲ್ಲಿ ಜಿಲ್ಲೆಯ ರಸ್ತೆಗಳು ಹದಗೆಡಲು ಕಾರಣವಾಗಿದೆ. ಈಗ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಲ್ಮರುಡಪ್ಪ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ ಎಂದು ಇತ್ತೀಚೆಗೆ ಪ್ರತಿಭಟನೆ ನಡೆಸಿ ಕೆಲವು ಪಕ್ಷ, ಸಂಘಟನೆಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿವೆ. ಕೇಂದ್ರದಿಂದ ಜಿಲ್ಲೆಗೆ ಮಂಜೂರಾಗಿದ್ದ ರಸ್ತೆ ಕಾಮಗಾರಿಗಳಿಗೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ರೇವಣ್ಣ ಅವರು ಅನುಮೋದನೆಯನ್ನೇ ನೀಡಲಿಲ್ಲ.
ಈ ಸಂಘಟನೆಗಳ ಮುಖಂಡರು ಅನುಮೋದನೆ ಯಾಕೆ ಕೊಡಲಿಲ್ಲ ಎಂದು ಆಗ ಯಾರೂ ಕೇಳಲಿಲ್ಲ. ಈಗ ಪ್ರತಿಭಟಿಸುತ್ತಾರೆ ಎಂದು ಟೀಕಿಸಿದರು.
ಚಿಕ್ಕಮಗಳೂರು ವಿಧಾನಸಭಾ ವ್ಯಾಪ್ತಿಯ 22 ರಸ್ತೆ, 9 ಸೇತುವೆಗಳಿಗೆ 103.35 ಕೋಟಿ ರೂ. ಹಾಗೂ ಜಿಲ್ಲೆಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ 175.09 ಕೋಟಿ ರೂ.ಗೆ ಕೇಂದ್ರದ ಅನುದಾನದೊಂದಿಗೆ ಮಂಜೂರಾತಿ ಆಗಿತ್ತು. ಈ ಕಾಮಗಾರಿಗಳಿಗೆ ಮೊದಲು ರಾಜ್ಯ ಸರ್ಕಾರ ಹಣ ವಿನಿಯೋಗಿಸಿ ನಂತರ ಕೇಂದ್ರದಿಂದ ಪಡೆಯುವ ಅವಕಾಶವಿತ್ತು. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಆರ್ಥಿಕ ಕೊರತೆಯಿಂದ ಕೇಂದ್ರದಿಂದ ಮಂಜೂರಾದ ಜಿಲ್ಲೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆಯನ್ನೇ ನೀಡಲಿಲ್ಲ. ಆದರೆ, ಹಾಸನ ಜಿಲ್ಲೆಯ 7 ರಸ್ತೆ ಕಾಮಗಾರಿಗೆ 42 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡುತ್ತಾರೆ. ಇದು ತಾರತಮ್ಯವಲ್ಲವೇ? ಇದನ್ನು ಅಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಸಚಿವ ಸಿ.ಟಿ.ರವಿ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಗೆ ಮಂಜೂರು ಮಾಡಿಸಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಕೆಲಸ ಮಳೆ ನಿಂತ ಕೂಡಲೇ ಆರಂಭವಾಗಿದೆ. ಕ್ರಮೇಣ ಎಲ್ಲ ರಸ್ತೆ ಗುಂಡಿಗಳನ್ನೂ ಮುಚ್ಚಲಾಗುವುದು ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ. ಕಡೂರು, ಚಿಕ್ಕಮಗಳೂರು, ಮೂಡಿಗೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆ ಕರಾರಿನಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಗುತ್ತಿಗೆದಾರರೇ ನಿರ್ವಹಿಸಬೇಕೆಂದು ತಿಳಿಸಲಾಗಿದೆ. ಸತತ ಮಳೆಯಾಗುತ್ತಿದ್ದ ಹಿನ್ನೆಲೆ ಗುಂಡಿ ಮುಚ್ಚಲು ಸಾಧ್ಯವಾಗಿರಲಿಲ್ಲ. ಈಗ ಮಳೆ ನಿಂತ ಕೂಡಲೇ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆ ಎಂದರು.
ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ, ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಆಗದಿದ್ದ ಮಳೆ ಈ ಬಾರಿ ಆಗಿದೆ. ಅತೀ ಹೆಚ್ಚು ಮಳೆಯಿಂದಾಗಿ ಹಾಗೂ ಒಳಚರಂಡಿ ಮತ್ತು ಅಮೃತ್ ಯೋಜನೆ ಕಾಮಗಾರಿಗಳು ನಡೆಯುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ ಎಂದರು.
ನಗರೋತ್ಥಾನ ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗೆ 30 ಕೋಟಿ ರೂ. ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಸಚಿವ ಸಿ.ಟಿ.ರವಿ ಯವರ ಪ್ರಯತ್ನದಿಂದಾಗಿ ವಿಶೇಷ ಅನುದಾನ ವಾಗಿ 8 ಕೋಟಿ ರೂ. ಬಿಡುಗಡೆಯಾಗಿದ್ದು, ಅದಕ್ಕೆ ಟೆಂಡರ್ ಕರೆಯಬೇಕಿದೆ ಎಂದರು.
ನಗರದಲ್ಲಿ ಅಮೃತ್ ಯೋಜನೆ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳನ್ನು ಮಳೆ ಬಿಡುವು ನೀಡಿದ ಕೂಡಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಷ ಜಯಣ್ಣ, ಬಿಜೆಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ಮಹೇಶ್, ಜಯರಾಂ ಮತ್ತಿತರರು ಹಾಜರಿದ್ದರು.