Advertisement

ತುತ್ತು ಅನ್ನಕ್ಕೂ ಅಲೆಮಾರಿಗಳ ಪರದಾಟ!

01:32 PM Apr 10, 2020 | Naveen |

ಚಿಕ್ಕಮಗಳೂರು: ಕೋವಿಡ್-19  ವೈರಸ್‌ ಇಡೀ ದೇಶವನ್ನೇ ಕಂಗೆಡಿಸಿದ್ದು ಮಾತ್ರವಲ್ಲದೇ ಬಡವರ ತುತ್ತು ಅನ್ನವನ್ನೇ ಕಿತ್ತುಕೊಂಡಿದೆ.
ಕೋವಿಡ್-19  ಕಪಿಮುಷ್ಟಿಯಿಂದ ದೇಶ ರಕ್ಷಣೆ ಮಾಡಲು ಸರ್ಕಾರ ಲಾಕ್‌ಡೌನ್‌ ಮಾಡಿದೆ. ಅದರಂತೆ ಜಿಲ್ಲೆಯೂ ಸಂಪೂರ್ಣ ಲಾಕ್‌ಡೌನ್‌ ಆಗಿದ್ದು, ಹಳ್ಳಿ ಹಳ್ಳಿ ಅಲೆದು ವಸ್ತುಗಳನ್ನು ಮಾರಾಟ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದವರು ತುತ್ತು ಅನ್ನಕ್ಕೂ ಕೈಚಾಚುವಂತಾದ ದಾರುಣ ಸ್ಥಿತಿ ನಿರ್ಮಾಣವಾಗಿದೆ.

Advertisement

ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ರೈಲ್ವೆ ಟ್ರ್ಯಾಕ್‌ ಸಮೀಪದಲ್ಲಿ 13 ಕುಟುಂಬಗಳ 56 ಜನರು ಟೆಂಟ್‌ಗಳಲ್ಲಿ ವಾಸಿಸುತ್ತಿದ್ದು, ಗಾರೆ ಕೆಲಸ, ಭೂಪಟ ಚಾಟ್‌, ಬಲೂನು, ನೆಲ ಒರೆಸುವ ಮಾಫ್‌ ಮಾರಿಕೊಂಡು ಜೀವನ ಬಂಡಿ ಸಾಗಿಸುತ್ತಿದ್ದರು. ಇನ್ನೂ ಕೆಲವರು ಗ್ಯಾಸ್‌ ಸ್ಟೌವ್‌, ಗ್ರೈಂಡರ್ , ಮಿಕ್ಸಿ, ಫ್ಯಾನ್‌, ಕುಕ್ಕರ್‌ ರಿಪೇರಿ ಮಾಡಿಕೊಂಡು ಬಂದ ಅಲ್ಪ ಹಣದಲ್ಲೇ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಇವರ ಬದುಕನ್ನು ಕಿತ್ತುಕೊಂಡಿದ್ದು ದೇಶವನ್ನು ಕಾಡುತ್ತಿರುವ ಇದೇ ಕೋವಿಡ್-19 ವೈರಸ್‌… ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗುತ್ತಿದ್ದಂತೆ ಮಹಾಮಾರಿಯನ್ನು ತಡೆಯಲು ಮುಂದಾದ ಸರ್ಕಾರ ಏಕಾಏಕಿ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಿಬಿಟ್ಟಿತು. ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ, ಹಳ್ಳಿ ಹಳ್ಳಿಗಳಿಗೆ ಹೋಗಲಾರದೆ ಉಪವಾಸದಿಂದ ದಿನ ದೂಡುವಂತಾಯಿತು.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಂಗಮ್‌ನಗರದ ಗುಡಿಸಿಲಿನಲ್ಲಿ ಬದುಕುತ್ತಿದ್ದ ಈ ಕುಟುಂಬಗಳು ಕಳೆದ ಹದಿನೈದು ವರ್ಷಗಳ ಹಿಂದೇ ಚಿಕ್ಕಮಗಳೂರು ನರಿಗುಡ್ಡೇನಹಳ್ಳಿಯಲ್ಲಿ ಗುಡಿಸಿಲು ಕಟ್ಟಿಕೊಂಡರು. ನಂತರ ಅಲ್ಲಿಂದ ಕೆಎಸ್‌ಆರ್‌ಟಿಸಿ ಡಿಪೋ ಎದುರು ಟೆಂಟ್‌ ಹಾಕಿಕೊಂಡರು. ಸದ್ಯ ಹಿರೇಮಗಳೂರು ಖಾಲಿ ನಿವೇಶನದಲ್ಲಿ ಬಿಡಾರ ಹೂಡಿದ್ದು, 13 ಕುಟುಂಬದ 56 ಮಂದಿ ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.

