ಚಿಕ್ಕಮಗಳೂರು : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ನಗರದಲ್ಲಿ ಬುಧವಾರ ದತ್ತಮಾಲಾಧಾರಿಗಳು ಬೃಹತ್ ಶೋಭಾಯಾತ್ರೆ ನಡೆಸಿದರು.
ಮಹಿಳೆಯರ ಕುಣಿತ: ಕೇವಲ ಯುವಕರು ಮಾತ್ರವಲ್ಲದೆ ಈ ಬಾರಿ ಮಹಿಳೆಯರು ಸಹ ಹಿಂದೂ ಪರ ಘೋಷಣೆ ಕೂಗಿ, ಭಜನೆ ಮಾಡುತ್ತ ಹೆಜ್ಜೆ ಹಾಕಿದರು. ಸಂಘಟನೆಗಳ ಮುಖಂಡರು, ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಮಾಲಾಧಾರಿಗಳು ಸರತಿ ಸಾಲನ್ನು ಬಿಟ್ಟು ಹೋಗದಂತೆ ತಡೆಯುತ್ತಿದ್ದರು.
ರಸ್ತೆಯಲ್ಲಿ ಕುಳಿತು ಭಜನೆ: ಶೋಭಾಯಾತ್ರೆ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಬರುತ್ತಿದ್ದಾಗ ಗಣಪತಿ ದೇವಾಲಯದ ಮುಂಭಾಗದಲ್ಲಿ ಭಜರಂಗದಳ ಜಿಲ್ಲಾ ಮಾಜಿ ಸಂಚಾಲಕ ತುಡಕೂರು ಮಂಜು ಹಾಗೂ ಇತರ ದತ್ತಮಾಲಾಧಾರಿಗಳು ರಸ್ತೆಯ ಮೇಲೆ ಕುಳಿತು ಹಿಂದೂಪರ ಘೋಷಣೆ ಕೂಗಲಾರಂಭಿಸಿದರು.
ಅಲ್ಲದೇ, ಕೆಲಕಾಲ ರಸ್ತೆಯ ಮೇಲೆ ಕುಳಿತು ಭಜನೆ ಮಾಡಿದರು. ಶೋಭಾಯಾತ್ರೆಯಲ್ಲಿ ಸಚಿವ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್ .ಭೋಜೇಗೌಡ, ಭಜರಂಗದಳ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ್, ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ್, ಕಾರ್ಯದರ್ಶಿ ಯೋಗೀಶ್‌ರಾಜ್ ಅರಸ್, ರಾಜಪ್ಪ, ಪ್ರೇಮ್‌ಕಿರಣ್, ಮಧುಕುಮಾರ್ ರಾಜ್ ಅರಸ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.