ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಯ ಅಂದಾಜು ಮಾಡಲು ಆಯಾ ಪ್ರದೇಶಗಳಲ್ಲಿ ಹೋಬಳಿವಾರು ತಂಡ ರಚಿಸಲಾಗಿದ್ದು, ಸದಸ್ಯರಿಗೆ ಸೋಮವಾರ ತರಬೇತಿ ನೀಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಕುಮಾರ್ ಹೇಳಿದರು.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈ ತಂಡಗಳು ಒಂದು ವಾರ ಕಾಲ ಪೂರ್ಣ ಸಮೀಕ್ಷೆ ನಡೆಸಿ ನಂತರ ವರದಿ ನೀಡಲಿವೆ. ಅದನ್ನು ಆಧರಿಸಿ ನಂತರ ಪರಿಹಾರದ ಬಗ್ಗೆ ಸರ್ಕಾರ ಆಲೋಚಿಸುತ್ತದೆ ಎಂದು ತಿಳಿಸಿದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ನಾಶವಾಗಿರುವ ವಾರ್ಷಿಕ ಬೆಳೆಗಳಾದ ಕಾಫಿ, ಅಡಕೆ ತೋಟಗಳ ಪ್ರಮಾಣ ಗೊತ್ತಾಗಿದೆ. ಜಿಲ್ಲೆಯಲ್ಲಿ ಮಹಾ ಮಳೆಯಿಂದ 28 ಸಾವಿರ ಹೆಕ್ಟೇರ್ ಕಾಫಿ ತೋಟ ನಾಶವಾಗಿದ್ದರೆ, 2500 ಹೆಕ್ಟೇರ್‌ನಲ್ಲಿ ಕೃಷಿ ಭೂಮಿ ಹಾಗೂ 150 ಹೆಕ್ಟೇರ್‌ನಲ್ಲಿ ಅಡಕೆ ತೋಟ ನಾಶವಾಗಿರುವುದು ಪ್ರಾಥಮಿಕ ಸಮೀಕ್ಷೆಯಿಂದ ಕಂಡುಬಂದಿದೆ ಎಂದು ಹೇಳಿದರು.
ತೋಟಗಾರಿಕೆ ಬೆಳೆಗಳು ನಾಶವಾಗಿದ್ದರೆ ಪ್ರತಿ ಹೆಕ್ಟೇರ್‌ಗೆ ಎನ್.ಡಿ.ಆರ್.ಎಫ್. ಸೂತ್ರದಂತೆ 33 ಸಾವಿರ ರೂ. ನೀಡಲಾಗುತ್ತದೆ. ಆದರೆ, ಈ ಪರಿಹಾರ ಹಾಗೂ ಆಗಿರುವ ನಷ್ಟಕ್ಕೆ ಸಮನಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕಿದೆ. ಅದನ್ನು ಸರ್ಕಾರ ತೀರ್ಮಾನಿಸುತ್ತದೆ ಎಂದು ಹೇಳಿದರು.
ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ 5 ಲಕ್ಷ ರೂ.ನೀಡುತ್ತಿದೆ. ಅವರು ಹಾನಿಗೊಳಗಾದ ಪ್ರದೇಶ ದಲ್ಲೇ ಮತ್ತೆ ಹಾನಿಯಾಗುವ ಸಂಭವವಿಲ್ಲ ಎಂಬುದು ಮನವರಿಕೆ ಆದರೆ ಮಾತ್ರ ಅಲ್ಲಿಯೇಮನೆ ನಿರ್ಮಿಸಿಕೊಳ್ಳಲು ಹಣ ನೀಡಲಾಗು ವುದು. ಇಲ್ಲದಿದ್ದಲ್ಲಿ ಅವರ ಹೆಸರಿನಲ್ಲಿ ಬೇರೆ ಕಡೆ ಜಮೀನಿದ್ದರೆ ಅಲ್ಲೂ ಸಹ ಮನೆ ಕಟ್ಟಿಕೊಳ್ಳಬಹುದು. ಇವೆರಡೂ ಇಲ್ಲದಿದ್ದ ಕಡೆಯಲ್ಲಿ ಅವರಿಗೆ ನಿವೇಶನ ಒದಗಿಸಲು ಆಯಾ ಗ್ರಾಪಂ ಅಥವಾ ಪಕ್ಕದ ಗ್ರಾಮ ಪಂಚಾಯತ್‌ನಲ್ಲಿ ನಿವೇಶನ ನೀಡಲು ಜಮೀನು ಮೀಸಲಿಟ್ಟಿದ್ದಲ್ಲಿ ಆ ಜಾಗದಲ್ಲಿ ತಕ್ಷಣ ಅವರಿಗೆ ನಿವೇಶನ ನೀಡಲಾಗುವುದೆಂದು ತಿಳಿಸಿದರು.
ಈವರೆಗೂ ವಾಸಿಸುತ್ತಿದ್ದ ಸಂತ್ರಸ್ತರ ಮನೆ ಹಾಗೂ ತೋಟ ಅಥವಾ ಗದ್ದೆ ಅತಿವೃಷ್ಟಿಯಿಂದ ಪೂರ್ಣ ನಾಶವಾಗಿ ಅದು ಕಂದಾಯ ಭೂಮಿಯಾಗಿದ್ದಲ್ಲಿ, ಅದನ್ನು ಅರಣ್ಯ ಇಲಾಖೆಗೆ ನೀಡಿ, ಬದಲಿ ಭೂಮಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರದ ಒಪ್ಪಿಗೆಯೂ ಬೇಕಾಗುತ್ತದೆ. ಹಾಗಾಗಿ, ಅದು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆ ನಿಟ್ಟಿನಲ್ಲೂ ಯೋಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಡಳಿತ ಅತಿವೃಷ್ಟಿ ಹಾನಿಯ ಅಂದಾಜನ್ನು ಈಗಾಗಲೇ ಕೈಗೊಂಡಿದೆ. ಮನೆಗಳ ನಾಶ ಹಾಗೂ ಹಾನಿ, ಬೆಳೆ ಹಾನಿ ಹಾಗೂ ಕೃಷಿ ಭೂಮಿ ನಾಶದ ಅಂದಾಜು ಮಾಡಲು ತಂಡಗಳನ್ನೇ ರಚಿಸಲಾಗಿದೆ. ಮನೆ ನಾಶ ಹಾಗೂ ಹಾನಿ ಬಗ್ಗೆ ಈಗಾಗಲೇ ದತ್ತಾಂಶ ಸಂಗ್ರಹಣೆ ಪೂರ್ಣಗೊಳ್ಳುತ್ತಾ ಬಂದಿದೆ. ಉಳಿದಂತೆ ನಷ್ಟದ ಅಂದಾಜು ಪೂರ್ಣವಾಗಿ ಇನ್ನು 15 ದಿನಗಳ ಒಳಗೆ ಜಿಲ್ಲಾಡಳಿತದ ಕೈಸೇರಲಿದೆ ಎಂದು ತಿಳಿಸಿದರು.