ಚಿಕ್ಕಮಗಳೂರು: ಈ ಬಾರಿ ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ತತ್ತರಿಸಿದ ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಸಹ ಒಂದು. ನೆರೆ, ಗಾಳಿ ಮತ್ತು ಭೂಕುಸಿತ ಘಟನೆಗಳಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಪಾರವಾದ ಬೆಳೆ ಹಾನಿ ಮತ್ತು ಪ್ರಾಣ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿಗಳ ಕುರಿತಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಬೀಳಬೇಕಾಗಿದ್ದ ವಾಡಿಕೆ ಮಳೆ 199 ಮಿಲಿ ಮೀಟರ್ ಆದರೆ ಕಳೆದ 14 ದಿನಗಳಲ್ಲಿ 631 ಮಿಲಿ ಮೀಟರ್ ಮಳೆ ಸುರಿದಿದೆ. ಇದು ವಾಡಿಕೆಗಿಂತ ಸುಮಾರು ಮೂರು ಪಟ್ಟು ಹೆಚ್ಚು! ಈ ರೀತಿ ಸುರಿದ ಭಾರೀ ಮಳೆಗೆ ಮಲೆನಾಡು ಭಾಗದಲ್ಲಿ ಒಟ್ಟು ಒಂಭತ್ತು ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಓರ್ವನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಜಿಲ್ಲೆಯಾದ್ಯಂತ ಒಟ್ಟು 26 ಗಂಜಿಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಏಳು ಮಂದಿಗೆ ಸುಮಾರು ಐದು ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ವಿತರಿಸಲಾಗಿದೆ.
ಮಾತ್ರವಲ್ಲದೆ ಈ ಬಾರಿಯ ನೆರೆಯಿಂದಾಗಿ 1631ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. 319 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ ಹಾಗೂ 820 ಮನೆಗಳಿಗೆ ಭಾಗಶಃ ಹಾನಿಯಾಗಿದೆ, ಇನ್ನು ಮೂಡಿಗೆರೆ ತಾಲೂಕು ಒಂದರಲ್ಲೇ ಸುಮಾರು 917 ಮನೆಗಳಿಗೆ ಹಾನಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ 950 ಕಿಲೋ ಮೀಟರ್ ರಸ್ತೆ ಹಾಳಾಗಿದ್ದು 2065 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಇದರಿಂದಾಗಿ 45 ಗ್ರಾಮಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿವೆ.
ಒಟ್ಟಾರೆಯಾಗಿ 159 ಸೇತುವೆಗಳು ಹಾಗೂ 34 ಕೆರೆಗಳಿಗೂ ಈ ಬಾರಿಯ ಮಳೆಯಿಂದ ಹಾನಿ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 240 ಕೋಟಿ ನಷ್ಟ ಸಂಭವಿಸಿದ್ದರೆ ಅದರಲ್ಲಿ ಮೂಡಿಗೆರೆಯೊಂದರಲ್ಲೇ 140 ಕೋಟಿ ನಷ್ಟ ಸಂಭವಿಸಿದೆ ಎಂಬೆಲ್ಲಾ ಮಾಹಿತಿಯನ್ನು ಜಿಲ್ಲಾಧಿಕಾರಿಯರು ಮಾಧ್ಯಮಗಳ ಮೂಲಕ ನೀಡಿದ್ದಾರೆ.