ಇವರೆಲ್ಲ ಬಲೂನ್‌ ಮ್ಯಾಪ್‌, ಗಾರಿ ಕೆಲಸ ಮಾಡುತ್ತಿದ್ದರೆ, ಎರಡು ಕುಟುಂಬ ಸ್ಟೌವ್‌, ಮಿಕ್ಸಿ, ಕುಕ್ಕರ್‌ ರಿಪೇರಿ ಕಾಯಕ ಮಾಡುತ್ತಿದ್ದಾರೆ. ಬರಸಿಡಿಲಿನಂತೆ ಅಪ್ಪಳಿಸಿದ ಕೋವಿಡ್‌-19 ನಂತರ ಯಾರಾದರೂ ಊಟ ನೀಡುತ್ತಾರೋ ಎಂದು ಕಾದುಕುಳಿತ್ತಿದ್ದಾರೆ. ಇವರ ನೋವಿನ ಕತೆಗೆ ಸ್ಪಂದಿಸಿದ  ಕೆಲ ರಾಜಕೀಯ ಮುಖಂಡರು ಹಾಗೂ ಸಂಘಸಂಸ್ಥೆಗಳು ಎರಡು ಭಾರೀ ಆಹಾರ ಧಾನ್ಯಗಳನ್ನು ನೀಡಿದ್ದಾರೆ. ಅವರು ನೀಡಿರುವ ಆಹಾರ ಧಾನ್ಯಗಳು ಖಾಲಿಯಾಗಿದ್ದು, ಯಾರಾದರೂ ನಮ್ಮ ನೆರವಿಗೆ ಬರುತ್ತಾರೋ ಎಂದು ಕಾದುಕುಳಿತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಘ-ಸಂಸ್ಥೆಗಳು ಇವರ ನೆರವಿಗೆ ಧಾವಿಸಲಿ ಎಂಬುದು ನಮ್ಮ ಆಶಯವಾಗಿದೆ.

ಊಟಕ್ಕೂ ಕಷ್ಟ
ನಾವು ಐದು ಜನ ಇದ್ದೇವೆ. ಹಳ್ಳಿಗಳಲ್ಲಿ ಮಿಕ್ಸಿ, ಸ್ಟೌವ್‌ಗ್ರೈಂಡರ್ ರಿಪೇರಿ ಮಾಡಿಕೊಂಡು ಬಂದ 400-500 ರೂ.ನಲ್ಲಿ ಜೀನವ ನಡೆಸುತ್ತಿದ್ದೆವು. ಈಗ ಹಳ್ಳಿಗೆ ಹೋಗಲು ಆಗುತ್ತಿಲ್ಲ. ಹೆಂಡತಿ ಮಕ್ಕಳು ಟೆಂಟ್‌ನಲ್ಲಿ ಮಲಗುತ್ತಾರೆ. ನಾವು ಹಳೆಯ ವಾಹನದಲ್ಲಿ ಮಲಗುತ್ತಿದ್ದೇವೆ. ದುಡಿಮೆ ಇಲ್ಲದೇ ಊಟಕ್ಕೂ ಕಷ್ಟವಾಗಿದೆ ಎಂದು ರವಿ ಹೇಳಿದರು.

Advertisement

ಕೆಲವು ದಿನಗಳ ಹಿಂದೆ ಎರಡು ಭಾರೀ ಮೂರು ಕೆ.ಜಿ. ಅಕ್ಕಿ, ಅರ್ಧ ಕೆ.ಜಿ. ಬೆಳೆ, ಅರ್ಧ ಲೀಟರ್‌ ಎಣ್ಣೆ, ಉಪ್ಪು, ಖಾರದಪುಡಿ, ಸಾಂಬಾರುಪುಡಿ, ಅರಿಶಿನ ಪುಡಿ ಪ್ಯಾಕ್‌ ಕಿಟ್‌ ನೀಡಿದರು. ಅವೆಲ್ಲವೂ ಖಾಲಿಯಾಗಿದೆ. ಮಧ್ಯಾಹ್ನ ಒಂದೊತ್ತು ದಾನಿಗಳು ಪಲಾವ್‌ ನೀಡಿದ್ದರು, ಬೆಳಿಗ್ಗೆ ತಿಂಡಿ, ಸಂಜೆ ಊಟಕ್ಕೆ ಪರದಾಡುವಂತಾಗಿದೆ.
ಪರಶುರಾವ್‌

ಜಾತ್ರೆ, ಹಬ್ಬಹರಿದಿನಗಳಲ್ಲಿ ಬಲೂನ್‌ ಮಾರಿಕೊಂಡು ಜೀವನ ಮಾಡುತ್ತಿದ್ದೆವು. ಏನೋ ವೈರಸ್‌ ಬಂದು ಹಬ್ಬ, ಜಾತ್ರೆ ನಿಲ್ಲಿಸಿದ್ದಾರೆ. ಎಲ್ಲಾ ಬಂದ್‌ ಮಾಡಿರುವುದರಿಂದ ಹೊರಗಡೆ ಹೋಗಿ ವ್ಯಾಪಾರ ಮಾಡಲು ಆಗುತ್ತಿಲ್ಲ. ಯಾರಾದರೂ ಊಟಕ್ಕೆ ಕೊಟ್ಟರೆ ಸಾಕು.
ರಾಮಕ್ಕ

ಸಂದೀಪ್‌ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next