Advertisement

ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪ್ಯಾರಾ ನರ್ಸಿಂಗ್ ಕೋರ್ಸ್ ಹೆಸರಲ್ಲಿ ಲೈಂಗಿಕ ದೌರ್ಜನ್ಯ

09:36 AM Nov 11, 2023 | Team Udayavani |

ಕಡೂರು: ತಾಲೂಕಿನ ಕುಪ್ಪಾಳು ಮುರಾರ್ಜಿ ವಸತಿ ಶಾಲೆಯ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಪೋಕ್ಸೋ ಪ್ರಕರಣದಡಿಯಲ್ಲಿ ಮೂವರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

Advertisement

ಮೂಲತಃ ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿ ಹೋಬಳಿಯ ಮುಳುಕೆರೆ ಗ್ರಾಮದ ನಿವಾಸಿ ಚಂದನ (26),(ಕಡೂರು ತಾಲೂಕು ಅಂಚೆಚೋಮನಹಳ್ಳಿಯ ಆರೋಗ್ಯ ಇಲಾಖೆಯಲ್ಲಿ ಎಎನ್‌ಎಂ ನರ್ಸ್), ಎರಡನೇ ಆರೋಪಿ ಅಂಚೆಚೋಮನಹಳ್ಳಿಯ ಗ್ರಾಮದ ತೊಟ್ಟಿಮನೆ ಸುರೇಶ್(35), ಮೂರನೇ ಆರೋಪಿ ಸೊರಬ ತಾಲೂಕಿನ ಆನವಟ್ಟಿಯ ಫ್ಯಾನ್ಸಿಸ್ಟೋರ್ ಮಾಲೀಕ ವಿನಯ್ ಕುಮಾರ್(27) ಬಂಧಿತ ಆರೋಪಿಗಳಾಗಿದ್ದಾರೆ.

ವಸತಿ ಶಾಲೆಯ ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿ ರಾವ್ ಅವರ ತಂಡವು ಕಾರ್ಯಾಚರಣೆ ಆರಂಭಿಸಿ ನಂ ೮ ರಂದು ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಡಿವೈಎಸ್‌ಪಿ ಮಾಹಿತಿ ನೀಡಿದರು.

ಅಂಚೆಚೋಮನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್‌ಎಂ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಚಂದನ ಮದುವೆಯಾಗಿ ಈಗ ಗರ್ಭಿಣಿಯಾಗಿದ್ದು, ತನ್ನ ಪ್ರಿಯಕರ ವಿನಯ್ ಕುಮಾರ್(ಈತನೂ ವಿವಾಹಿತ)ಜೊತೆ ಈಗಲೂ ಸಂಪರ್ಕ ಇಟ್ಟುಕೊಂಡಿದ್ದಾಳೆ. ವಿನಯ್‌ಕುಮಾರ್ ಆಗಾಗ ಚಂದನಳ ಹತ್ತಿರ ಬಂದು ಹೋಗುತ್ತಿದ್ದು ಚಿಕ್ಕ ವಯಸ್ಸಿನ ಬಾಲಕಿಯರನ್ನು ಬಯಸಿದಾಗ ಆತನ ಮೇಲಿನ ಅತೀವ ಪ್ರೀತಿಯಿಂದ ಆರೋಪಿ ಚಂದನ ಮುರಾರ್ಜಿ ವಸತಿ ಶಾಲೆಯಲ್ಲಿ ಹಂಗಾಮಿ ಕೆಲಸ ಮಾಡುತ್ತಿರುವ ಸುರೇಶ್ ಎಂಬುವವನ ಸಹಾಯ ಪಡೆದು ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಸುರೇಶ್ ವಸತಿ ನಿಲಯದ ಮಕ್ಕಳ ಪೋಷಕರನ್ನು ಕರೆದು ನಿಮ್ಮ ಮಗಳಿಗೆ ನರ್ಸ್ ಟ್ರೈನಿಂಗ್ ಇದೆ. ಅದನ್ನು ಮಾಡಿದರೆ ಮುಂದೆ ಬಹಳ ಸಹಾಯವಾಗುತ್ತದೆ ಹಾಗೂ ಸುಲಭವಾಗಿ ಕೆಲಸ ದೊರಕುತ್ತದೆ ಎಂದು ನಂಬಿಸಿ, ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರನ್ನು ಚಂದನ ಅವರ ಸರ್ಕಾರಿ ಕ್ವಾಟ್ರಸ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಪಾನೀಯದಲ್ಲಿ ಮತ್ತು ಬರುವ ಔಷಧಿ ನೀಡಿ ಮಕ್ಕಳು ಪ್ರಜ್ಞಾಶೂನ್ಯರಾದಾಗ ವಿನಯ್ ಕುಮಾರ್ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬ ವಿಚಾರವನ್ನು ಸುರೇಶ್ ಹೇಳಿದ್ದು ವಿನಯ್‌ಕುಮಾರ್ ಸಹ ಒಪ್ಪಿಕೊಂಡಿದ್ದಾನೆ. ಪೊಲೀಸ್ ಅಧಿಕಾರಿಗಳು ಮಕ್ಕಳನ್ನು ಪ್ರಶ್ನಿಸಿದಾಗ ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಅತ್ಯಾಚಾರ ನಡೆದಿರುವುದಾಗಿ ಮಾಹಿತಿ ಬೆಳಕಿಗೆ ಬಂದಿದೆ.

Advertisement

ಚಂದನಳನ್ನು ವಶಕ್ಕೆ ಪಡೆದು ಆಕೆ ನೀಡಿದ ಮಾಹಿತಿ ಆಧರಿಸಿ ಆನವಟ್ಟಿಯಲ್ಲಿ ವಿನಯ್ ಕುಮಾರ್ ಮತ್ತು ತೊಟ್ಟಿಮನೆ ಸುರೇಶ್‌ನನ್ನು ಬಂಧಿಸಿ ಮೂವರನ್ನೂ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಮೂರು ಜನರು ಈಗ ಚಿಕ್ಕಮಗಳೂರಿನ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ಇವರ ವಿರುದ್ಧ ಪೋಕ್ಸೋ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ ರಾವ್ ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಶಿವಕುಮಾರ್,ಕಡೂರು ಪಿಎಸ್‌ಐ ಧನಂಜಯ ಮತ್ತು ಸಿಬ್ಬಂದಿ ಇದ್ದರು.

ಇದನ್ನೂ ಓದಿ: Road Mishap: ದೆಹಲಿ-ಜೈಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next