ಚಿಕ್ಕಮಗಳೂರು: ನಗರದ ದಂಟರಮಕ್ಕಿ ಬಡಾವಣೆಯ ಶ್ರೀ ಪ್ರಸನ್ನ ನೀಲಾಂಜನ ಶನೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವೈಭವದಿಂದ ನಡೆಯಿತು.
ಉತ್ಸವದ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗೆ ಮಹಾಗಣಪತಿ ಹೋಮ, ನವಗ್ರಹ ಹೋಮ, ಶನೇಶ್ವರ ಹೋಮ ಜರುಗಿತು. ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನೆರವೇರಿತು.
ಮಹಾಮಂಗಳಾರತಿ ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಅಡ್ಡಪಲ್ಲಕ್ಕಿ ಮತ್ತು ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ಕಳಸ ಹೊತ್ತ ನೂರಾರು ಮಹಿಳೆಯರು, ನಾದಸ್ವರ, ಗ್ರಾಮೀಣ ವಾದ್ಯಗಳ ನಡುವೆ ಬ್ರಹ್ಮರಥ ಮತ್ತು ಅಡ್ಡಪಲ್ಲಕ್ಕಿ ಉತ್ಸವವನ್ನು ಏಕಕಾಲದಲ್ಲಿ ನಡೆಸಲಾಯಿತು. ದೇವಾಲಯದಿಂದ ಹೊರಟ ಬ್ರಹ್ಮರಥ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಬಡಾವಣೆಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದರಾಮೇಶ್ವರ ದೇವಾಲಯಕ್ಕೆ ತೆರಳಿ ಹಿಂದಿರುಗಿತು.
ಮನೆಗಳ ಮುಂದೆ ಸಾರಿಸಿ ರಂಗವಲ್ಲಿ ಹಾಕಿ ಉತ್ಸವವನ್ನು ಸ್ವಾಗತಿಸಿದ ಭಕ್ತರು,
ಪೂಜೆ ಸಲ್ಲಿಸಿ ಆರತಿ ಬೆಳಗಿದರು. ಉತ್ಸವ ದೇವಾಲಯಕ್ಕೆ ಹಿಂದಿರುಗಿದ ಬಳಿಕ ಶ್ರೀ ಶನೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಿಳೆಯರು ಹೊತ್ತು ತಂದಿದ್ದ ಕಳಸಗಳ ಜಲದಿಂದ ಅಭಿಷೇಕ ನೆರವೇರಿಸಲಾಯಿತು.
ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಇದೇ ವೇಳೆ ದೇವಾಲಯದ ಪ್ರಧಾನ ಅರ್ಚಕ ಮಲ್ಲೇಶ್‌ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಛಲವಾದಿ ಸಂಸ್ಥಾನದ ಶ್ರೀ ಬಸವನಾಗಿ ದೇವ ಶರಣರು, ಮಾಜಿ ಸಚಿವ ಮೋಟಮ್ಮ, ಬಿ.ಬಿ.ನಿಂಗಯ್ಯ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂತಾ ಅನಿಲ್‌ಕುಮಾರ್, ಡಿ.ಎಲ್.ಸುರೇಶ್, ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್. ಅನಿಲ್ ಕುಮಾರ್ ಉಪಸ್ಥಿತರಿದ್ದರು.